ಕನ್ನಡಪ್ರಭ ವಾರ್ತೆ ನಾಪೋಕ್ಲು

ಮಲ್ಮಾ ಬೆಟ್ಟದ ಪರಿಸರ ಕಕ್ಕಬ್ಬೆ, ನೆಲಜಿ ಹಾಗೂ ಪೇರೂರು ಗ್ರಾಮಗಳ ಇಗ್ಗುತ್ತಪ್ಪ ದೇವಾಲಯಗಳಿಗೆ ಸಂಬಂಧಿಸಿದ ಪವಿತ್ರ ನೆಲೆಯಾಗಿದ್ದು ಇಲ್ಲಿ ಕೃಷಿ ಚಟುವಟಿಕೆ ಹೊರತುಪಡಿಸಿ ಪ್ರವಾಸೋದ್ಯಮ ಸೇರಿದಂತೆ ಇತರ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಬಲವಂತದಿಂದ ಅಂತಹ ಚಟುವಟಿಕೆಗಳನ್ನು ಕೈಗೊಂಡಲ್ಲಿ ಕೊಡವ ಸಮಾಜ, ಕೊಡವ ಸಂಘಟನೆಗಳ ಸಹಯೋಗದಲ್ಲಿ ಜಿಲ್ಲೆಯಾದ್ಯಂತ ಆಂದೋಲನ, ಹೋರಾಟ ನಡೆಸಲಾಗುವುದು ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಹಾಗೂ ದೇಶ ತಕ್ಕರೂ ಆದ ಪರದಂಡ ಸುಬ್ರಮಣಿ ಕಾವೇರಪ್ಪ ಹೇಳಿದರು.

ನೆಲಜಿ ಗ್ರಾಮದ ಶ್ರಿ ಇಗ್ಗುತ್ತಪ್ಪ ದೇವಸ್ಥಾನದ ಹಾಗೂ ಮಲ್ಮ ಬೆಟ್ಟದ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಕಾಮಗಾರಿಯ ವಿರುದ್ಧ ನೆಲಜಿ ಗ್ರಾಮಸ್ಥರು ಗ್ರಾಮದ ದವಸ ಭಂಡಾರದಲ್ಲಿ ಶನಿವಾರ ಆಯೋಜಿಸಿದ್ದ ವಿಶೇಷ ಸಭೆ ಪಾಲ್ಗೊಂಡು ಮಾತನಾಡಿದರು.

ಪ್ರಬಲ ವಿರೋಧವಿದೆ:

ನೆಲಜಿ ಗ್ರಾಮದ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ಮೇಲ್ ಭಾಗದ ಮತ್ತು ಮಲ್ಮ ಬೆಟ್ಟದ ಕೆಳಭಾಗದಲ್ಲಿ ನೆಲಜಿ ಗ್ರಾಮದ ಮುಕ್ಕಾಟೀರ, ಚಿಯಕಪೂವಂಡ ಮತ್ತು ಮೊಣ್ಣಂಡ ಕುಟುಂಬದ ಕೆಲವರು ಅನ್ಯ ಧರ್ಮದವರಿಗೆ ಆಸ್ತಿಯನ್ನು ಮಾರಾಟ ಮಾಡಿದ್ದು ಆಸ್ತಿ ಕೊಂಡವರು ಮನಸ್ಸು ಇಚ್ಛೆಯಂತೆ ಕಾಮಗಾರಿ ಮಾಡುತ್ತಿರುವುದರಿಂದ ಪರಿಸರಕ್ಕೆ ಧಕ್ಕೆ ಆಗುತ್ತಿದೆ. ಕೃಷಿ ಹೊರ ತುಪಡಿಸಿ ಇದರ ಚಟುವಟಿಕೆಗಳಿಗೆ ಗ್ರಾಮಸ್ಥರ ಪ್ರಬಲ ವಿರೋಧವಿದೆ. ಬಲ್ಲಮಾವಟ್ಟಿ ಗ್ರಾಮ ಪಂಚಾಯಿತಿಯ ಅನುಮತಿ ಇಲ್ಲದೆ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಜೂನ್ 20 ರಂದು ವಿಶೇಷ ಗ್ರಾಮ ಸಭೆಯನ್ನು ಕರೆಯಲಾಗಿದೆ. ಈ ಸಭೆಯ ಫಲಶೃತಿಯನ್ನು ಆಧರಿಸಿ ನಿರ್ಣಯ ಕೈಗೊಳ್ಳಲಾಗುವುದು. ಮಲ್ಮ ಪರಿಸರಕ್ಕೆ ತೊಂದರೆ ಆದರೆ ಕೊಡಗಿನ ಜನರ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ. ಪ್ರಕೃತಿ ನಾಶಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದರು.


ಅಖಿಲ ಕೊಡವ ಸಮಾಜದ ಖಜಾಂಜಿ ಕಾಯಪಂಡ ಸುನಿಲ್ ಮಾತನಾಡಿ, ಗ್ರಾಮಸ್ಥರು ಅನ್ಯ ಧರ್ಮೀಯರಿಗೆ ಆಸ್ತಿಯನ್ನು ಮಾರಾಟ ಮಾಡುವುದು ಸಲ್ಲದು. ಊರಿನ ಕಟ್ಟುಪಾಡುಗಳನ್ನು ನಾಡಿನ ಜನ ಪಾಲಿಸುತ್ತಿದ್ದಾರೆ. ಜನರ ಆಚಾರ-ವಿಚಾರ ಸಂಸ್ಕೃತಿಗೆ ಧಕ್ಕೆಯಾದಲ್ಲಿ ಇದನ್ನು ಪ್ರಬಲವಾಗಿ ಪ್ರತಿಭಟಿಸಲಾಗುವುದು ಎಂದರು.

ಅಖಿಲ ಕೊಡವ ಸಮಾಜದ ಕಾನೂನು ಸಲಹೆಗಾರ ಕುಟ್ಟಂಡ ವಿಜಯ್ ಉತ್ತಪ್ಪ ಮಾತನಾಡಿ, ಖರೀದಿಸಿದ ಜಾಗ ಖರೀದಿದಾರರ ಸ್ವತ್ತು. ದೇವಾಲಯದ ಸುತ್ತ ಕೃಷಿ ಹೊರತುಪಡಿಸಿ ಇದರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲು ಗ್ರಾಮಸ್ಥರ ವಿರೋಧವಿದೆ ಎಂಬುದನ್ನು ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಕಾನೂನು ಮಾರ್ಗದರ್ಶನ ಮಾಡಿದರು.

ಪಾಡಿ ಇಗ್ಗುತ್ತಪ್ಪ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಚಮಂಡ ರಾಜ ಪೂವಣ್ಣ ಮಾತನಾಡಿ, ಖರೀದಿ ಮಾಡಿದ ಜಾಗದಲ್ಲಿ ಕೃಷಿ ಚಟುವಟಿಕೆಗಳನ್ನು ಬಿಟ್ಟು ಇನ್ನಿತರ ಕೆಲಸಗಳನ್ನು ಮಾಡುವುದು ಸರಿಯಲ್ಲ. ಈ ಬಗ್ಗೆ ಅವರಿಗೆ ಸರಿಯಾದ ಮಾರ್ಗದರ್ಶನ ಮಾಡುವಂತಾಗಬೇಕು ಎಂದು ಸಾಧಕ ಬಾಧಕಗಳ ಬಗ್ಗೆ ತಮ್ಮ ಅಭಿಪ್ರಾಯ ಹಾಗೂ ಅನುಭವವನ್ನು ವ್ಯಕ್ತಪಡಿಸಿದರು.

ಧಕ್ಕೆ ತರಬಾರದು:

ಪೇರೂರು ಇಗ್ಗುತ್ತಪ್ಪ ದೇವಾಲಯದ ಅಧ್ಯಕ್ಷ ಮಚ್ಚೂರ ರವೀಂದ್ರ ಮಾತನಾಡಿ, ಈಗಾಗಲೇ 80 ಎಕರೆಷ್ಟು ಜಾಗವನ್ನು ಮಾರಾಟ ಮಾಡಲಾಗಿದೆ. ಅದರಲ್ಲಿ 10 ಎಕರೆ ಜಾಗವನ್ನು ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ. ಮಲ್ಮ ಬೆಟ್ಟಕ್ಕೆ ತೆರಳುವ ರಸ್ತೆಯ ಒತ್ತುವರಿ ಮಾಡಬಾರದು. ಧಾರ್ಮಿಕ ಚಟುವಟಿಕೆಗಳಿಗೆ ಧಕ್ಕೆ ತರಬಾರದು ಎಂಬುದು ನಮ್ಮ ಒತ್ತಾಸೆ ಎಂದರು.

ಬಲ್ಲಮಾವಟ್ಟಿಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಣವಟ್ಟಿರ ಹರೀಶ್ ಕುಶಾಲಪ್ಪ ಪ್ರಸ್ತುತ ಬೆಳವಣಿಗೆಗಳ ಬಗ್ಗೆ ತಮ್ಮ ಬೇಸರವನ್ನು ವ್ಯಕ್ತಪಡಿಸಿ ಮುಂದೆ ಎಲ್ಲರೂ ಪಕ್ಷತೀತವಾಗಿ ಈ ಹೋರಾಟಕ್ಕೆ ಸಂಪೂರ್ಣ ಸಹಕಾರ ನೀಡಬೇಕೆಂದು ಅವರು ಎಲ್ಲರ ಒಪ್ಪಿಗೆಯಂತೆ ಶೀಘ್ರವೇ ವಿಶೇಷ ಗ್ರಾಮ ಪಂಚಾಯಿತಿ ಸಭೆಯನ್ನು ಕರೆದು ಎಲ್ಲಾ ಗ್ರಾಮಸ್ಥರು ಒಮ್ಮತದ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗಳ ಮೂಲಕ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದರು.

ಸಂಪೂರ್ಣ ಬೆಂಬಲ:

ಪುಲಿಕೋಟು ಕೋಟೆ ಭಗವತಿ ದೇವಾಲಯದ ಅಧ್ಯಕ್ಷ ಕರವಂಡ ಲವ ನಾಣಯ್ಯ ಮಾತನಾಡಿ, ತಮ್ಮ ಗ್ರಾಮದಲ್ಲಿಯೂ ಇಂತಹದೇ ಪರಿಸ್ಥಿತಿ ನಿರ್ಮಾಣವಾಗಿತ್ತು ನಾವೆಲ್ಲರೂ ಒಗ್ಗಟ್ಟಾಗಿ ಸಮಸ್ಯೆಯನ್ನು ಬಗೆಹರಿಸಿದ ಬಗ್ಗೆ ವಿವರಿಸಿ ಅದೇ ರೀತಿ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.

ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಪೇರೇರ ಬಿದ್ದಪ್ಪ, ಕಾರ್ಯದರ್ಶಿ ಚೊಟ್ಟಂಡ ಪ್ರಭು ಸೋಮಯ್ಯ, ಸಹ ಕಾರ್ಯದರ್ಶಿ ಚೇದ್ರೀಮಾಡ ಪೃಥ್ವಿ , ತಕ್ಕ ಮುಖ್ಯಸ್ಥರಾದ ಬದಂಜೆಟ್ಟಿರ ನಾಣಯ್ಯ , ಕೈಬುಳಿರ ಸಾಬು, ಬಾಲೆಯಡ ರಾಜ, ನಾಪನೆರವಂಡ ಮಿಟ್ಟು. ಮುಕ್ಕಾಟಿರ ವಿನಯ್, ನೆರವಂಡ ಉಮೇಶ್, ಮನವಟ್ಟಿರ ಪಾಪು ಚಂಗಪ್ಪ, ಬೊಳಿಯಾಡಿರ ಸಂತು ಸುಬ್ರಮಣಿ, ನಾಪನೆರವಂಡ ಮಿಟ್ಟು, ಮಾಲೆಯಂಡ ವಿಜು ಅಪ್ಪಚ್ಚ, ಚೀಯಕಪೂವಂಡ ಕಂಬು ಇನ್ನಿತರರು ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ನೆಲಜಿ, ಕಕ್ಕಬೆ, ಪೆರೂರು, ಪುಲಿಕೋಟ್ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು . ದಯಾ ಚಿನ್ನಪ್ಪ ಪ್ರಾರ್ಥಿಸಿದ ಸಭೆಯಲ್ಲಿ ಮನವಟ್ಟಿ ಅರುಣ ಕಾವೇರಪ್ಪ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.