ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರವೂ ನೀಡಿಲ್ಲ ।

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜಿಲ್ಲೆಯ ಐದಕ್ಕೆ ಐದೂ ವಿಧಾನಸಭಾ ಕ್ಷೇತ್ರಗಳಿಂದ ಕಾಂಗ್ರೆಸ್‌ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿದರೂ ರಾಜ್ಯದ ಕಾಂಗ್ರೆಸ್‌ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಯಾವುದೇ ಮಹತ್ವದ ಯೋಜನೆಗಳನ್ನು ಚಿಕ್ಕಮಗಳೂರು ಜಿಲ್ಲೆಗೆ ನೀಡದೆ ಈ ಬಾರಿಯೂ ತನ್ನ ಮಲತಾಯಿ ಧೋರಣಿ ಮುಂದುವರಿಸಿದಂತೆ ಕಾಣುತ್ತಿದೆ.

ಹೌದು, ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಭೌಗೋಳಿಕವಾಗಿ ಚಿಕ್ಕಮಗಳೂರು ಜಿಲ್ಲೆ ವಿಭಿನ್ನವಾಗಿದೆ. ಒಂದು ಕಡೆ ಅತಿ ಮಳೆ ಸುರಿಯುವ ಗಿರಿಧಾಮಗಳಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷ. ಮತ್ತೊಂದು ಕಡೆ ಬರ ಪೀಡಿತ ಬಯಲು ಸೀಮೆ ಯಲ್ಲಿ ಬಿತ್ತಿದ ಬೆಳೆ ಕೈ ಸೇರಲಿದೆ ಎಂಬ ಖಾತ್ರಿ ಇಲ್ಲದ ಬದುಕು ಇಲ್ಲಿನ ಜನರದಾಗಿದೆ.


ಸಾಕ್ಷರತೆಯಲ್ಲಿ ಅತ್ಯುತ್ತಮವಾಗಿದ್ದರೂ, ಉದ್ಯೋಗಕ್ಕಾಗಿ ಬೆಂಗಳೂರು, ಮುಂಬೈ, ಹೈದರಾಬಾದ್‌, ದೆಹಲಿ, ಗೋವಾ ದಂತಹ ಮಹಾನಗರ ಕಡೆಗೆ ಸಾಗಬೇಕಾದ ಅನಿವಾರ್ಯತೆ ಯುವಜನರದು.

ಈ ಎಲ್ಲವೂ ಈ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಗೊತ್ತಿದ್ದರೂ, ತಮ್ಮ ನಾಯಕರ ಮೇಲೆ ಒತ್ತಡ ಹಾಕಿ ಕೈಗಾರಿಕೆ, ಪ್ರವಾಸೋದ್ಯಮ, ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಒಂದೇ ಒಂದು ಯೋಜನೆ ಮಂಜೂರು ಮಾಡಿಸಿಕೊಂಡು ಬರುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂಬ ಗಂಭೀರ ಆರೋಪ ಇದೀಗ ಕೇಳಿ ಬರುತ್ತಿದೆ.

ರೋಪ್‌ ವೇ ಘೋಷಣೆಗೆ ಸೀಮಿತ:

ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೂ ಮುಳ್ಳಯನಗಿರಿ, ಸೀತಾಳಯ್ಯನಗಿರಿಯಿಂದ ಕೈಮರದವರೆಗೆ ರೋಪ್‌ ವೇ ನಿರ್ಮಾಣದ ಘೋಷಣೆ ಮಾಡಲಾಗಿತ್ತು. ಅದೇ ರೀತಿ ಸಿದ್ದರಾಮಯ್ಯ ಸರ್ಕಾರವೂ ಘೋಷಿಸಿದೆ. ಅರಣ್ಯ ಇಲಾಖೆ ಹಾಗೂ ಪುರಾತತ್ವ ಇಲಾಖೆಯಿಂದ ಸಾಕಷ್ಟು ಅನುಮತಿ ಬೇಕಾಗಲಿವೆ. ಈ ಯೋಜನೆ ಕಾರ್ಯಗತವಾಗುವುದಿಲ್ಲ ಎಂಬುದು ಗೊತ್ತಿದೆ. ಹಾಗಾಗಿಯೇ ಘೋಷಣೆ ಮಾಡಲಾಗಿದೆ. ಇದು ಕಾರ್ಯಸಾಧುವಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ ಎಂಬ ಆರೋಪ ವ್ಯಕ್ತವಾಗಿದೆ.

ಇರುವ ವಸತಿ ಶಾಲೆಗಳಲ್ಲಿಯೇ ಮಕ್ಕಳಿಲ್ಲ: ಈಗಾಗಲೇ ಜಿಲ್ಲೆಯಲ್ಲಿ ವಿವಿಧ ಇಲಾಖೆಯಿಂದ ವಸತಿ ಶಾಲೆಗಳು ನಡೆಸ ಲಾಗುತ್ತಿದೆ. ಆ ಶಾಲೆಗಳಲ್ಲೇ ಮಕ್ಕಳ ಸಂಖ್ಯೆ ಕಡಿಮೆ ಇದೆ. ಈ ನಡುವೆ ರಾಜ್ಯ ಸರ್ಕಾರ ತರೀಕೆರೆ ಹಾಗೂ ಕಡೂರಿನಲ್ಲಿ ಕಾರ್ಮಿಕ ಇಲಾಖೆಯಿಂದ ಶ್ರಮಿಕ ವಸತಿ ಶಾಲೆ ಆರಂಭಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿದೆ. ಇದರಿಂದ ಎಷ್ಟು ಉಪ ಯೋಗ ಆಗಲಿದೆ ಎಂಬುದು ಗೊತ್ತಿಲ್ಲ.

ಹೊಸ ನೀರಾವರಿ ಯೋಜನೆಗಳಿಲ್ಲ: ಈ ಹಿಂದೆ ಘೋಷಣೆ ಮಾಡಿದ ನೀರಾವರಿ ಏತ ನೀರಾವರಿ ಯೋಜನೆಗಳನ್ನು ಮುಂದುವರೆಸುವ ಬಗ್ಗೆ ಪ್ರಸಕ್ತ ಬಜೆಟ್‌ನಲ್ಲಿ ಹೇಳಲಾಗಿದೆ. ಸಣ್ಣ ನೀರಾವರಿ ಇಲಾಖೆಯಿಂದ ಕಡೂರಿನ 25 ಕೆರೆ ತುಂಬಿಸುವ ಯೋಜನೆ,ಕಾಲುವೆ ಪುನಶ್ಚೇತನ ಹಾಗೂ ಅಜ್ಜಂಪುರದ 19 ಕೆರೆಗಳನ್ನು ಏತ ನೀರಾವರಿ ಯೋಜನೆಯಡಿ ತುಂಬಿಸುವುದಾಗಿ ಘೋಷಿಸಲಾಗಿದೆ. ಅದನ್ನು ಬಿಟ್ಟು ಹೊಸದಾಗಿ ಯಾವುದೇ ಯೋಜನೆ ಘೋಷಿಸಿಲ್ಲ.

ಕೃಷಿ, ತೋಟಗಾರಿಕೆಗೆ ಆದ್ಯತೆ ಇಲ್ಲ:

ಜಿಲ್ಲೆಯಲ್ಲಿ ಅತಿ ಹೆಚ್ಚು ಕಾಫಿ, ಅಡಕೆ, ಕಾಳು ಮೆಣಸು ಬಳೆಯಾಗುತ್ತದೆ. ಕಾಫಿ ಬ್ರ್ಯಾಂಡ್‌ ಆರಂಭಿಸಬೇಕು ಎಂದು ಹಲವು ವರ್ಷದ ಬೇಡಿಕೆ ಈ ಬಾರಿ ಬಜೆಟ್‌ನಲ್ಲೂ ಈಡೇರಿಲ್ಲ. ಇನ್ನೂ ಅಡಕೆ ಮತ್ತು ತೆಂಗು ಬೆಳೆಗಾರರು ರೋಗ ಬಾಧೆಯಿಂದ ಕಂಗಾಲಾಗಿದ್ದಾರೆ. ಅದಕ್ಕೆ ಜಿಲ್ಲೆಗೆ ಯಾವುದೇ ವಿಶೇಷ ಪ್ಯಾಕೇಜ್‌ ಘೋಷಿಸಿಲ್ಲ. ಇನ್ನೂ ಕಾಳು ಮೆಣಸಿಗೆ ವಿದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಅದರ ಸಂಸ್ಕರಣೆ, ಶೇಖರಣೆಗೆ ಯಾವುದೇ ಕ್ರಮ ವಹಿಸದಿರುವುದು ರೈತರ ಅಸಮಧಾನಕ್ಕೆ ಕಾರಣವಾಗಿದೆ.

-- ಬಾಕ್ಸ್‌--

ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಚಿಕ್ಕಮಗಳೂರಿಗೆ ಸಿಕ್ಕಿದ್ದೇನು?

* ಪ್ರವಾಸೋದ್ಯಮ ಅಭಿವೃದ್ಧಿಗೆ ಮುಳ್ಳಯ್ಯನಗಿರಿ, ಸೀತಾಳಯ್ಯಗಿರಿಯಿಂದ ಕೈಮರದ ವರೆಗೆ ಪಿಪಿಪಿ ಮಾದರಿಯಲ್ಲಿ ರೋಪ್‌ ವೇ

* ಕಡೂರಿನ 25 ಕೆರೆ ತುಂಬಿಸುವುದು,ಕಾಲುವೆ ಪುನಶ್ಚೇತನ.

* ಏತನೀರಾವರಿ ಮೂಲಕ ಅಜ್ಜಂಪುರದ 19 ಕೆರೆ ತುಂಬಿಸುವುದು

* ಕಡೂರು ಮತ್ತು ತರೀಕೆರೆಯಲ್ಲಿ ಶ್ರಮಿಕ ವಸತಿ ಶಾಲೆಗೆ ಅನುಮೋದನೆ

* ಚಿಕ್ಕಮಗಳೂರಿನಲ್ಲಿ ₹6 ಕೋಟಿ ವೆಚ್ಚದಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣ

* ತರೀಕೆರೆಯಲ್ಲಿ ಬಸ್‌ ಡಿಪೋ ಆರಂಭ

* ಚಿಕ್ಕಮಗಳೂರು ಜಿಲ್ಲೆಯ ಇಎಸ್‌ಐ ಚಿಕಿತ್ಸಾಲಯಗಳ ಉನ್ನತೀಕರಣಕ್ಕೆ ಕ್ರಮ

* ಮಲೆನಾಡು ಮತ್ತು ಕರಾವಳಿಯ ಸಂಪರ್ಕ ರಹಿತ ಪ್ರದೇಶಕ್ಕೆ 300 ಕಾಲು ಸಂಕಗಳ ನಿರ್ಮಾಣ.

* ಕೇಂದ್ರ ಹಾಗೂ ರಾಜ್ಯ ಸರ್ಕಾರದ ಶೇ.50:50 ಪಾಲುದಾರಿಕೆ ಚಿಕ್ಕಮಗಳೂರು- ಬೇಲೂರು ರೈಲ್ವೆ ಯೋಜನೆ ಸೇರಿದಂತೆ ಒಟ್ಟು ರಾಜ್ಯ 7 ಯೋಜನೆಗೆ ಪ್ರಸಕ್ತ ವರ್ಷ ₹600 ಕೋಟಿ ನೀಡುವ ಘೋಷಣೆ.

* ಮೀನು ಆಹಾರ ಸೇವನೆ ಉತ್ತೇಜಿಸಲು ಹಾಗೂ ಜನರಿಗೆ ಸ್ವಚ್ಛ ಮತ್ತು ಗುಣಮಟ್ಟದ ಮೀನು ಲಭ್ಯಕ್ಕೆ ಚಿಕ್ಕಮಗಳೂರಿನಲ್ಲಿ ಮತ್ಯ್ಸದರ್ಶಿನಿ ಸ್ಥಾಪನೆ. ---ಕೋಟ್‌--

ಸಿದ್ದರಾಮಯ್ಯ ಅವರ ಬಜೆಟ್‌ ಸರ್ವಸ್ಪರ್ಶಿ ಬಜೆಟ್‌ . ವಿಶೇಷವಾಗಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಬಜೆಟ್‌ನಲ್ಲಿ ರೋಪ್‌ ವೇ ನಿರ್ಮಾಣಕ್ಕೆ ಘೋಷಿಸಲಾಗಿದೆ. ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣ, ಮತ್ಸ ದರ್ಶಿನಿ ಸ್ಥಾಪನೆ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಹಲವು ಯೋಜನೆ ಘೋಷಿಸಲಾಗಿದೆ. ಕೆಲವು ಘೋಷಣೆ ಮಾಡಿಲ್ಲ. ಆದರೆ, ಅನುದಾನ ದೊರೆಯಲಿದೆ. ಜಿಲ್ಲೆಯ ನಿರೀಕ್ಷೆ ಸಾಕಷ್ಟು ಇದ್ದು, ಹಂತ ಹಂತವಾಗಿ ಅನುದಾನ ಪಡೆದು ಅಭಿವೃದ್ಧಿ ಕಾರ್ಯ ನಡೆಸಲಾಗುವುದು.

ಎಚ್‌.ಡಿ.ತಮ್ಮಯ್ಯ, ಶಾಸಕ, ಚಿಕ್ಕಮಗಳೂರು