ಕನ್ನಡಪ್ರಭ ವಾರ್ತೆ ವಿಜಯಪುರ

‘ಹರಿಹರ ಪಂಚಮಸಾಲಿ ಪೀಠಕ್ಕೂ, ಮನಗೂಳಿ ಹಿರೇಮಠಕ್ಕೂ ಮೊದಲಿನಿಂದಲೂ ಅವಿನಾಭಾವ ಸಂಬಂಧವಿದೆ. ಆದರೆ, ಹರಿಹರ ಪಂಚಮಸಾಲಿ ಪೀಠವೇರಲು ಈವರೆಗೂ ನನಗೆ ಯಾವುದೇ ಆಹ್ವಾನ ಬಂದಿಲ್ಲ. ಆಹ್ವಾನ ಬಂದರೆ ವಿಚಾರ ಮಾಡುತ್ತೇನೆ’ ಎಂದು ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು ತಿಳಿಸಿದ್ದಾರೆ. ಆ ಮೂಲಕ ಹರಿಹರ ಪೀಠಕ್ಕೆ ಹೊಸ ಸ್ವಾಮೀಜಿ ನೇಮಕ ಪ್ರಕ್ರಿಯೆ ಕುರಿತ ವದಂತಿಗಳಿಗೆ ಪುಷ್ಠಿ ಸಿಕ್ಕಿದೆ.

ಹರಿಹರ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಸ್ವಾಮೀಜಿ ಹೆಸರು ಮುನ್ನೆಲೆಗೆ ಬಂದ ವಿಚಾರವಾಗಿ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಿಹರ ಪೀಠದ ಪ್ರಥಮ ಜಗದ್ಗುರು ಮಹಾಂತ ಸ್ವಾಮೀಜಿ ನನಗೆ ಅಯ್ಯಾಚಾರ ಮಾಡಿ ಮನಗೂಳಿ ಹಿರೇಮಠಕ್ಕೆ ನೇಮಕ ಮಾಡಿದ್ದರು. ಮಹಾಂತ ಶ್ರೀಗಳು ಅಶರೀರವಾಣಿಯಲ್ಲಿ ಹೇಳಿದಂತೆ ಮುಂದಿನ ನಿರ್ಧಾರ ಮಾಡಲಿದ್ದು, ಮಹಾಂತ ಶ್ರೀಗಳು ಏನು ಆಶೀರ್ವಾದ ಮಾಡುತ್ತಾರೆ ನೋಡೋಣ. ನಿನ್ನೆ ಹರಿಹರದಲ್ಲಿ ನಡೆದ ಸಭೆಯಲ್ಲಿ ನಾನು ಕೂಡ ಭಾಗಿಯಾಗಿದ್ದೆ ಎಂದರು.ಪೀಠದ ಗೊಂದಲಕ್ಕೆ ಆದಷ್ಟು ಬೇಗ ತೆರೆ ಬೀಳಬೇಕು. ರಾಜ್ಯದಲ್ಲಿ ಅತಿ ದೊಡ್ಡ ಸಮುದಾಯ ಪಂಚಮಸಾಲಿ ಸಮುದಾಯ. ಪಂಚಮಸಾಲಿ ಸಮುದಾಯದ್ದು ಏನು ಗದ್ದಲ ಎಂದು ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ವಚನಾನಂದ ಶ್ರೀಗಳಿಗೆ ನಾನು ಏನೂ ಹೇಳೋದಿಲ್ಲ, ಟ್ರಸ್ಟಿಗಳು ಅವರು ಸೇರಿ ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ. ಜವಾಬ್ದಾರಿ ಕೊಡುತ್ತೇವೆ ಎಂದರೆ ನಾನು ಅದರ ಬಗ್ಗೆ ವಿಚಾರ ಮಾಡುತ್ತೇನೆ. ಭಕ್ತರು ಏನು ಹೇಳುತ್ತಾರೋ, ಮಹಾಂತ ಶ್ರೀಗಳು ಕನಸಿನಲ್ಲಿ ಬಂದು ಏನು ಅಭಿಪ್ರಾಯ ಹೇಳುತ್ತಾರೋ ನೋಡಬೇಕು ಎಂದು ಹೇಳಿದರು.

ಕೋಟ್.....

ಮನಗೂಳಿ ಮಠಕ್ಕೂ, ಹರಿಹರ ಪೀಠಕ್ಕೂ ಮೊದಲಿನಿಂದಲೂ ಸಂಪರ್ಕವಿದ್ದು, ನಾವು ಸಹ ಅಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಸಂಗನಬಸವ ಸ್ವಾಮೀಜಿಗಳು ಮಹಾಂತ ಶ್ರೀಗಳ ಕನಸಿನಲ್ಲಿ ಬಂದು ನಮ್ಮನ್ನು ಇಲ್ಲಿಗೆ ನೇಮಿಸುವಂತೆ ಸಂದೇಶ ನೀಡಿದ್ದಾಗ ಮಹಾಂತ ಶ್ರೀಗಳು ನಮ್ಮನ್ನು ಮನಗೂಳಿ ಮಠಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅದರಂತೆ ಈಗ ಲಿಂಗೈಕ್ಯ ಮಹಾಂತ ಶ್ರೀಗಳು ಕನಸಿನಲ್ಲಿ ಬಂದು ಸಂದೇಶವೇನಾದರೂ ಕೊಟ್ಟರೆ ಭಕ್ತರ ಹಾಗೂ ಸಮಾಜದ ಎಲ್ಲರ ಅಭಿಪ್ರಾಯ ಪಡೆದು ಮುಂದುವರೆಯುತ್ತೇವೆ.


-ಅಭಿನವ ಸಂಗನಬಸವ ಶಿವಾಚಾರ್ಯರು, ಹಿರೇಮಠ, ಮನಗೂಳಿ.