ಕನ್ನಡಪ್ರಭ ವಾರ್ತೆ ಮಂಡ್ಯ

ಸೇವಾ ಮನೋಭಾವ ಮತ್ತು ನಾಯಕತ್ವ ಗುಣ ಹೆಚ್ಚಿಸಿವುದೇ ಅಲಯನ್ಸ್ ಸಂಸ್ಥೆ ಧ್ಯೇಯ ಎಂದು ಮಾಂಡವ್ಯ ನಗರ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಬಿ.ಎಸ್.ಶಿವಕುಮಾರ್ ಹೇಳಿದರು.

ನಗರದ ಬಂದಿಗೌಡ ಬಡಾವಣೆಯಲ್ಲಿರುವ ಅಸೋಷಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ಜಿಲ್ಲಾ ಶಾಖೆ ಕಚೇರಿಯಲ್ಲಿ ಮಾಂಡವ್ಯ ನಗರ ಅಲಯನ್ಸ್ ಸಂಸ್ಥೆ ಆಯೋಜಿಸಿದ್ದ ಪದಾಧಿಕಾರಿಗಳ ಪ್ರತಿಜ್ಞಾ ವಿಧಿ ಬೋಧನೆ ಮತ್ತು ನೂತನ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಸೋಷಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ಭಾರತದಲ್ಲಿ ಹುಟ್ಟಿ ವಿಶ್ವದೆಲ್ಲೆಡೆ ಸದಸ್ಯತ್ವ ಹೊಂದಿದೆ. ಸೇವಾ ಮನೋಭಾವ ಮತ್ತು ನಾಯಕತ್ವ ಗುಣ ಬೆಳೆಸುತ್ತಿದೆ. ಕ್ಯಾನ್ಸರ್ ನಿರ್ಮೂಲನೆ ಮತ್ತು ವಯೋವೃದ್ಧರ ಸೇವೆಗೆ ಹೆಚ್ಚು ಮಹತ್ವ ನೀಡುತ್ತಿದೆ ಎಂದು ತಿಳಿಸಿದರು.

ಸಂಸ್ಥೆಯ ನಿರ್ದೇಶಕ ಡಾ.ನಾಗರಾಜು ವಿ.ಭೈರಿ, ಪ್ರಸ್ತುತ ದಿನಗಳಲ್ಲಿ ಅಲಯನ್ಸ್ ಸಂಸ್ಥೆ ವಿಶ್ವಾದ್ಯಂತ ಕ್ಯಾನ್ಸರ್ ರೋಗ ತಪಾಸಣೆಗೆ ಒತ್ತಾಯಿಸುತ್ತಿದೆ. ಮೂರನೇ ಹಂತ ತಲುಪಿದಾಗ ಕ್ಯಾನ್ಸರ್ ಲಕ್ಷಣ ಪತ್ತೆಯಾಗುತ್ತಿದೆ. ಆಗ ಬದುಕಲು ಸಾಧ್ಯವಿಲ್ಲದ ಪರಿಸ್ಥಿತಿ ಕೈಮೀರಿ ಹೋಗಿರುತ್ತದೆ. ಅದಕ್ಕಾಗಿ ಪ್ರತಿಯೊಬರನ್ನು ಕ್ಯಾನ್ಸರ್ ರೋಗ ಪರೀಕ್ಷೆಗೆ ಒಳಪಡಿಸುವುದು ಸೂಕ್ತ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ಯಾನ್ಸರ್ ರೋಗ ಪತ್ತೆ ಯೋಜನೆಯನ್ನು ಉಚಿತವಾಗಿ ನಡೆಸುವಂತೆ ಆಗ್ರಹಿಸಿದರು.


ಕಾರ್ಯಕ್ರಮದಲ್ಲಿ ಅಲಯನ್ಸ್ ಸಂಸ್ಥೆ ಮಲ್ಟಿಪಲ್ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು, ೧ನೇ ಜಿಲ್ಲಾ ಉಪರಾಜ್ಯಪಾಲ ಚಂದ್ರಶೇಖರ್, ಧನಂಜಯ್, ಶಂಕರೇಗೌಡ, ವೆಂಕಟೇಶ್, ಜಗದೀಶ್, ಹೊಂಬೇಗೌಡ, ಲಿಂಗೇಗೌಡ, ಶಿವಶಂಕರ್, ಗೋಪಿಸಿದ್ದಪ್ಪ ಸೇರಿದಂತೆ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.ಆರ್ ಎಸ್ ಎಸ್ ಮಹಿಳಾ ಸ್ವಯಂಸೇವಕರಿಂದ ಪಥಸಂಚಲನ

ಕನ್ನಡಪ್ರಭ ವಾರ್ತೆ ಮದ್ದೂರುರಾಷ್ಟ್ರೀಯ ಸೇವಿಕಾ ಸಮಿತಿಯಿಂದ ವರ್ಗ ಸಮಾವೇಶದ ಅಂಗವಾಗಿ ಆರ್‌ಎಸ್‌ಎಸ್ ಮಹಿಳಾ ಸ್ವಯಂ ಸೇವಕರು ಪಟ್ಟಣದಲ್ಲಿ ಸೋಮವಾರ ಸಂಜೆ ಪಥಸಂಚಲನ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಭಗವಾದ್ವಜಗಳ ಹಿಡಿದು ನಡೆದ ಪಥಸಂಚನದಲ್ಲಿ ನೂರಾರು ಮಹಿಳಾ ಸ್ವಯಂ ಸೇವಕರು ಪಾಲ್ಗೊಂಡಿದ್ದರು. ನಂತರ ಶ್ರೀನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಬಹಿರಂಗ ಸಭೆ ನಡೆಯಿತು.ರಾಷ್ಟ್ರೀಯ ಸೇವಿಕಾ ಸಮಿತಿ ಮುಖ್ಯಸ್ಥೆ ವಿ.ಶಾಂತಕುಮಾರಿ ಮಾತನಾಡಿ, ಸಮಿತಿ ಭಾರತದ ಒಂದು ಪ್ರಮುಖ ಹಿಂದೂ ರಾಷ್ಟ್ರೀಯ ಮಹಿಳಾ ಸಂಘಟನೆಯಾಗಿದೆ. ರಾಷ್ಟ್ರ ನಿರ್ಮಾಣ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಮಹಿಳೆಯರನ್ನು ಸಜ್ಜುಗೊಳಿಸುವ ಸ್ವಯಂ ಸೇವಾ ಸಂಸ್ಥೆಯಾಗಿದೆ ಎಂದರು.

ಮಹಿಳೆಯರಲ್ಲಿ ರಾಷ್ಟ್ರಭಕ್ತಿ ಮತ್ತು ಹಿಂದುತ್ವದ ಮೌಲ್ಯಗಳನ್ನು ಉತ್ತೇಜಿಸುವ ಜೊತೆಗೆ ಅವರನ್ನು ಸಬಲೀಕರಣ ಗೊಳಿಸುವುದು, ರಾಷ್ಟ್ರೀಯ ಭಾವನೆ ಮೂಡಿಸುವುದು ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ಬೆಳೆಸುವುದು ಸೇವಿಕಾ ಸಮಿತಿಯ ಧೇಯೋದ್ದೇಶವಾಗಿದೆ ಎಂದರು.ಕಾರ್ಯಕ್ರಮ ಆಯೋಜಕರಾದ, ಮನ್ಮುಲ್ ಮಾಜಿ ನಿರ್ದೇಶಕಿ ರೂಪ ಮಾತನಾಡಿ ತಾಲೂಕಿನ ಸೋಮನಹಳ್ಳಿಯ ಎಸ್‌ಸಿಎಂಎಂ ಶಿಕ್ಷಣ ಸಂಸ್ಥೆಯಲ್ಲಿ ಏ.15ರಿಂದ 30 ರವರಗೆ ರಾಷ್ಟ್ರೀಯ ಸೇವಿಕ ಸಮಿತಿಯ ಬೈಠಕ್ ನಡೆಯುತ್ತಿದೆ. ಈ ವೇಳೆ ಮಹಿಳೆಯರಲ್ಲಿ ಮಾತೃತ್ವ, ನೇತೃತ್ವ ಮತ್ತು ಕರ್ತೃತ್ವ ದ ಆದರ್ಶಗಳನ್ನು ಮನನ ಮಾಡಿಕೊಡಲಾಗುವುದು. ಅಲ್ಲದೇ, ಸಾಂಸ್ಕೃತಿಕ ಚಟುವಟಿಕೆ, ಯೋಗ ತರಗತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಪಥಸಂಚಲದಲ್ಲಿ ಸಮಿತಿಯ ಪೂರ್ಣಿಮಾ, ಆಶಾ, ವಿಜಯಲಕ್ಷ್ಮಿ, ಮೈಥಿಲಿ ಸೇರಿದಂತೆ ಹಲವರ ಭಾಗವಹಿಸಿದ್ದರು.