ಸಿದ್ದರಾಮಯ್ಯ ಶಕ್ತಿ ಕುಂದಿಸುವ ಬಿಜೆಪಿ ತಂತ್ರ ಫಲಿಸಲ್ಲ: ಕೌಲಗಿ

| Published : Nov 21 2024, 01:00 AM IST

ಸಾರಾಂಶ

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಪಾತ್ರ ಇಲ್ಲವೆಂಬುದು ಇಡಿ ಅವರಿಗೂ ಗೊತ್ತು. ಆದರೆ, ತಮ್ಮ ಮೇಲಿನ ಒತ್ತಡಕ್ಕಾಗಿ ಸಿದ್ದರಾಮಯ್ಯನವರನ್ನು ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ. ಇಡಿ ಪ್ರವೇಶಕ್ಕೂ ದೂರುದಾರ ಸ್ನೇಹಮಯಿ ಕೃಷ್ಣ ನಿಮಿತ್ತ ಮಾತ್ರ.

ಹುಬ್ಬಳ್ಳಿ:

ಮುಡಾ ಪ್ರಕರಣವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಶಕ್ತಿ ಕುಂದಿಸುವ ಕಾರ್ಯ ಕೈಗೊಳ್ಳುತ್ತಿರುವ ಬಿಜೆಪಿಯವರ ಕುತಂತ್ರ ಫಲಿಸುವುದಿಲ್ಲ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷ ವೇದವ್ಯಾಸ ಕೌಲಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಪಾತ್ರ ಇಲ್ಲವೆಂಬುದು ಇಡಿ ಅವರಿಗೂ ಗೊತ್ತು. ಆದರೆ, ತಮ್ಮ ಮೇಲಿನ ಒತ್ತಡಕ್ಕಾಗಿ ಸಿದ್ದರಾಮಯ್ಯನವರನ್ನು ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ. ಇಡಿ ಪ್ರವೇಶಕ್ಕೂ ದೂರುದಾರ ಸ್ನೇಹಮಯಿ ಕೃಷ್ಣ ನಿಮಿತ್ತ ಮಾತ್ರ. ಅಸಲಿಗೆ ಇಡಿಗೆ ಪ್ರವೇಶಿಸುವಂತೆ ಮಾಡಿದವರು ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಎಂದು ಗಂಭೀರ ಆರೋಪ ಮಾಡಿದರು.

ಹಿಂದೆ ಬಿಜೆಪಿಯವರು ಸಿಬಿಐ ಎಂದರೆ ಕಾಂಗ್ರೆಸ್‌ ಬ್ಯುರೋ ಆಫ್‌ ಇನ್‌ವೆಸ್ಟಿಗೇಶನ್‌ ಎಂದು ಹೇಳುತ್ತಿದ್ದರು. ಈಗ ಎಲ್ಲ ಪ್ರಕರಣಗಳಲ್ಲಿ ಸಿಬಿಐ ತನಿಖೆಗೆ ಒತ್ತಾಯಿಸುತ್ತಿರುವುದು ಹಾಸ್ಯಾಸ್ಪದ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಸ್ವಾಯತ್ತ ಸಂಸ್ಥೆಗಳಾದ ಸಿಬಿಐ, ಇಡಿ ಸ್ವತಂತ್ರವಾಗಿ ಉಳಿದಿಲ್ಲ. ಹಿಂದೆ ನಾಲ್ಕು ವರ್ಷಗಳ ಬಿಜೆಪಿ ಆಡಳಿತದಲ್ಲಿ ಒಂದೇ ಒಂದು ಪ್ರಕರಣ‍ವನ್ನು ಸಿಬಿಐಗೆ ವಹಿಸಿಲ್ಲ. ಹಲವು ಪ್ರಕರಣಗಳ ಕುರಿತು ಅಂದು ಪ್ರತಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್‌ ದಾಖಲೆ ಸಹಿತಿ ಸಿಬಿಐಗೆ ವಹಿಸುವಂತೆ ಒತ್ತಾಯಿಸಿದರೂ ಬಿಜೆಪಿ ಸರ್ಕಾರ ನಿರಾಕರಿಸಿತ್ತು. ಆಗಿನ ಪೊಲೀಸರೇ ಈಗ ರಾಜ್ಯಾದ್ಯಂತ ಇದ್ದು, ಈಗ ಪೊಲೀಸರು, ಅಧಿಕಾರಿಗಳು ಅಸಮರ್ಥರು ಎಂಬ ಬಿಜೆಪಿ ಹೇಳಿಕೆ ಸರಿಯಲ್ಲ ಎಂದರು. ಬಿಪಿಎಲ್‌ ಕಾರ್ಡ್‌ಗಳ ಪರಿಷ್ಕರಣೆ ಎಲ್ಲ ಕಾಲದಲ್ಲೂ ನಡೆದಿದೆ. ಆದರೆ, ಈಗ ಬಿಜೆಪಿ-ಜೆಡಿಎಸ್‌ನವರು ಗ್ಯಾರಂಟಿಗಳನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತಿದೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಅಪಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದರು.