ಸಾರಾಂಶ
ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಉತ್ತಮ ಜೀವನ ಮತ್ತು ಆರೋಗ್ಯವೇ ಮುಖ್ಯ. ಅವರಿಗೆ ದೊಣ್ಣೆ ಅಲ್ಲ, ಕೈಗೆ ಪೆನ್ನು ಕೊಡಬೇಕು ಎಂಬುದೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯ. ಬುದ್ಧ ಹಾಗೂ ಬಸವ ಕೂಡ ನಮ್ಮ ನಾಡಿಗೆ ಯುದ್ಧವಲ್ಲ, ಶಾಂತಿ ಬೇಕೆಂದು ಹೇಳಿದ್ದಾರೆ. ನಾವು ಎಲ್ಲರೂ ಸಂವಿಧಾನದ ಆಶಯದಂತೆ ಒಂದೇ ರಾಷ್ಟ್ರದವರು. ತಪ್ಪು ಕಲ್ಪನೆ ಬೇಡ. ಪಕ್ಕದ ರಾಜ್ಯದ ವರದಿ ಬರುವವರೆಗೂ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಸುಳ್ಳು ಹೇಳಲಾಗಿದೆ ಎಂದು ಕೆಲವರು ಹೇಳಿದರೂ ಸತ್ಯವನ್ನು ಮಾತನಾಡದೆ ಇದ್ದರೆ ಸತ್ಯ ಹೊರಬರುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಆರ್‌ಎಸ್‌ಎಸ್ ನಿಷೇಧ ಮಾಡಲಾಗುವುದು ಎನ್ನುವುದು ಸುಳ್ಳು. ಯಾವುದೇ ಸಂಘ ಸಂಸ್ಥೆ ಸಂಘಟನೆಗಳಿಗೂ ಸರ್ಕಾರಿ ಜಾಗ ಬಳಕೆಗೆ ನಿರ್ಬಂಧ ಹೇರುವುದು ಅನಿವಾರ್ಯ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ಸ್ಪಷ್ಟನೆ ನೀಡಿದರು.ಹಾಸನಾಂಬೆ ದೇವಿ ದರ್ಶನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಉತ್ತಮ ಜೀವನ ಮತ್ತು ಆರೋಗ್ಯವೇ ಮುಖ್ಯ. ಅವರಿಗೆ ದೊಣ್ಣೆ ಅಲ್ಲ, ಕೈಗೆ ಪೆನ್ನು ಕೊಡಬೇಕು ಎಂಬುದೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯ. ಬುದ್ಧ ಹಾಗೂ ಬಸವ ಕೂಡ ನಮ್ಮ ನಾಡಿಗೆ ಯುದ್ಧವಲ್ಲ, ಶಾಂತಿ ಬೇಕೆಂದು ಹೇಳಿದ್ದಾರೆ. ನಾವು ಎಲ್ಲರೂ ಸಂವಿಧಾನದ ಆಶಯದಂತೆ ಒಂದೇ ರಾಷ್ಟ್ರದವರು. ತಪ್ಪು ಕಲ್ಪನೆ ಬೇಡ. ಪಕ್ಕದ ರಾಜ್ಯದ ವರದಿ ಬರುವವರೆಗೂ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಸುಳ್ಳು ಹೇಳಲಾಗಿದೆ ಎಂದು ಕೆಲವರು ಹೇಳಿದರೂ ಸತ್ಯವನ್ನು ಮಾತನಾಡದೆ ಇದ್ದರೆ ಸತ್ಯ ಹೊರಬರುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ಅವರು, ಆರ್‌ಎಸ್‌ಎಸ್ ನಿಷೇಧ ಕುರಿತಾಗಿ ಮೂಡಿರುವ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದು, ನಾವು ಆರ್‌ಎಸ್‌ಎಸ್ ಬ್ಯಾನ್ ಎಂದು ಯಾರೂ ಹೇಳಿಲ್ಲ. ಯಾವುದೇ ಸಂಘಸಂಸ್ಥೆಗಳು ಸರಕಾರಿ ಜಾಗದಲ್ಲಿ ಕಾರ್ಯಕ್ರಮ ಆಯೋಜಿಸಬೇಕಾದರೆ, ಅದರ ಮೇಲೆ ನಿಯಮ ಮತ್ತು ನಿಬಂಧನೆ ಇರಬೇಕು ಎಂದು ಪ್ರಿಯಾಂಕ್ ಖರ್ಗೆ ಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ. ಅದಕ್ಕಿಂತ ಹೆಚ್ಚು ಏನೂ ಹೇಳಲಾಗಿಲ್ಲ ಎಂದು ಹೇಳಿದರು.ಪುಷ್ಪ ಅಮರನಾಥ್ ಅವರು ಹಾಸನಾಂಬ ದೇವಾಲಯದ ದರ್ಶನಕ್ಕೆ ಆಗಮಿಸಿದ ಬಳಿಕ ನಗರದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಈ ಬಾರಿಗೆ ಮಹಿಳೆಯರು ತಂಡೋಪತಂಡವಾಗಿ ಹಾಸನಾಂಬ ದರ್ಶನಕ್ಕೆ ಆಗಮಿಸುತ್ತಿರುವುದು ಸಂತೋಷದ ವಿಷಯ. ಹಾಸನ ನಗರಕ್ಕೆ ಪ್ರವೇಶ ಮಾಡಿದ ಕೂಡಲೇ ಪ್ರತಿ ರಸ್ತೆಯಲ್ಲೂ ಮಹಿಳೆಯರ ಸಕ್ರಿಯ ಹಾಜರಾತಿ ಕಂಡಿದ್ದೇನೆ. ಇದು ಶಕ್ತಿ ಯೋಜನೆಯ ಫಲಿತಾಂಶ, ಉಚಿತ ಬಸ್ ಪ್ರಯಾಣದಿಂದ ಹೆಚ್ಚು ಮಹಿಳೆಯರು ದೇವಾಲಯಕ್ಕೆ ಆಗಮಿಸಿದ್ದಾರೆ ಎಂದು ಹೇಳಿದರು.ಜಿಲ್ಲಾಡಳಿತದ ಕಾರ್ಯವನ್ನು ಪ್ರಶಂಸಿಸಿದ ಅವರು, “ಈ ಬಾರಿ ದರ್ಶನ ವ್ಯವಸ್ಥೆ ಅತ್ಯುತ್ತಮವಾಗಿ ನಡೆದಿದೆ. ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರ ಪ್ರಾಮಾಣಿಕ ಪ್ರಯತ್ನದಿಂದ ಹಾಸನಾಂಬ ದರ್ಶನೋತ್ಸವ ಯಶಸ್ಸಿನ ದಿಕ್ಕಿನಲ್ಲಿ ಸಾಗುತ್ತಿದೆ. ಮುಂದೆಯೂ ಇದೇ ರೀತಿಯ ಅಚ್ಚುಕಟ್ಟಾದ ವ್ಯವಸ್ಥೆ ಮುಂದುವರಿಯಲಿ ಎಂದು ಶುಭಕೋರಿದರು. ನಾನು ರಾಜಕೀಯವಾಗಿ, ಕುಟುಂಬದ ಪರವಾಗಿ ಮತ್ತು ಪಂಚ ಗ್ಯಾರಂಟಿ ಯೋಜನೆಯ ಯಶಸ್ಸಿಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಈ ಯೋಜನೆಗಳಿಂದ ರಾಜ್ಯದ ಎಲ್ಲ ಭಕ್ತಾಧಿಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ಒಳ್ಳೆಯದಾಗಲಿ. ಉಚಿತ ಬಸ್ ಪ್ರಯಾಣದ ಅನುಕೂಲದಿಂದಲೇ ಸಾವಿರಾರು ಮಹಿಳೆಯರು ಹಾಸನಾಂಬ ದರ್ಶನಕ್ಕೆ ಆಗಮಿಸಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಕೂಡ ತಾಯಿಯ ದರ್ಶನ ಪಡೆದಿದ್ದಾರೆ ಎಂದು ಅವರು ಹೇಳಿದರು.