ಕುಂದಗೋಳ:
ತಾಲೂಕಿನ ಬೆನಕನಹಳ್ಳಿ, ಸಂಶಿ, ಕಮಡೊಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಪಿಂಚಣಿ, ನಮ್ಮ ಹೊಲ ನಮ್ಮ ರಸ್ತೆ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಜನರ ಅಹವಾಲುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸ್ಪಂದಿಸಿದರು. ಸಾರ್ವಜನಿಕರು ಸಲ್ಲಿಸಿದ 151 ಅಹವಾಲುಗಳಿಗೆ ಕಿವಿಯಾದರು.ಪಟ್ಟಣದ ಸವಾಯಿ ಗಂಧರ್ವರ ಸ್ಮಾರಕ ಭವನದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಜನ ಸಂಪರ್ಕ ಕಾರ್ಯಕ್ರಮದಲ್ಲಿ, ಕುಡಿಯುವ ನೀರಿನ ಕೊರತೆ, ರಸ್ತೆ ದುರಸ್ತಿ, ಒಳಚರಂಡಿ ವ್ಯವಸ್ಥೆ, ವಿದ್ಯುತ್ ವ್ಯತ್ಯಯ, ಆರೋಗ್ಯ ಸೇವೆಗಳ ಅಭಾವ, ಶಾಲಾ ಸೌಲಭ್ಯಗಳ ಕೊರತೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಸಾರ್ವಜನಿಕರು ಮನವಿ ಮಾಡಿದರು. ಕೆಲವು ತುರ್ತು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಯಿತು. ಕೆಲವು ಸಮಸ್ಯೆಗಳನ್ನು ದಾಖಲಿಸಿ, ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ ನಿಗದಿತ ಅವಧಿಯಲ್ಲಿ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
151 ಅಹವಾಲು ಸಲ್ಲಿಕೆ:ಕಂದಾಯ ಇಲಾಖೆಗೆ ಸಂಬಂಧಿಸಿದ 48, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 33, ನಗರಾಭಿವೃದ್ಧಿ ಇಲಾಖೆಯಲ್ಲಿ 12, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ 10, ಇಂಧನ ಇಲಾಖೆಯಲ್ಲಿ 6, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ದಿವ್ಯಾಂಗರ ಸಬಲೀಕರಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಸತಿ ಮತ್ತು ಕಾರ್ಮಿಕ ಇಲಾಖೆಗಳಲ್ಲಿ 5 ಸೇರಿದಂತೆ ಒಟ್ಟು 151 ಅಹವಾಲು ಸಲ್ಲಿಕೆಯಾದವು. ಸಾರ್ವಜನಿಕರಿಂದ ಸಲ್ಲಿಸಲ್ಪಟ್ಟ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸಲಾಯಿತು.
ವಿಕಲಚೇತನರ ಬಳಿ ತೆರಳಿದ ಸಚಿವರು ಅವರ ಸಮಸ್ಯೆ ಆಲಿಸಿ ಕೂಡಲೇ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಧನ ಸಹಾಯ ಒದಗಿಸುವ ಭರವಸೆ ನೀಡಿದರು.
ಶಾಸಕ ಎಂ.ಆರ್. ಪಾಟೀಲ, ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾಧಿಕಾರಿ ಸ್ನೇಹಲ್ ಆರ್, ಎಸ್ಪಿ ಗುಂಜನ್ ಆರ್ಯ, ಹು-ಧಾ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಎಸಿ ಶಾಲಂ ಹುಸೇನ, ತಹಸೀಲ್ದಾರ್ ರಾಜು ಮಾವರಕರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಕುಂದಗೋಳ ತಾಲೂಕು ಮಟ್ಟದ ಅಧಿಕಾರಿಗಳು, ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.
ರೈತನಿಗೆ ಸಚಿವ ಸಮಾಧಾನ!ಅಹವಾಲು ಸಲ್ಲಿಕೆ ವೇಳೆ ಮೈಕ್ ವ್ಯವಸ್ಥೆ ಇಲ್ಲದಿರುವುದರಿಂದ ಸಂಶಿ ಗ್ರಾಮದ ರೈತ ಮುಖಂಡ ಪರಮೇಶಪ್ಪ ನಾಯ್ಕರ್ ಸಭೆಯಲ್ಲೇ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಸಮಸ್ಯೆ ಹೇಗೆ ತಿಳಿಸಬೇಕು. ಅರ್ಜಿ ತೆಗೆದುಕೊಳ್ಳಲು ಸರಿಯಾದ ವ್ಯವಸ್ಥೆ ಮಾಡದೇ ಅಧಿಕಾರಿಗಳು ಏನು ಮಾಡುತ್ತಿದ್ದಾರೆ?. ಶಾಸಕರು, ಸಚಿವರು ಈ ಕುರಿತು ಏಕೆ ಗಮನಿಸಿಲ್ಲ. ಅಧಿಕಾರಿಗಳನ್ನೇಕೆ ಪ್ರಶ್ನಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ಈ ಹಿಂದೆ ನೀಡಿದ ಅರ್ಜಿಗಳಿಗೂ ಈ ವರೆಗೂ ಸ್ಪಂದಿಸಿಲ್ಲವೆಂದು ಪ್ರಶ್ನಿಸಿದರು. ಬಳಿಕ ಸಚಿವರು ರೈತನನ್ನು ಸಮಾಧಾನಪಡಿಸಿ, "ಸಮಸ್ಯೆ ಏನು? ಕೂಗಾಡುವುದು ಏಕೆ? ವೇದಿಕೆ ಮೇಲೆ ಬಂದು ಹೇಳು " ಎಂದು ಕರೆದರು. ನಂತರ ರೈತ ವೇದಿಕೆ ಮೇಲೆ ಬಂದು ತನ್ನ ಸಮಸ್ಯೆ ಹೇಳಿಕೊಂಡ. ಸಮಾಧಾನಚಿತ್ತವಾಗಿ ಅಹವಾಲು ಆಲಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.