ನಮಗೆ ಎಷ್ಟೇ ಕಷ್ಟವಾದರೂ ಜನರಿಗೆ ಸ್ವಾಭಿಮಾನದ ಬದುಕು ಕೊಡುವುದು ನಮ್ಮ ಜವಾಬ್ದಾರಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಹೊರೆಯಾಗುತ್ತಿದ್ದರೂ ಇವುಗಳನ್ನು ನಿಲ್ಲಿಸುವುದಿಲ್ಲ. ಪ್ರಣಾಳಿಕೆಯಲ್ಲಿ ಈ ಯೋಜನೆಗಳನ್ನು ಘೋಷಿಸಲಾಗಿತ್ತು. ಈ ಯೋಜನೆಗಳು ಅಭಿವೃದ್ಧಿಯ ಭಾಗ. ಆರ್ಥಿಕವಾಗಿ ಏನೇ ಇದ್ದರೂ ನಮ್ಮಲ್ಲಿನ ಸಮರ್ಥ ನಾಯಕತ್ವ ಎಲ್ಲವನ್ನೂ ನಿಭಾಯಿಸುತ್ತದೆ, ನಮಗೆ ಎಷ್ಟೇ ಕಷ್ಟವಾದರೂ ಜನರಿಗೆ ಸ್ವಾಭಿಮಾನದ ಬದುಕು ಕೊಡುವುದು ನಮ್ಮ ಜವಾಬ್ದಾರಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.ಪ್ರತ್ಯೇಕವಾಗಿ ಮಾತನಾಡಿರುವ ಸಚಿವರು, ಗ್ಯಾರಂಟಿ ಯೋಜನೆ ದುರುಪಯೋಗ ತಪ್ಪಿಸಲು ಸರ್ಕಾರ ಚರ್ಚಿಸುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಶ್ರೀಮಂತರು ಪಡೆಯಬಾರದು, ಯಾವುದೇ ವಿಚಾರವಾದರೂ ಪರಿಷ್ಕರಣೆ ಕಾಲಕಾಲಕ್ಕೆ ಆಗಬೇಕು ಎಂದಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಎಷ್ಟೇ ಕಷ್ಟವಾದರೂ ಗ್ಯಾರಂಟಿಗಳನ್ನು ಕೊಡುತ್ತಿದ್ದೇವೆ. ಯಾವುದೇ ರೀತಿಯ ಪರಿಷ್ಕರಣೆಯನ್ನೂ ಮಾಡುವುದಿಲ್ಲ. ಆದರೆ, ಗ್ಯಾರಂಟಿ ಯೋಜನೆಗಳ ದುರುಪಯೋಗ ತಪ್ಪಿಸಬೇಕಿದೆ. ಮೃತಪಟ್ಟಿರುವ ಕೆಲವರಿಗೆ ಗ್ಯಾರಂಟಿ ಯೋಜನೆ ಹಣ ಸಂದಾಯವಾಗಿದೆ. ಪಡಿತರ ಅಕ್ಕಿಯನ್ನೂ ಮೃತಪಟ್ಟಿರುವವರ ಹೆಸರಿನಲ್ಲಿ ಪಡೆಯಲಾಗುತ್ತಿದೆ. ಮೃತಪಟ್ಟವರ ಲೆಕ್ಕ ಸಿಗುತ್ತಿಲ್ಲ. ಈ ಸಮಸ್ಯೆ ಹೇಗೆ ಬಗೆಹರಿಸಬೇಕು ಎಂಬುದನ್ನು ಸರ್ಕಾರ ಚರ್ಚೆ ಮಾಡುತ್ತಿದೆ ಎಂದರು.ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಗ್ಯಾರಂಟಿ ಯೋಜನೆ ಜಾರಿ ಮಾಡುವಾಗ ನಾವು ಯಾವುದೇ ರೀತಿ ನಿಯಮ ಮಾಡಿರಲಿಲ್ಲ. ಸ್ಥಿತಿವಂತರು ಗ್ಯಾರಂಟಿ ತೆಗೆದುಕೊಳ್ಳಲ್ಲ ಎಂದು ಯೋಚಿಸಿದ್ದೆವು. ಆದರೆ 100 ಎಕರೆ ಜಮೀನು ಇರುವವರೂ ಗ್ಯಾರಂಟಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಯ ಒಂದು ಭಾಗವಾಗಿದ್ದು, ಯಾವುದೇ ಹೊರೆಯಾಗುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಇನ್ನು ಸಚಿವ ಪ್ರಿಯಾಂಕ್ ಮಾತನಾಡಿ, ಜನರ ಬದುಕು ರೂಪಿಸುತ್ತಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಆರ್ಥಿಕವಾಗಿ ಏನೇ ಇದ್ದರೂ ನಮ್ಮಲ್ಲಿನ ಸಮರ್ಥ ನಾಯಕತ್ವ ಅದನ್ನು ನಿಭಾಯಿಸುತ್ತಿದೆ ಎಂದಿದ್ದಾರೆ.ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆಯಾಗಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಭಿವೃದ್ಧಿಯಲ್ಲಿ ಅರ್ಧ ಭಾಗ ನಾವು ಗ್ಯಾರಂಟಿ ಯೋಜನೆಗೆ ಖರ್ಚು ಮಾಡುತ್ತಿದ್ದೇವೆ, ಸುಮಾರು 60 ಸಾವಿರ ಕೋಟಿ ರು. ಖರ್ಚು ಮಾಡುತ್ತಿದ್ದೇವೆ ಎಂದರು.
