ಜಿಲ್ಲೆಯ ಕುಡುತಿನಿಯ ಜಿಂದಾಲ್ ಕಂಪನಿಗೆ ಅಕ್ರಮವಾಗಿ ಭೂಮಿ ಮಾರಾಟ ಮಾಡಿದ್ದನ್ನು ವಿರೋಧಿಸಿ ಸೋಮವಾರ ಪ್ರತಿಭಟನೆ ನಡೆಸಿದ ಭೂಸಂತ್ರಸ್ತ ರೈತರು ಹಾಗೂ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ, ಕಾರ್ಮಿಕ, ದಲಿತ, ಕನ್ನಡಪರ ಹಾಗೂ ಪ್ರಗತಿಪರ ಸಂಘಟನೆಗಳ ನಾಯಕರನ್ನು ಬಂಧಿಸಿದ್ದನ್ನು ಸಿಪಿಎಂ ಪಕ್ಷದ ಮುಖಂಡರು ಖಂಡಿಸಿದ್ದಾರೆ.
ಸಂಡೂರು: ಜಿಲ್ಲೆಯ ಕುಡುತಿನಿಯ ಜಿಂದಾಲ್ ಕಂಪನಿಗೆ ಅಕ್ರಮವಾಗಿ ಭೂಮಿ ಮಾರಾಟ ಮಾಡಿದ್ದನ್ನು ವಿರೋಧಿಸಿ ಸೋಮವಾರ ಪ್ರತಿಭಟನೆ ನಡೆಸಿದ ಭೂಸಂತ್ರಸ್ತ ರೈತರು ಹಾಗೂ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ, ಕಾರ್ಮಿಕ, ದಲಿತ, ಕನ್ನಡಪರ ಹಾಗೂ ಪ್ರಗತಿಪರ ಸಂಘಟನೆಗಳ ನಾಯಕರನ್ನು ಬಂಧಿಸಿದ್ದನ್ನು ಸಿಪಿಎಂ ಪಕ್ಷದ ಮುಖಂಡರು ಖಂಡಿಸಿದ್ದಾರೆ.
ಸಿಪಿಎಂ ಮುಖಂಡರು ಮಂಗಳವಾರ ತೋರಣಗಲ್ಲಿನ ನಾಡ ಕಚೇರಿಯ ಉಪ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಜೆ.ಎಂ. ಚನ್ನಬಸಯ್ಯ, ಕೆಐಎಡಿಬಿಯು ಅರ್ಸೆಲರ್ ಮಿತ್ತೆಲ್ ಕಂಪನಿ ಹಾಗೂ ಇತರೆ ಕಂಪನಿಗಳಿಗಾಗಿ 2010-12ರಲ್ಲಿ 5365 ಎಕರೆಗೂ ಅಧಿಕ ಜಮೀನುಗಳನ್ನು ಬಲವಂತವಾಗಿ ಭೂ ಸ್ವಾಧೀನ ಮಾಡಿಕೊಂಡಿದೆ. 15 ವರ್ಷ ಕಳೆದರೂ, ಕೈಗಾರಿಕೆಗಳನ್ನು ಸ್ಥಾಪಿಸದೆ, ರೈತರ ಜಮೀನುಗಳನ್ನು ತುಂಡು ಭೂಮಿಗಳನ್ನಾಗಿ ಪರಿವರ್ತಿಸಿ ಅಕ್ರಮವಾಗಿ ರಿಯಲ್ ಎಸ್ಟೇಟ್ ದಂಧೆಯಂತೆ ಮಾರಾಟ ಮಾಡುತ್ತಿದೆ. ತಮ್ಮ ಭೂಮಿಗಳಿಗೆ ನ್ಯಾಯೋಚಿತ ಪರಿಹಾರಕ್ಕಾಗಿ ಸಂತ್ರಸ್ತ ರೈತ ಕುಟುಂಬಗಳು 1228 ದಿನಗಳಿಂದ ಅನಿರ್ದಿಷ್ಟ ಧರಣಿ ನಡೆಸುತ್ತಿವೆ. ಜಿಲ್ಲಾಡಳಿತವೂ ಭೂ ಸ್ವಾಧೀನದ ಬೆಲೆ ನಿಗದಿಯಲ್ಲಿ ಆಗಿರುವ ಅನ್ಯಾಯವನ್ನು ಒಪ್ಪಿಕೊಂಡು ನ್ಯಾಯಾಲಯಕ್ಕೆ ದೃಢೀಕರಿಸಿದೆ ಎಂದರು.
ನ್ಯಾಯಾಲಯದಲ್ಲಿ ದಾವೆ ಹೂಡಿದ ಈ ಪ್ರದೇಶದ ರೈತರಿಗೆ ಎಕರೆಗೆ ₹1.30 ಕೋಟಿ ವರೆಗೆ ಪರಿಹಾರ ನೀಡಿದೆ. ಸುಪ್ರೀಂಕೋರ್ಟ್ ತೀರ್ಪು ಎಲ್ಲ ರೈತರಿಗೂ ಅನ್ವಯಿಸುವಂತೆ ಒತ್ತಾಯಿಸಿ ಭೂಸಂತ್ರಸ್ತ ರೈತರು ಅನಿರ್ದಿಷ್ಟ ಹೋರಾಟ ನಡೆಸುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಹಲವಾರು ಮಂತ್ರಿಗಳು, ಜನಪ್ರತಿನಿಧಿಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ನೀಡಿರುವ ಭರವಸೆಯಂತೆ ನಡೆದುಕೊಳ್ಳದೆ ವಂಚಿಸಿದ್ದಾರೆ ಎಂದು ಟೀಕಿಸಿದರು.ರೈತರು, ಕಾರ್ಮಿಕರನ್ನು ಬಂಧನ ಮಾಡಿರುವ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು. ಹೋರಾಟಗಾರರ ಮೇಲೆ ಯಾವುದೇ ಕೇಸ್ ದಾಖಲಿಸಬಾರದು. ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ರೈತರಿಗಾದ ಅನ್ಯಾನವನ್ನು ಸರಿಪಡಿಸಬೇಕು. ಕೆಐಎಡಿಬಿ ಸಂಸ್ಥೆಯು ಜಿಂದಾಲ್ ಕಂಪನಿ ಜೊತೆ ಮಾಡಿಕೊಂಡಿರುವ ಅಕ್ರಮವಾದ ಜಮೀನು ಪರಭಾರೆಯನ್ನು ರದ್ದುಪಡಿಸಬೇಕು. ಸುಪ್ರೀಂಕೋರ್ಟ್ ತೀರ್ಪಿನಂತೆ ಭೂ ಸ್ವಾಧೀನದ ಎಲ್ಲ ರೈತರಿಗೆ ಪರಿಹಾರ ಒದಗಿಸಿ, ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಇಲ್ಲವೇ ರೈತರಿಗೆ ಅವರ ಭೂಮಿಯನ್ನು ವಾಪಸ್ ನೀಡಬೇಕು. ಇಲ್ಲವೇ ಯಾವುದಾದರೂ ಕಂಪನಿಗೆ ಜಮೀನು ನೀಡುವುದಾದಲ್ಲಿ ರೈತರೊಂದಿಗೆ ಚರ್ಚಿಸಿ, ಇಂದಿನ ಭೂ ಬೆಲೆ ನಿಗದಿ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಸಿಪಿಎಂ ಮುಖಂಡರಾದ ಎನ್. ಶಂಕ್ರಣ್ಣ, ಶಿವಾರೆಡ್ಡಿ, ಎ. ಸ್ವಾಮಿ, ಪಂಪನಗೌಡ, ಎಸ್. ಕಾಲುಬಾ, ವಿ. ದೇವಣ್ಣ, ಸಿದ್ದಪ್ಪ, ಬಂಡಿ ಇಮಾಮ್ ಸಾಬ್, ಅಂಚೆ ಶಂಕರಪ್ಪ, ದೊಡ್ಡಬಸಪ್ಪ, ಆರ್.ಎಸ್. ಮುರುಗೇಶ್ ಮುಂತದವರು ಉಪಸ್ಥಿತರಿದ್ದರು.