ಕೆಲವು ಪ್ರಕರಣಗಳಲ್ಲಿ ಸಾವನ್ನಪ್ಪಿದವರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಿರುವುದು ಗಮನಕ್ಕೆ ಬಂದಿದ್ದು, ಆ ಮೊತ್ತವನ್ನು ವಾಪಸ್ ಪಡೆಯಲು ಕ್ರಮ ಕೈಗೊಳ್ಳಲಾಗುವುದು. ಇಂತಹ ದೋಷಗಳು ಮರುಕಳಿಸದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ವಿಶೇಷ ಮೀಡಿಯಾ ಸೆಲ್ ಆರಂಭಿಸಲಾಗಿದೆ. ಉತ್ತಮವಾಗಿ ಕಾರ್ಯನಿರ್ವಹಿಸುವವರಿಗೆ ಮೂರು ಬಹುಮಾನಗಳನ್ನು ನೀಡಲಾಗುವುದು. “ಮನೆಗೆ ಐದು ಗ್ಯಾರಂಟಿ, ಮನೆ ಮುಂದೆ ರಂಗೋಲಿ” ಕಾರ್ಯಕ್ರಮ ಜಾರಿಗೆ ತರಲು ಸೂಚಿಸಿದ್ದೇನೆ ಎಂದರು.
ಕನ್ನಡಪ್ರಭ ವಾರ್ತೆ ಹಾಸನ
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ಶೇಕಡ ೯೮ರಷ್ಟು ಅರ್ಹ ಜನರಿಗೆ ತಲುಪಿರುವುದು ಸಂತೋಷದ ಸಂಗತಿ ಎಂದು ಗ್ಯಾರಂಟಿಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್. ಎಂ. ರೇವಣ್ಣ ತಿಳಿಸಿದರು.ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಗ್ಯಾರಂಟಿಯಿಂದ ಬಡ ಜನರಿಗೆ ಅನುಕೂಲವಾಗಿದ್ದು, ಕರ್ನಾಟಕದಲ್ಲಿ ೧.೨೪ ಕೋಟಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರ ಲಾಭಾಂಶ ವರ್ಗಾವಣೆ ಮೂಲಕ ಹಣ ಜಮೆಯಾಗುತ್ತಿದೆ. ಇದುವರೆಗೆ ಒಟ್ಟು ೧.೧೮ ಲಕ್ಷ ಕೋಟಿ ರು. ಜನರಿಗೆ ನೇರವಾಗಿ ಸಂದಾಯವಾಗಿದ್ದು, ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಸ್ಥಿರತೆಗೆ ಇದು ನೆರವಾಗಿದೆ ಎಂದು ಹೇಳಿದರು. ಹಾಸನ ಜಿಲ್ಲೆಯಲ್ಲಿ ಮಾತ್ರ ೧ ಕೋಟಿ ೭೦ ಲಕ್ಷ ರು. ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಕೆಲವು ಪ್ರಕರಣಗಳಲ್ಲಿ ಸಾವನ್ನಪ್ಪಿದವರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಿರುವುದು ಗಮನಕ್ಕೆ ಬಂದಿದ್ದು, ಆ ಮೊತ್ತವನ್ನು ವಾಪಸ್ ಪಡೆಯಲು ಕ್ರಮ ಕೈಗೊಳ್ಳಲಾಗುವುದು. ಇಂತಹ ದೋಷಗಳು ಮರುಕಳಿಸದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ವಿಶೇಷ ಮೀಡಿಯಾ ಸೆಲ್ ಆರಂಭಿಸಲಾಗಿದೆ. ಉತ್ತಮವಾಗಿ ಕಾರ್ಯನಿರ್ವಹಿಸುವವರಿಗೆ ಮೂರು ಬಹುಮಾನಗಳನ್ನು ನೀಡಲಾಗುವುದು. “ಮನೆಗೆ ಐದು ಗ್ಯಾರಂಟಿ, ಮನೆ ಮುಂದೆ ರಂಗೋಲಿ” ಕಾರ್ಯಕ್ರಮ ಜಾರಿಗೆ ತರಲು ಸೂಚಿಸಿದ್ದೇನೆ ಎಂದರು.ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆ ವಿಳಂಬದ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಜಾತಿ ಅಥವಾ ಪಕ್ಷ ಆಧಾರದ ಮೇಲೆ ಗ್ಯಾರಂಟಿಗಳ ವಿಂಗಡಣೆ ನಡೆದಿಲ್ಲ. ಫಲಾನುಭವಿಗಳು ಯೋಜನೆಗಳಿಂದ ಸಂತೋಷಗೊಂಡಿದ್ದಾರೆ. ಆರಂಭದಿಂದಲೂ ಈ ಯೋಜನೆಗಳನ್ನು ವಿರೋಧಿಸುತ್ತಿರುವ ಭಾರತೀಯ ಜನತಾ ಪಾರ್ಟಿ ರಾಜಕೀಯ ಕಾರಣಗಳಿಂದ ಟೀಕೆ ಮಾಡುತ್ತಿದೆ ಎಂದು ಆರೋಪಿಸಿದರು. ಮುಂದೆ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗಳ ಬಗ್ಗೆ ಮಾತನಾಡಿದ ಅವರು, “ಸಿಎಂ ಬದಲಾವಣೆಯ ವಿಚಾರಕ್ಕೆ ನನಗೆ ಸಂಬಂಧವಿಲ್ಲ. ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಈ ಬಗ್ಗೆ ತೀರ್ಮಾನ ಕೈಗೊಳ್ಳುವುದು ಪಕ್ಷದ ನಾಯಕರು ಹಾಗೂ ಹೈಕಮಾಂಡ್‌ಗೆ ಬಿಟ್ಟ ವಿಚಾರ,” ಎಂದರು.ಸಿಎಂ ಬದಲಾವಣೆ ಕುರಿತ ಹೇಳಿಕೆಗಳಿಂದ ತಮಗೂ ನೋವಾಗಿದೆ. ಇದರಿಂದ ಪಕ್ಷಕ್ಕೂ ಹಾನಿಯಾಗಬಹುದು. ಶೀಘ್ರದಲ್ಲೇ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕೆಂದು ಹಿರಿಯ ನಾಯಕರು ಹಾಗೂ ಹೈಕಮಾಂಡ್‌ಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು. ಧಾರವಾಡದಲ್ಲಿ ನಡೆದ ಉದ್ಯೋಗ ಭರ್ತಿ ಕುರಿತ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, ವಿದ್ಯಾರ್ಥಿ ನಾಯಕನಾಗಿ ಹೋರಾಟದ ಮಹತ್ವ ತಿಳಿದಿದ್ದರೂ ಪರಿಸ್ಥಿತಿ ಅವಲೋಕಿಸಿ ಕ್ರಮ ಕೈಗೊಳ್ಳಬೇಕು ಎಂದರು. ಹಿಂದಿನ ಸರ್ಕಾರದ ಅವಧಿಯಲ್ಲಿ ನೇಮಕಾತಿಯಲ್ಲಿ ನಡೆದ ಮೋಸ-ವಂಚನೆಗಳಿಂದ ಪ್ರಕ್ರಿಯೆ ಸ್ಥಗಿತ ಆಗಿತ್ತು. ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುಮಾರು ೪೦ ಸಾವಿರ ಉದ್ಯೋಗವನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉದ್ಯೋಗ ನೇಮಕಾತಿ ನಡೆಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ಯಾವ ಗೊಂದಲ ಬೇಡ ಎಂದು ಹೇಳಿದರು.