ಸುಪ್ರಿಂ ನ್ಯಾಯಮೂರ್ತಿಗೆ ಅವಮಾನ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ

| Published : Oct 17 2025, 01:00 AM IST

ಸುಪ್ರಿಂ ನ್ಯಾಯಮೂರ್ತಿಗೆ ಅವಮಾನ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರುಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ವಕೀಲರೋರ್ವ ಶೂ ತೂರಿರುವುದನ್ನು ಖಂಡಿಸಿ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಗುರುವಾರ ಸರ್ವೋಚ್ಚ ನ್ಯಾಯಪೀಠಕ್ಕೆ ಆದ ಅವಮಾನ ಖಂಡನಾ ಹೋರಾಟ ವೇದಿಕೆ, ವಿವಿಧ ರಾಜಕೀಯ ಮುಖಂಡರು ಹಾಗೂ ಕನ್ನಡಪರ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ವಕೀಲರ ಅಣುಕು ಶವಯಾತ್ರೆ । ಚಿಕ್ಕಮಗಳೂರಿನ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಪ್ರತಿಕೃತಿ ದಹನ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ವಕೀಲರೋರ್ವ ಶೂ ತೂರಿರುವುದನ್ನು ಖಂಡಿಸಿ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಗುರುವಾರ ಸರ್ವೋಚ್ಚ ನ್ಯಾಯಪೀಠಕ್ಕೆ ಆದ ಅವಮಾನ ಖಂಡನಾ ಹೋರಾಟ ವೇದಿಕೆ, ವಿವಿಧ ರಾಜಕೀಯ ಮುಖಂಡರು ಹಾಗೂ ಕನ್ನಡಪರ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ತಾಲೂಕು ಕಚೇರಿಯಿಂದ ಮುಖಂಡರು ಮೆರವಣಿಗೆಯಲ್ಲಿ ಹೊರಟು ಸುಪ್ರೀಂ ಕೋರ್ಟ್‌ನ ವಕೀಲ ರಾಕೇಶ್ ಕಿಶೋರ್ ಅವರ ಅಣುಕು ಶವವನ್ನು ಎಂ.ಜಿ.ರಸ್ತೆ ಮುಖಾಂತರ ಆಜಾದ್‌ಪಾರ್ಕ್ ವೃತ್ತದವರೆಗೆ ಹೊತ್ತು ಸಾಗಿದರು. ಜಾಥಾದಲ್ಲಿ ನೂರಾರು ಕಾಲೇಜು ವಿದ್ಯಾರ್ಥಿನಿಯರು ಪಾಲ್ಗೊಂಡು ಸಂವಿಧಾನಕ್ಕೆ ಅವಮಾನಿಸಿದ ವಕೀಲರ ವಿರುದ್ಧ ಧಿಕ್ಕಾರ ಹಾಕುತ್ತಾ ಆಜಾದ್‌ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡರು.ಈ ವೇಳೆ ಮಾತನಾಡಿದ ಹೋರಾಟ ವೇದಿಕೆ ಮುಖಂಡ ಅನಿಲ್‌ಕುಮಾರ್, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಪಕ್ಷ ಹಾಗೂ ಧರ್ಮ ಬಿಟ್ಟು ಹೋರಾಡಬೇಕು. ದೇಶಕ್ಕೆ ಅತಿದೊಡ್ಡ ಕವಚ ಸಂವಿಧಾನ. ನ್ಯಾಯಮೂರ್ತಿಗಳ ಮೇಲೆ ಶೂ ಎಸೆದಿರುವ ವ್ಯಕ್ತಿಯನ್ನು ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.ರಾಜತಾಂತ್ರಿಕ ವ್ಯವಸ್ಥೆಯಲ್ಲಿ ರಾಜರೇ ಪ್ರಭುಗಳಾಗಿದ್ದರು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಪ್ರಜೆಗಳೇ ಪ್ರಭುಗಳು. ಅದಕ್ಕಾಗಿ ಡಾ. ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿ ನ್ಯಾಯಾಂಗ ವ್ಯವಸ್ಥೆ ನಿರ್ಮಿಸಿದರು. ಆದರೆ, ಮನುವಾದಿ ವ್ಯಕ್ತಿತ್ವ ವುಳ್ಳ ವಕೀಲರು ಮುಖ್ಯ ನ್ಯಾಯಮೂರ್ತಿಗೆ ಅಪಮಾನಿಸಿ ರಾಷ್ಟ್ರದ ಐಕ್ಯತೆ, ಸಂವಿಧಾನವನ್ನು ಅಗೌರವಿಸಿದ್ದಾರೆ ಎಂದು ದೂರಿದರು.ಇತ್ತೀಚಿನ ದಿನಗಳಲ್ಲಿ ಜೈಭೀಮ್ ಘೋಷಣೆಗಳು ಕೆಲವರಿಗೆ ನೋವುಂಟು ಮಾಡುತ್ತಿವೆ. ಈ ಪ್ರಕರಣ ಗಮನಿಸಿದರೆ ಇಂದಿಗೂ ಅಸ್ಪೃಶ್ಯತೆ, ಜಾತಿ ವ್ಯವಸ್ಥೆ ಕಣ್ಮುಂದಿರಲು ಈ ಘಟನೆಯೇ ಸಾಕ್ಷಿ. ಹೀಗಾಗಿ ಈ ಘಟನೆ ಮರುಕಳಿಸದಂತೆ ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸಬೇಕು. ಅಲ್ಲದೇ ವಕೀಲ ರಾಕೇಶ್ ಕಿಶೋರ್ ಪರ ಸಮರ್ಥಿಸುವವರ ವಿರುದ್ಧ ಕ್ರಮ ವಹಿಸಬೇಕು ಎಂದರು.ಸರ್ವರಿಗೂ ಸಮಪಾಲು, ಸಮಬಾಳು ಹಾಗೂ ಮತದಾನದ ಹಕ್ಕನ್ನು ನೀಡಿದವರು ಅಂಬೇಡ್ಕರ್. ಅದೇ ಸಂವಿಧಾನವನ್ನು ಓದಿದ ವಕೀಲ ರಾಕೇಶ್, ನ್ಯಾಯಮೂರ್ತಿಗಳಿಗೆ ಅಪಮಾನಿಸಿರುವುದು ಸರಿಯಲ್ಲ. ಭಾರತಕ್ಕೆ ಸಂವಿಧಾನವೇ ಶ್ರೇಷ್ಠ, ಹಾಗಾಗಿ ಸಾರ್ವಜನಿಕರು ಈ ಕೃತ್ಯವೆಸಗಿರುವವರ ವಿರುದ್ಧ ಎಲ್ಲೆಡೆ ಕೇಸು ದಾಖಲಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿ, ದೇಶದಲ್ಲಿ ಅಹಿತಕರ ಘಟನೆ ಇಂದು ನಡೆದಿದೆ. ಆರ್‌ಎಸ್‌ಎಸ್ ಸಂಸ್ಕೃತಿಯ ವಕೀಲರು ನ್ಯಾಯಮೂರ್ತಿಗೆ ಶೂ ಎಸೆದು ದೇಶದ ನಾಗರಿಕತೆಗೆ ಧಕ್ಕೆಯುಂಟು ಮಾಡಿದ್ದಾರೆ. ಇದು ಭಾರತೀಯರಿಗೆ ತುಂಬಲಾರದ ನೋವುಂಟಾಗಿದೆ. ಆದ್ದರಿಂದ ಅಪರಾಧವೆಸಗಿರುವ ವಕೀಲನನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದರು.ಆರ್‌ಎಸ್‌ಎಸ್ ಶತಬ್ದಿ ಸಂಭ್ರಮದಲ್ಲಿ ದೇಶದ ವಿವಿಧೆಡೆ ಕವಾಯಿತು ನಡೆಸಿದ ಸ್ವಯಂ ಸೇವಕರು, ಒಮ್ಮೆಯಾದರೂ ಅಪಮಾನಕ್ಕೆ ಒಳಗಾದ ನ್ಯಾಯಮೂರ್ತಿಗಳ ಪರವಾಗಿ ನಿಲ್ಲದೇ ಮೌನ ವಹಿಸಿದ್ದಾರೆ. ದೆಹಲಿಯಲ್ಲಿ ರೈತರು ಧಾರುಣ ಸಾವಿಗೆ ತುತ್ತಾದರೂ ಬಿಜೆಪಿ ಅಥವಾ ಆರ್‌ಎಸ್‌ಎಸ್ ಮಾತನಾಡಿಲ್ಲ. ಕೇವಲ ಕ್ಷುಲಕ ಕಾರಣಕ್ಕಾಗಿ ಅರ್ಥವಿಲ್ಲದೇ ಚಳುವಳಿ ನಡೆಸುತ್ತಿದೆ ಎಂದು ಆರೋಪಿಸಿದರು.ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ, ನ್ಯಾಯಮೂರ್ತಿಗೆ ಅವಮಾನಿಸಿರುವ ವಕೀಲನನ್ನು ರಾಷ್ಟ್ರದ್ರೋಹದಡಿ ಗಲ್ಲಿಗೇರಿಸಬೇಕು. ಸಾವಿರಾರು ವರ್ಷಗಳಿಂದ ವರ್ಣನೀತಿ ಪದ್ಧತಿ ಜಾರಿಯಾಗಿ ದಲಿತರಿಗೆ ಅನ್ಯಾಯ, ದಬ್ಬಾಳಿಕೆಗಳು ಅವ್ಯಹತವಾಗಿ ನಡೆದಿದೆ. ಇಂದಿಗೂ ದೇಶದಲ್ಲಿ ಶೇ.85 ಬಹುಸಂಖ್ಯಾತರು ಅಧಿಕಾರ ಹೀನವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದರು.

ಭೀಮ್ ಆರ್ಮಿ ಗೌರವಾಧ್ಯಕ್ಷ ಹೊನ್ನೇಶ್ ಮಾತನಾಡಿ, ಮುಖ್ಯ ನ್ಯಾಯಮೂರ್ತಿ ದಲಿತರೆಂಬ ಕಾರಣಕ್ಕಾಗಿ ಮನುವಾದಿ ವಕೀಲರು ಶೂ ಎಸೆದು ಅವಮಾನಿಸಲು ಮುಂದಾಗಿರುವುದು ಖಂಡನೀಯ. ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಿ, ವಕೀಲ ವೃತ್ತಿಗೆ ರಾಜೀನಾಮೆ ಸಲ್ಲಿಸಬೇಕು. ನ್ಯಾಯಮೂರ್ತಿಗೆ ಅಗೌರವಿಸುವ ವಕೀಲರನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿದರು.ಜುಮ್ಮಾ ಮಸೀದಿಯ ನಾಸೀರ್ ಮಾತನಾಡಿ, ಸಂವಿಧಾನ ಮತ್ತು ನ್ಯಾಯಪೀಠಕ್ಕೆ ಅಪಮಾನಿಸಿರುವವರ ವಿರುದ್ಧ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಯಾವುದೇ ರೀತಿ ಅನುಕಂಪ ವ್ಯಕ್ತಪಡಿಸದೇ ಕಾನೂನಾತ್ಮಕವಾಗಿ ನ್ಯಾಯ ಬದ್ಧ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ನಯಾಜ್, ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ್, ಭೀಮ್ ಆರ್ಮಿ ಅಧ್ಯಕ್ಷ ಗಿರೀಶ್, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ. ರಾಜೇಗೌಡ, ನಗರಸಭೆ ಸದಸ್ಯ ಮುನೀರ್ ಅಹ್ಮದ್, ಎಸ್ಸಿಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್, ಮುಖಂಡರಾದ ಹಿರೇಮ ಗಳೂರು ಜಗದೀಶ್, ಸತೀಶ್, ಕೋಟೆ ಜಗದೀಶ್, ಮೋಹನ್, ಸುಮಂತ್, ರಮೇಶ್, ಸುಧೀರ್ ಪಾಲ್ಗೊಂಡಿದ್ದರು. 16 ಕೆಸಿಕೆಎಂ 1ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ತೂರಿರುವ ವಕೀಲರ ಪ್ರತಿಕೃತಿಯನ್ನು ಗುರುವಾರ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಪ್ರತಿಕೃತಿ ದಹನ ಮಾಡಲಾಯಿತು.