ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಹಬ್ಬಗಳ ಆಚರಣೆ ಗ್ರಾಮೀಣ ಜನರ ಒಗ್ಗಟ್ಟಿನ ಸಂಕೇತ. ಹಳ್ಳಿಗಳಲ್ಲಿ ಇಂದಿಗೂ ಸಡಗರ, ಉತ್ಸಾಹ ಹಾಗೆ ಉಳಿದಿದೆ ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.ತಾಲೂಕಿನ ಸಿಂದಘಟ್ಟ ಗ್ರಾಮದ ಶ್ರೀಲಕ್ಷ್ಮೀದೇವಿ ಅಮ್ಮನವರ ಕರಗ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಿ ದರ್ಶನ ಪಡೆದು ಮಾತನಾಡಿ, ಪ್ರತಿಯೊಬ್ಬರೂ ಮಾನವ ಧರ್ಮದ ನೆಲೆಗಟ್ಟಿನ ಮೇಲೆ ಬದುಕು ಸಾಗಿಸುತ್ತಿದ್ದಾರೆ. ವಿವಿಧ ಧರ್ಮಗಳು ನಾಡಿನಲ್ಲಿದ್ದರೂ ಕೊನೆಗೆ ಐಕ್ಯಸ್ಥಾನ ಮಾತ್ರ ಒಂದೇ ಆಗಿದೆ ಎಂದರು.
ನೊಂದ ಜೀವಗಳನ್ನು ಹಸನು ಮಾಡುವ ಶಕ್ತಿಯುಳ್ಳ ನಮ್ಮ ಸಂಸ್ಕೃತಿ ಅರ್ಥೈಸಿಕೊಳ್ಳಲು ವಿದೇಶಿಗರು ಒಲವು ತೋರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಜತೆಗೆ ಧರ್ಮದ ಜಾಗೃತಿ, ಮೌಲ್ಯ ಉಳಿಸಿ ಬೆಳೆಸಿಕೊಂಡು, ಬದುಕಿಗೆ ಅರ್ಥ ತಂದುಕೊಡುವಲ್ಲಿ ಪ್ರತಿಯೊಬ್ಬರೂ ಗಮನ ಹರಿಸಬೇಕಿದೆ ಎಂದರು.ಜಾತ್ರೆ, ಉತ್ಸವ, ಹಬ್ಬ ಹರಿದಿನಗಳು ನಮ್ಮ ಪರಂಪರೆಯ ಪ್ರತಿಬಿಂಬಗಳು. ಇವುಗಳಿಗೆ ಭಾರತೀಯ ಪರಂಪರೆಯಲ್ಲಿ ವಿಶೇಷ ಸ್ಥಾನವಿದೆ. ಇವುಗಳನ್ನು ಉಳಿಸಿ ನವ ತಲೆಮಾರಿಗೆ ಹಸ್ತಾಂತರಿಸಬೇಕು. ಈ ದಿಕ್ಕಿನಲ್ಲಿ ಸಿಂದಘಟ್ಟ ಗ್ರಾಮದಲ್ಲಿ ಹಬ್ಬ ಹರಿದಿನಗಳಿಗೆ ಪೂರಕವಾದ ಅಪರೂಪದ ಶ್ರೀಲಕ್ಷ್ಮೀದೇವಿ ಕರಗ ಅದ್ಧೂರಿಯಾಗಿ ಆಚರಿಸುತ್ತಿರುವುದು ಶ್ಲಾಘನಿಯ ಎಂದರು.
ಈ ವೇಳೆ ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು.
ಗ್ರಾಮದ ಮುಖಂಡರಾದ ಆನಂದ್, ರಾಜಣ್ಣ, ವೆಂಕಟೇಶ್, ಅರ್ಚಕ ದೇವರಾಜು ಪ್ರಕಾಶ್, ಕೆ.ಆರ್.ಪೇಟೆ ಲೋಕೇಶ್, ರವಿ, ಗಂಗಾಧರ್, ವೆಂಕಟೇಶ್, ಸತ್ಯಮೂರ್ತಿ, ಶ್ರವಣಬೆಳಗೊಳ, ಬಳ್ಳೆಕೆರೆ ದೇವಾಲಯದ ಭಕ್ತರು ಇದ್ದರು.
ಪ್ರತಿ ಕ್ವಿಂಟಲ್ ರಾಗಿಗೆ ಮೂರು ಕೆಜಿ ವೇಸ್ಟೇಜ್ ಕಳೆದು ರೈತರಿಗೆ ಭಾರೀ ವಂಚನೆ: ರೈತ ಮುಖಂಡರ ಆಕ್ರೋಶಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಪಟ್ಟಣದ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರದಲ್ಲಿ ನಿಯಮಕ್ಕೆ ವಿರುದ್ಧವಾಗಿ ರೈತರ ಪ್ರತಿ ಕ್ಷಿಂಟಲ್ ರಾಗಿಗೆ ಮೂರು ಕೆ.ಜಿ ವೇಸ್ಟೇಜ್ ಕಳೆಯಲಾಗುತ್ತಿದೆ. ಇದರಿಂದ ರೈತರಿಗೆ ಭಾರೀ ಪ್ರಮಾಣದಲ್ಲಿ ವಂಚನೆ ಮಾಡಲಾಗುತ್ತಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಮೂಲಕ ಸರ್ಕಾರ ಬೆಂಬಲ ಬೆಲೆಯಡಿ ರಾಗಿ ಖರೀದಿ ಮಾಡುತ್ತಿತ್ತು. ಪ್ರಸಕ್ತ ಸಾಲಿನಲ್ಲಿ ರಾಗಿ ಖರೀದಿ ಪ್ರಕ್ರಿಯೆಯನ್ನು ರಾಜ್ಯ ಆಹಾರ ನಿಗಮದ (ಕೆ.ಎಸ್.ಎಫ್.ಸಿ) ಮೂಲಕ ಆರಂಭಿಸಿದೆ. ಪ್ರತಿ ಕ್ಷಿಂಟಲ್ ರಾಗಿಗೆ 4886 ರು. ಬೆಲೆ ನಿಗದಿ ಪಡಿಸಿದೆ. ಈಗಾಗಲೇ 2362 ನೋಂದಾಯಿತ ರೈತರ ಮೂಲಕ 53,998 ಕ್ಷಿಂಟಲ್ ರಾಗಿ ಖರೀದಿಸಲಾಗಿದೆ.ರಾಗಿ ತುಂಬಿದ ಚೀಲ ಮತ್ತು ಎ.ಪಿ.ಎಂ.ಸಿಯಿಂದ ಗೋಡನ್‌ಗೆ ಸಾಗಿಸಲು ತಗಲುವ ಸಾಗಣೆ ವೆಚ್ಚವನ್ನು ಪ್ರತ್ಯೇಕ ಏಜೆನ್ಸಿ ಮೂಲಕ ಸರ್ಕಾರವೇ ನಿರ್ವಹಿಸುತ್ತಿದೆ. ಖರೀದಿ ಕೇಂದ್ರದಲ್ಲಿ ಅಧಿಕಾರಿಗಳು ರೈತರ ರಾಗಿಯನ್ನು ಕ್ಷಿಂಟಲ್ ಲೆಕ್ಕದಲ್ಲಿ ಖರೀದಿ ಮಾಡಬೇಕೆ ವಿನಹಃ ತೂಕದಲ್ಲಿ ಯಾವುದೇ ವೇಸ್ಟೇಜ್ ಕಳೆಯುವಂತಿಲ್ಲ.ಆದರೆ, ಪಟ್ಟಣದ ರಾಗಿ ಖರೀದಿ ಕೇಂದ್ರದಲ್ಲಿ ರೈತರ ಪ್ರತಿ ಕ್ಷಿಂಟಲ್ ರಾಗಿಗೆ 3 ಕೆ.ಜಿ.ವೇಸ್ಟೇಜ್ ಕಳೆದು ರೈತರಿಗೆ ಪ್ರತಿ ಕ್ಷಿಂಟಲ್ ರಾಗಿಗೆ 146.58 ಪೈಸೆ ವಂಚಿಸಲಾಗುತ್ತಿದೆ. ಇದುವರೆಗೆ ರೈತರು ಖರೀದಿ ಕೇಂದ್ರಕ್ಕೆ ಪೂರೈಕೆ ಮಾಡಿದ ರಾಗಿಯನ್ನು ಲೆಕ್ಕ ಹಾಕಿದರೆ ಖರೀದಿ ಕೆಂದ್ರದ ಅಧಿಕಾರಿಗಳು ರೈತರಿಂದ ಒಟ್ಟು 26,38,342 ರು. 28 ಪೈಸೆಯಷ್ಟು ಹಣ ದೋಚಿದ್ದಾರೆ.ನಿಯಮ ಬಾಹಿರವಾಗಿ ರೈತರ ಸುಲಿಗೆಯನ್ನು ಖಂಡಿಸಿರುವ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಈ ವಂಚನೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ವಂಚನೆ ಹಣವನ್ನು ಖರೀದಿ ಕೇಂದ್ರದ ಸಿಬ್ಬಂದಿ ನಿತ್ಯ ಹಂಚಿಕೊಳ್ಳುತ್ತಿದ್ದಾರೆ. ಈ ಅಕ್ರಮಕ್ಕೆ ತಕ್ಷಣವೇ ತೆರೆ ಎಳೆಯಬೇಕು ಎಂದು ಆಗ್ರಹಿಸಿದ್ದಾರೆ.
ಯಾವುದೇ ವೇಸ್ಟೇಜ್ ಅಥವಾ ಚೀಲದ ಲೆಕ್ಕ ಕಳೆಯದೆ ರೈತರು ಪೂರೈಕೆ ಮಾಡಿದ ಪೂರ್ಣ ಪ್ರಮಾಣದ ರಾಗಿ ತೂಕದ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ವೇಸ್ಟೇಜ್ ಹೆಸರಿನಲ್ಲಿ ಖರೀದಿ ಕೇಂದ್ರದ ಅಧಿಕಾರಿಗಳು ನಡೆಸಿರುವ ಭ್ರಷ್ಟಾಚಾರದ ವಿರುದ್ಧ ಕ್ರಮ ಜರುಗಿಸಿ ರೈತರ ಹಣವನ್ನು ಹಿಂತಿರುಗಿಸದಿದ್ದರೆ ರೈತಸಂಘ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.ಖರೀದಿ ಕೇಂದ್ರದ ಅಧಿಕಾರಿ ಲೋಕೇಶ್ ಮಾತನಾಡಿ, ನಾವು ಪ್ರತಿ ಕ್ಷಿಂಟಲ್‌ಗೆ ಮೂರು ಕೆ.ಜಿ.ಕಳೆಯುತ್ತಿಲ್ಲ. ನಿಯಮಾನುಸಾರ ಯಾವುದೇ ವೇಸ್ಟೇಜ್ ಕಳೆಯುವಂತಿಲ್ಲ. ಆದರೆ, ನಾವು ಖರೀದಿಸಿದ ರಾಗಿ ಗೋಡನ್ ನಲ್ಲಿ ಇಟ್ಟ ನಂತರ ಒಂದಷ್ಟು ತೂಕ ಕಳೆದು ಕೊಳ್ಳುತ್ತದೆ. ಅದಕ್ಕಾಗಿ ನಾವು ಖರೀದಿಸಿದ ಪ್ರತಿ ಕ್ಷಿಂಟಲ್ ರಾಗಿಗೆ ಅರ್ಧ ಕೆ.ಜಿ ಯಷ್ಟು ಮಾತ್ರ ವೇಸ್ಟೇಜ್ ಕಳೆಯುತ್ತಿದ್ದೇವೆ ಎಂದಿದ್ದಾರೆ.ಸರ್ಕಾರಿ ನಿಯಮಾವಳಿಯಂತೆ ಚೀಲ ಮತ್ತಿತರ ಹೆಸರಿನಲ್ಲಿ ರೈತರಿಗೆ ತೂಕದಲ್ಲಿ ಯಾವುದೇ ವಂಚನೆ ಮಾಡುವಂತಿಲ್ಲ. ಖರೀದಿ ಕೇಂದ್ರದಲ್ಲಿ ವೇಸ್ಟೇಜ್ ಕಳೆಯುತ್ತಿದ್ದರೆ ಅದು ಅಕ್ರಮ. ಈ ಬಗ್ಗೆ ರಾಜ್ಯ ರೈತಸಂಘ ನನಗೆ ಮಾಹಿತಿ ನೀಡಿದೆ. ತಕ್ಷಣವೇ ಈ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಿ ಮುಂದಿನ ಕ್ರಮ ಜರುಗಿಸುವುದಾಗಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಪತ್ರಿಕೆಗೆ ತಿಳಿಸಿದ್ದಾರೆ.