ಕುಂದಗೋಳ:
ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಸ್ತ್ರೀ ರೋಗ, ಅರವಳಿಕೆ, ಮಕ್ಕಳ ತಜ್ಞರು ಇರುವಂತೆ ಮರು ಹೊಂದಾಣಿಕೆಯಲ್ಲಿ ಕ್ರಮಕೈಗೊಳ್ಳುತ್ತಿದೆ. ಈ ಮೂಲಕ ಉತ್ತಮ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.ಅವರು ತಾಲೂಕಿನ ಇಂಗಳಗಿ ಗ್ರಾಮದಲ್ಲಿನ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ತಾರತಮ್ಯ ಇಲ್ಲ. ಜನರಿಗೆ ಸೇವೆ ನೀಡಲು ಅರ್ಹತೆ ಆಧಾರದಲ್ಲಿ ಅನುದಾನ ನೀಡುವ ಕಾರ್ಯ ಮಾಡುತ್ತಿದ್ದೇವೆ. ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಾರ್ಯ ಬಹಳ ಮುಖ್ಯವಾಗಿದೆ. ನಮ್ಮ ಸರ್ಕಾರ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಕಾರ್ಯ ಮಾಡುತ್ತಿದೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಈ ಮೊದಲು ದೇಶದಲ್ಲಿ 350 ವೈದ್ಯಕೀಯ ಶಿಕ್ಷಣ ಕೇಂದ್ರಗಳಿದ್ದವು. ಈಗ 700 ವೈದ್ಯಕೀಯ ಶಿಕ್ಷಣ ಕೇಂದ್ರಗಳಿದ್ದರೂ ಸಹ ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಕೊರತೆ ಕಾಡುತ್ತಿರುವುದು ವಿಷಾದನೀಯ ಸಂಗತಿ. ಜನರಿಗೆ ಆರೋಗ್ಯ ಮತ್ತು ಶಿಕ್ಷಣ ಮುಖ್ಯವಾಗಿದ್ದು, ಕೇಂದ್ರ ಸರ್ಕಾರದ ಅನುದಾನ ಜತೆಗೆ ರಾಜ್ಯ ಸರ್ಕಾರಗಳ ಅನುದಾನದಲ್ಲಿ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಆದರೆ, ಕೆಲವೆಡೆ ವೈದ್ಯರು ಔಷಧಿಯನ್ನು ಬೇರೆಡೆ ಬರೆದು ಕೊಡುತ್ತಿದ್ದು, ಔಷಧಿ ಕೊರತೆ ಬಗ್ಗೆ ಗಮನ ಹರಿಸುವಂತೆ ತಿಳಿಸಿದರು.ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಸಚಿವರು ಕ್ಷೇತ್ರದ ಕಮಡೊಳ್ಳಿ ಪಿಎಚ್‌ಒ ಕಟ್ಟಡ ನಿರ್ಮಾಣಕ್ಕೆ ₹3.70 ಕೋಟಿ, ತಾಲೂಕು ಆಸ್ಪತ್ರೆಗೆ ₹ 1 ಕೋಟಿ, ಪಿಎಚ್‌ಒಗೆ ₹ 90 ಲಕ್ಷ ಅನುದಾನ ನೀಡಿದ್ದಾರೆ. ತಾಲೂಕು ಆಸ್ಪತ್ರೆಗೆ ಡೈನಾಕಾಲಿಸ್ಟ್, ರೇಡಿಯೊಲಾಜಿಸ್ಟ್ ಕೊರತೆಯಿದ್ದು ಕೂಡಲೇ ವೈದ್ಯರನ್ನು ನೇಮಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.
ಇದೇ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಕ್ಕೆ ಭೂದಾನ ನೀಡಿದ ದಿ. ಶಂಕ್ರಪ್ಪಜ್ಜನವರ ಯಲಿವಾಳ, ದಿ. ಶಿವಮ್ಮನವರ ಯಲಿವಾಳ ಕುಟುಂಬದವರಿಗೆ ಸನ್ಮಾನಿಸಲಾಯಿತು. ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮ್‌ಪೀರ ಖಾದ್ರಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸತೀಶ್ ಕೊಬ್ಬಯ್ಯನವರ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಜಿಪಂ ಮಾಜಿ ಸದಸ್ಯ ಬರ್ಮಣ್ಣ ಮುಗಳಿ, ಉಮೇಶ ಹೆಬಸೂರ, ಭರತ್ ಬೊಮ್ಮಾಯಿ, ಸಿ.ವೈ. ಹಿರೇಗೌಡ್ರು, ಅನಿಲಕುಮಾರ್ ಪಾಟೀಲ, ಶಿವಾನಂದ ಬೆಂತೂರ, ಡಿಎಚ್‌ಒ ಎಸ್.ಎಂ. ಹೊನಕೇರಿ, ಟಿಎಚ್‌ಒ ಮಂಜುನಾಥ ಸೊಪ್ಪಿನಮಠ, ವೀರೇಶ್ ಅಂಗಡಿ ಸೇರಿದಂತೆ ಹಲವರಿದ್ದರು.