ಸಾಧನೆಗೆ ಸಾಧಕರೇ ಸ್ಫೂರ್ತಿ

| Published : Sep 05 2024, 12:41 AM IST

ಸಾರಾಂಶ

ಆಧುನಿಕ ಪ್ರಪಂಚದಲ್ಲಿ ಮೊಬೈಲ್‌ ಇಲ್ಲದೆ ಜೀವನವಿಲ್ಲ ಎಂಬಂತೆ ಆಗಿದೆ. ಆದರಿಂದ ಪಾಲಕರು ಮಕ್ಕಳನ್ನು ಮೊಬೈಲ್‌ನಿಂದ ದೂರವಿಟ್ಟು ಬಾಂಧವ್ಯಗಳ ಬೆಸುಗೆಯೊಂದಿಗೆ ಶಿಕ್ಷಣ ನೀಡಬೇಕು.

ಶಿಗ್ಗಾಂವಿ:

ಶಿಕ್ಷಣದಲ್ಲಿ ಪರಿಪೂರ್ಣನಾಗಿ ಯಶಸ್ಸು ಕಾಣಲು ಸಾಧಕರೇ ಸ್ಫೂರ್ತಿಯಾಗಿದ್ದು ಅವರ ಅಭಿಪ್ರಾಯ ಸಂಗ್ರಹಿಸಬೇಕೆಂದು ನಿವೃತ್ತ ಉಪನ್ಯಾಸಕ ಪ್ರೊ. ಕೆ.ಎಸ್. ಕೌಜಲಗಿ ಹೇಳಿದರು.

ತಾಲೂಕಿನ ತಡಸ ಗ್ರಾಮದ ದುಂಡಿಬಸವೇಶ್ವರ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಶಿಗ್ಗಾಂವಿ ಹಾಗೂ ದುಂಡಶಿ, ತಡಸ ಹೋಬಳಿ ಘಟಕದ ಆಶ್ರಯದಲ್ಲಿ ನಡೆದ ಮಕ್ಕಳಿಗಾಗಿ ರೆಕ್ಕೆಗಳಾಗೋಣ ಕಾರ್ಯಕ್ರಮ ಹಾಗೂ ವಿಶೇಷ ಉಪನ್ಯಾಸ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತ ಸಂಸ್ಕೃತಿ ಬಹುತ್ವದ ಸಂಸ್ಕೃತಿ, ಆದ್ದರಿಂದ ನಮಗೆ ಮೊದಲು ಸಂಸ್ಕಾರ ಬೇಕು. ನಾವೆಲ್ಲ ಭಾರತೀಯರು ಎಂಬ ಭಾವನೆ ಮೂಡಿ ನಮ್ಮ ಸಂಸ್ಕೃತಿ ಉಳಿಸುವ ಕಾರ್ಯ ನಮ್ಮೆಲ್ಲರಲ್ಲಿ ಮೂಡಬೇಕು, ಮಕ್ಕಳಲ್ಲಿ ಭಾಷಾ ಕೌಶಲ್ಯ ಬೇಕಿದೆ. ಆ ನಿಟ್ಟಿನಲ್ಲಿ ಶಿಕ್ಷಕರೂ ಶಿಕ್ಷಣ ನೀಡಬೇಕು ಎಂದರು.

ಶಿಕ್ಷಣ ಇಲಾಖೆಯ ನಿವೃತ್ತ ಡೆಪ್ಯೂಟಿ ಡೈರೆಕ್ಟರ್ ವಿಶ್ವನಾಥಸ್ವಾಮಿ ಎಸ್. ಕಂಬಾಳಿಮಠ ಮಾತನಾಡಿ, ಮಕ್ಕಳನ್ನು ಮೊಬೈಲ್‌ನಿಂದ ದೂರವಿಟ್ಟು ಬಾಂಧವ್ಯಗಳ ಬೆಸುಗೆಯೊಂದಿಗೆ ಶಿಕ್ಷಣ ನೀಡಬೇಕಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ, ನಾಳಿನ ಸಮಾಜ ಕಟ್ಟುವ ಮಕ್ಕಳಿಗೆ ಉತ್ತಮ ಶಿಕ್ಷಣ, ಭವಿಷ್ಯ ನಿರ್ಮಿಸಬೇಕಿದೆ. ಯಶಸ್ವಿ ಬದುಕನ್ನು ಬದುಕಲು ಮಕ್ಕಳಿಗೆ ಬೆಳೆಸಬೇಕೆಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಬಿಇಒ ಎಂ.ಬಿ. ಅಂಬಿಗೇರ ಮಾತನಾಡಿ, ಮಕ್ಕಳು ಈ ದೇಶದ ಆಸ್ತಿ. ಗುಣಮಟ್ಟದ ಶಿಕ್ಷಣ ನೀಡಿ ಬೆಳೆಸುವ ಕಾರ್ಯ ನಮ್ಮದಾಗಿದ್ದು, ಜೀವನಕ್ಕೆ ಅನುಸಾರ ಯಾರು ಸಲಹೆ ಸಹಾಯ, ಸಹಕಾರ ನೀಡುತ್ತಾರೆ ಅದು ನಮ್ಮ ಜೀವನಕ್ಕೆ ಆಧಾರ ಆಗಬೇಕು ಎಂದರು.

ತಡಸ ಗ್ರಾಪಂ ಅಧ್ಯಕ್ಷೆ ರಜೀಯಾಬೇಗಂ ಅರಳಿಕಟ್ಟಿ, ತಮ್ಮ ವ್ಯಾಪ್ತಿಯ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಬದ್ಧವಾಗಿದ್ದೇನೆ ಎಂದು ತಿಳಿಸಿದರು.

ತಾಲೂಕು ಕಸಾಪ ಅಧ್ಯಕ್ಷ ನಾಗಪ್ಪ ಬೆಂತೂರ, ಶಿಗ್ಗಾಂವಿ ಹೋಬಳಿ ಘಟಕದ ಅಧ್ಯಕ್ಷೆ ಲಲಿತಾ ಹಿರೇಮಠ, ಕ್ಷೇತ್ರ ಸಮನ್ವಯಾಧಿಕಾರಿ ಗೀತಾಂಜಲಿ ತೆಪ್ಪದ, ಶೇಖಪ್ಪ ನಂಜಪ್ಪವರ, ಯೋಧ ಮಲ್ಲಿಕಾರ್ಜುನ ಪಾಟೀಲ್, ಎಸ್. ಕೆ. ಆದಪ್ಪವರ ಮಾತನಾಡಿದರು. ಈ ವೇಳೆ ಪ್ರಬಂಧ ಸ್ಪರ್ಧೆ ವಿಜೇತ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೂದ ತಡಸ ಹೋಬಳಿ ಘಟಕದ ಅಧ್ಯಕ್ಷ ಐ.ಎಸ್. ಭೋಸಲೆ, ಶಂಕರ ಬಡಿಗೇರ, ಗಂಗಾಧರ ಬೆಂಡಲಗಟ್ಟಿ, ಪತ್ರಕರ್ತ ಬಿ.ಎಸ್. ಹಿರೇಮಠ, ಪುಟ್ಟಪ್ಪ ಲಮಾಣಿ, ಈರಣ್ಣ ಸಮಗೊಂಡ, ಕರಿಯಪ್ಪ ಆಳೊರ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಎ.ಎಸ್. ಪಾಟೀಲ, ಬಸವರಾಜ ಬಮ್ಮಿಕಟ್ಟಿ, ಕವಿತಾ ಶೆಟ್ಟರ, ವಿನಾಯಕ ರೇವಣಕರ, ಅಭಿನಂದನ ಅವರಾದಿ, ವೀರೇಶ ಮಹಾಜನಶೆಟ್ಟರ್, ಚಂದ್ರಕಾಂತ ಬಡಿಗೇರ, ಪ್ರಕಾಶ ಗೌಳಿ, ಅಶೋಕ ಮಾಂಡ್ರೇಕರ, ಬಸವರಾಜ ಬಮ್ಮನಕಟ್ಟಿ, ರಾಯಪ್ಪ ಕಲಗುದರಿ ಶಾಲಾ ಶಿಕ್ಷಕರು ಗ್ರಾಮಸ್ಥರು ಮಕ್ಕಳು ಇದ್ದರು.