ಸಾರಾಂಶ
ಧಾರವಾಡ: ದಿನನಿತ್ಯ ನಸುಕಿನಲ್ಲಿ ಎದ್ದು ಮನೆ ಮನೆಗೆ ಹೋಗಿ ಪತ್ರಿಕೆಗಳನ್ನು ಹಾಕುವುದು ಸಹ ಒಂದು ಗೌರವಯುತ ಉದ್ಯೋಗ. ಪತ್ರಿಕೆ ಹಾಕುವ ವಿದ್ಯಾರ್ಥಿಗಳು, ಯುವಕರು ಈ ಕಾರ್ಯವನ್ನು ಖುಷಿ ಖುಷಿಯಿಂದ ಮಾಡಬೇಕೆ ಹೊರತು ಕೀಳರಿಮೆ ಬೇಡ ಎಂದು ಹಿರಿಯ ಪತ್ರಿಕಾ ವಿತರಕರಾದ ಸುರೇಶ ಸುಣಗಾರ ಹೇಳಿದರು.
ಧಾರವಾಡ ಶಹರದ ಪತ್ರಿಕಾ ವಿತರಕರ ಸಂಘದಿಂದ ನಡೆದ ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ಕೇಕ್ ಕತ್ತರಿಸಿ ಮಾತನಾಡಿದರು.ಪತ್ರಿಕೆಗಳ ವಿತರಣೆ ಕಾರ್ಯದಿಂದ ಯುವಕರು ಬೆಳಗ್ಗೆ ಬೇಗನೆ ಏಳುವುದು, ದೈಹಿಕ ಶ್ರಮದಿಂದ ಆರೋಗ್ಯ ವೃದ್ಧಿಸುತ್ತದೆ. ಇದಕ್ಕಿಂತ ಪ್ರಮುಖವಾಗಿ ಪತ್ರಿಕೆಗಳ ವಿವಿಧ ಹಂತಗಳಲ್ಲಿ ಕೊನೆಯ ಕೊಂಡಿಯಾದರೂ ಮಹತ್ವದ ಹಂತದಲ್ಲಿದ್ದೇವೆ. ಪತ್ರಿಕೆ ಸಿದ್ಧವಾಗಿ, ಮುದ್ರಣವಾಗಿ ಕೊನೆಗೆ ವಿತರಣೆ ಆಗದೇ ಹೋದಲ್ಲಿ ಪತ್ರಿಕೆಯ ಉದ್ದೇಶ ಈಡೇರುವುದಿಲ್ಲ. ಈ ಹಿನ್ನೆಲೆಯಲ್ಲಿ ವಿತರಣೆ ಕಾರ್ಯ ಮಹತ್ವದ್ದಾಗಿದೆ. ಈಗ ಪತ್ರಿಕಾ ವಿತರಿಕರಿಗೂ ವರ್ಷದಲ್ಲಿ ಒಂದು ದಿನ ಇದೆ ಎಂಬುದು ಹೆಮ್ಮೆ ತರುವ ವಿಷಯವಾಗಿದೆ ಎಂದರು.
ಪತ್ರಿಕಾ ವಿತರಕರ ಸಂಘದ ಧಾರವಾಡ ಅಧ್ಯಕ್ಷ ಶಿವು ಹಲಗಿ ಮಾತನಾಡಿ, ಪತ್ರಿಕಾ ವಿತರಕರ ಸಮಸ್ಯೆಗಳು ಸಾಕಷ್ಟಿದ್ದು ಸ್ಥಳೀಯ ರಾಜಕಾರಣಿಗಳು ಹಾಗೂ ಆಡಳಿತ ವ್ಯವಸ್ಥೆ ಇವುಗಳನ್ನು ಪರಿಹರಿಸಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಧಾರವಾಡ ಪತ್ರಿಕಾ ವಿತರಕರ ಸಂಘ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದು ರಾಜ್ಯಕ್ಕೆ ಮಾದರಿಯಾಗಿ ಕೆಲಸ ಮಾಡುತ್ತಿದೆ ಎಂದರು.ಈ ಸಂದರ್ಭದಲ್ಲಿ ಪತ್ರಿಕಾ ವಿತರಕರ ಸಂಘದ ಪದಾಧಿಕಾರಿಗಳಾದ ನಾಗರಾಜ್ ಕುಲಕರ್ಣಿ, ಕೃಷ್ಣ ಕುಲಕರ್ಣಿ, ವೀರಭದ್ರಯ್ಯ ಹಿರೇಮಠ, ಗೌಸ ಮೊಹಿದ್ದೀನ್ ಬದಾಮಿ, ರಾಜು ಮಂಟೇದ, ಮಂಜುನಾಥ ಹಿರೇಮಠ, ಸಂತೋಷ ರೋಕಡೆ, ಚಂದ್ರಶೇಖರ್ ಬೇಲೂರು, ವೆಂಕಟೇಶ್ ಮೊದಲಿಯಾರ್, ಜಿಶಾನ ಬದಾಮಿ, ಶಿವಾನಂದ್ ಕುರಹಟ್ಟಿ, ರವಿ ಮಲ್ಲಿಗವಾಡ, ದೀಪಕ್ ಗುಂಡಗೋವಿ, ಕೆ.ಎನ್. ಹೊಂಗಲ, ಶಶಿಕಾಂತ್ ನೀಲಾಕರಿ, ಸಿದ್ದನಗೌಡ್ರ, ರವಿ ಶಿವಯನಮಠ, ನಿಂಗರಾಜ ಹಾಗೂ ಮನೋಹರ ಮಠಪತಿ ಇದ್ದರು.