ಸಾರಾಂಶ
ಆರ್‌ಎಸ್‌ಎಸ್ ಬಗ್ಗೆ ಎಲ್ಲರಿಗೂ ತಿಳಿದಿದೆ, ಆದನ್ನು ನಿಷೇಧಿಸಲು ಯಾರಿಂದಲೂ ಸಾಧ್ಯವಿಲ್ಲ, ರಾಮಮಂದಿರದ ವಿಚಾರದಲ್ಲಿ ಅಡ್ವಾಣಿ ಕೈಗೊಂಡಿದ್ದ ರಥಯಾತ್ರೆ ಸಂದರ್ಭದಲ್ಲಿ ಆರ್‌ಎಸ್‌ಎಸ್ ನಿಷೇಧ ಮಾಡಿದ್ದರು, ಆಗ ಏನಾಯಿತು
ಚಿಂತಾಮಣಿ: ಆರ್ ಎಸ್ ಎಸ್ ನಿಷೇಧ ಮಾಡಲು ಯಾರಿಂದಲೂ ಸಾಧ್ಯವಾಗದು, ಪ್ರಿಯಾಂಕ್ ಖರ್ಗೆ ತನ್ನ ಮಗುವಿನ ಬುದ್ದಿಯನ್ನು ಬಿಡಬೇಕು. ಹಾಗೆಯೇ ಅವರು ಇತಿಹಾಸ ನೋಡಬೇಕು, ಸ್ವಾತಂತ್ರ‍್ಯ ಬಂದ ಕೆಲವೇ ದಿನಗಳಲ್ಲಿ ಆರ್ ಎಸ್ ಎಸ್ ಬ್ಯಾನ್ ಮಾಡಿದ್ದರು, ಆಗ ಏನಾಯಿತೆಂದು ತಿಳಿಯಲೆಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಸಲಹೆ ನೀಡಿದರು.
ತಾಲೂಕಿನ ಊಲವಾಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಆರ್‌ಎಸ್‌ಎಸ್ ಬಗ್ಗೆ ಎಲ್ಲರಿಗೂ ತಿಳಿದಿದೆ, ಆದನ್ನು ನಿಷೇಧಿಸಲು ಯಾರಿಂದಲೂ ಸಾಧ್ಯವಿಲ್ಲ, ರಾಮಮಂದಿರದ ವಿಚಾರದಲ್ಲಿ ಅಡ್ವಾಣಿ ಕೈಗೊಂಡಿದ್ದ ರಥಯಾತ್ರೆ ಸಂದರ್ಭದಲ್ಲಿ ಆರ್‌ಎಸ್‌ಎಸ್ ನಿಷೇಧ ಮಾಡಿದ್ದರು, ಆಗ ಏನಾಯಿತು ಎಂಬುದನ್ನು ಅರಿಯಲಿ, ಯಾರು ಏನೇ ಮಾಡಿದರೂ ಈ ದೇಶದಲ್ಲಿ ಆರ್ ಎಸ್ ಎಸ್ ಸಂಘದ ಚಟುವಟಿಕೆ ನಿಲ್ಲಿಸಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲವೆಂದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೇ ಆರ್‌ಎಸ್‌ಎಸ್ ನಿಷೇಧ ಮಾಡೋದಕ್ಕೆ ಆಗಲಿಲ್ಲ. ಈಗ ಆರ್ ಎಸ್ ಎಸ್ ನಿಷೇಧಿಸುವುದು ಕನಸಿನ ಮಾತೇ ಸರಿ ಎಂದು ಲೇವಡಿ ಮಾಡಿದರು. ಪ್ರಿಯಾಂಕ್ ಖರ್ಗೆ ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದಿದ್ದಾರೆ. ಅವರಿಗೆ ದೇಶದ ಸಂಸ್ಕೃತಿ ಸರಿಯಾಗಿ ತಿಳಿದಿಲ್ಲ, ಮಲ್ಲಿಕಾರ್ಜುನ ಖರ್ಗೆಯವರಿಂದ ಪ್ರಿಯಾಂಕ್ ಖರ್ಗೆಗೆ ಮಂತ್ರಿ ಸ್ಥಾನ ಸಿಕ್ಕಿದೆ, ಇವರ ಕೈಯಲ್ಲಾದರೂ ದಲಿತರಿಗೆ ಅನುಕೂಲ ಮಾಡುವ ಕೆಲಸವಾಗಲಿ, ದೊಡ್ಡ ಇಲಾಖೆಯಲ್ಲಿ ಸಚಿವರಾಗಿದ್ದಾರೆ, ಉತ್ತಮ ಕೆಲಸ ಮಾಡುವತ್ತ ಗಮನಹರಿಸಲಿ, ಅದು ಬಿಟ್ಟು ಕೀಳು ರಾಜಕೀಯ ಮಾಡುವುದನ್ನು ಮೊದಲು ಬಿಡಬೇಕು ಎಂದು ನುಡಿದರು.