ನಿರ್ಮಲ ತುಂಗಭದ್ರಾ ಅಭಿಯಾನ, ಪೋಸ್ಟರ್ ಅನಾವರಣ

| Published : Nov 21 2024, 01:00 AM IST

ಸಾರಾಂಶ

ನಿರ್ಮಲ ತುಂಗಭದ್ರಾ ಅಭಿಯಾನ ಅಂಗವಾಗಿ ತುಂಗಭದ್ರಾ ಸೇತುವೆ ಗೋಡೆಯ ಮೇಲೆ ಸಾರ್ವಜನಿಕರಲ್ಲಿ ನದಿಗಳ ಪಾವಿತ್ರ್ಯತೆ ಕಾಪಾಡುವ ಕುರಿತು ಡಾ. ಜಿ.ಜೆ. ಮೆಹೆಂದಳೆ ಚಿತ್ರಿಸಿದ ಪೋಸ್ಟರ್ ಅನಾವರಣ ಮಾಡಲಾಯಿತು.

ರಾಣಿಬೆನ್ನೂರು: ನಿರ್ಮಲ ತುಂಗಭದ್ರಾ ಅಭಿಯಾನ ಅಂಗವಾಗಿ ತುಂಗಭದ್ರಾ ಸೇತುವೆ ಗೋಡೆಯ ಮೇಲೆ ಸಾರ್ವಜನಿಕರಲ್ಲಿ ನದಿಗಳ ಪಾವಿತ್ರ್ಯತೆ ಕಾಪಾಡುವ ಕುರಿತು ಡಾ. ಜಿ.ಜೆ. ಮೆಹೆಂದಳೆ ಚಿತ್ರಿಸಿದ ಪೋಸ್ಟರ್‌ಗಳನ್ನು ಸರ್ವೋದಯ ಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳು ಅನಾವರಣಗೊಳಿಸಿದರು.

ಪವಿತ್ರ ನದಿಗೆ ಕಾರ್ಖಾನೆಗಳ ತ್ಯಾಜ್ಯ, ಶಹರ, ಪೇಟೆಯ ಚರಂಡಿಗಳ ನೀರು, ಹೂ, ಪತ್ರಿಗಳು ಪ್ರಾಸ್ಟಿಕ್ ಚೀಲದ ಸಮೇತ ಸಾರ್ವಜನಿಕರು ಮನೆಯಿಂದ ತಂದು ನದಿಗೆ ದಿನವೂ ಹಾಕುತ್ತಿರುವುದರಿಂದ ನದಿಗಳು ಕಲುಷಿತಗೊಳ್ಳುತ್ತಿದೆ. ನದಿಗಳಲ್ಲಿ ಸ್ನಾನ ಮಾಡಿದ ಜನ ಹಳೆ ಬಟ್ಟೆಗಳನ್ನು ಅಲ್ಲಲ್ಲಿ ಬೀಸಾಡುತ್ತಿರುವುದರಿಂದ ನದಿಗಳಲ್ಲಿ ಕೊಳಚೆ ಜೊತೆಗೆ ರೋಗದ-ವೈರಾಣುಗಳು ಬೆಳೆಯುತ್ತಿವೆ.ಗಿಡ-ಮರಗಳ ಕೊರತೆಯಿಂದ ಭೂಮಿಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿ ನದಿಗಳು ಬೇಗನೆ ಬತ್ತುತ್ತಿವೆ. ಹಾಗಾಗಿ, ಸಾರ್ವಜನಿಕರು ಪ್ರತಿ ಮನೆ ಮನೆ ಹಾಗೂ ನದಿ ತಟದಲ್ಲಿ ಗಿಡಗಳನ್ನು ಬೆಳೆಸಿ, ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ಉಳಿಸಿ ಎಂದು ಸರ್ವೋದಯ ಮಠದ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ನುಡಿದರು.

ಕುಮಾರಪಟ್ಟಣ ಠಾಣೆಯ ಪ್ರವೀಣ ವಾಲಿಕರ್ ಮಾತನಾಡಿ, ನದಿಗಳು ಮಾನವನ ಜೀವಜಲ. ಸ್ವಚ್ಛ ನೀರು ಮಾನವನ ಆರೋಗ್ಯಕ್ಕೆ ಅತಿ ಮುಖ್ಯ. ನೀರು ಕಲುಷಿತಗೊಳ್ಳದಂತೆ ಸಂರಕ್ಷಿಸಲು ಪ್ರಯತ್ನಿಸಬೇಕು. ಬಟ್ಟೆ, ಕಸ, ಘನ ತ್ಯಾಜ್ಯಗಳನ್ನು ತಂದು ನದಿ ತಟದಲ್ಲಿ ಎಸೆಯುವ ಬದಲು ತಮ್ಮ ಮನೆಯ ಆವರಣದಲ್ಲಿ ಹೂಳಿದರೆ ಒಳ್ಳೆಯ ಗೊಬ್ಬರವಾಗುತ್ತದೆ ಎಂದು ನುಡಿದರು.

ಧನ್ಯೋಸ್ಮಿ ತಂಡದ ಜಿಲ್ಲಾಧ್ಯಕ್ಷ ಚರಣ ಅಂಗಡಿ, ಸ್ವಾಸ್ಥ ಕ್ಲಿನಿಕ್ ನ ಡಾ. ಜ್ಯೋತಿ ಮಹಾಂತೇಶ, ಆಕಾರ್ ಆಧಾರ ಸಂಸ್ಥೆಯ ಸಂಸ್ಥಾಪಕ ರಾಮು, ನಿರ್ಮಲ ತುಂಗಭದ್ರಾ ಅಭಿಯಾನದ ಸಂಚಾಲಕ ವೀರೇಶ ಅಜ್ಜಣ್ಣನವರ್, ಕೊಡಿಯಾಲ ಪಂಚಾಯಿತಿ ಸದಸ್ಯರಾದ ದಿನೇಶ ಹರಳಳ್ಳೆಪ್ಪನವರ್, ಬಸವಣ್ಣೆಪ್ಪ ಹೆಗ್ಗಪ್ಪನವರ್, ಕಿರಣ ಕೆ., ವಿಜಯ ಉದಗಟ್ಟಿ, ನಿರಂಜನ್, ಭುವನೇಶ್ವರಿ ಶಾಲೆಯ ಮುಖ್ಯೋಪಾಧ್ಯಾಯ ಗದಿಗೆಪ್ಪ ಹಾಗೂ ಕುಮಾರಟ್ಟಣ ಠಾಣೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು..