ರಾಜಕೀಯ ಉದ್ಯೋಗವಲ್ಲ, ಸೇವೆ: ಸಾಗರ ಖಂಡ್ರೆ

| Published : Sep 15 2024, 01:48 AM IST

ಸಾರಾಂಶ

ಬೀದರ್‌ನ ಕರ್ನಾಟಕ ಕಾಲೇಜಿನಲ್ಲಿ ಸಂಸದ ಸಾಗರ ಖಂಡ್ರೆ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ರಾಜಕೀಯ ಅನ್ನೋದು ಉದ್ಯೋಗವಲ್ಲ ಅದನ್ನು ಸೇವೆ ಎಂದು ಭಾವಿಸಿ ಜನ ಸೇವೆ ಮಾಡಲು ದೊರೆತ ಅವಕಾಶವೆಂದು ತಿಳಿದು ರಾಜಕಾರಣಕ್ಕೆ ಬಂದಿದ್ದೇನೆ ಎಂದು ಸಂಸದ ಸಾಗರ ಖಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ನನ್ನ ಬಗ್ಗೆ ಏನೇ ಟೀಕೆ ಟಿಪ್ಪಣೆಗಳಿದ್ದರೂ ಅಭಿವೃದ್ಧಿ ಮೂಲಕ ಜನ ಸಾಮಾನ್ಯರ ಹೃದಯದಲ್ಲಿರಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಬೀದರ್‌ ಮಾದರಿ ಜಿಲ್ಲೆಯನ್ನಾಗಿ ಮಾಡಬೇಕು ಎಂಬುದು ನನ್ನ ಕನಸ್ಸು. ಈ ಭಾಗದ ಜ್ವಲಂತ ಸಮಸ್ಯಗಳಿಗೆ ಆದ್ಯತೆ ಕೊಟ್ಟು ಅಭಿವೃದ್ಧಿ ಕಾರ್ಯಗಳಿಗೆ ಪ್ರಮಾಣಿಕವಾಗಿ ಪ್ರಯತ್ನಿಸುತ್ತೇನೆ. ಈಗಾಗಲೇ ಹಲವಾರು ಇಲಾಖೆಯ ಕೇಂದ್ರ ಸಚಿವರೊಂದಿಗೆ ಸಂಪರ್ಕಿಸಿ ಪ್ರವಾಸೊದ್ಯಮ, ರೈಲ್ವೆ, ರೈತರ, ವಿಮಾನಯಾನ ಮುಂತಾದ ಸಮಸ್ಯಗಳನ್ನು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿ ಬಗೆಹರಿಸಲು ಪ್ರಮಾಣಿಕ ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಬಿ.ಜಿ.ಶೆಟಕಾರ ಮಾತನಾಡಿ, ಸಂಸದರು ಯುವಕರಾಗಿದ್ದು ಸಾಕಷ್ಟು ಅಭಿವೃದ್ಧಿ ಕನಸುಗಳನ್ನು ಹೊತ್ತುಕೊಂಡು ರಾಜಕೀಯಕ್ಕೆ ಬಂದಿದ್ದಾರೆ. ಇವರ ಮನೆತನದಿಂದಲೇ ಸಮಾಜ ಸೇವೆ ಮಾಡಬೇಕೆಂಬ ವಿಚಾರಗಳು ಬಾಲ್ಯದಿಂದಲೇ ಪ್ರಭಾವಿತರಾಗಿದ್ದಾರೆ ಹೀಗಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಬೇಕಾಗಿದೆ ಎಂದು ಹೇಳಿದರು.

ಈ ಭಾಗದ ರೈತರಿಗೆ, ವಿಶೇಷವಾಗಿ ಕಾರ್ಖಾನೆಗಳನ್ನು ತರುವುದರ ಮೂಲಕ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಟ್ಟಂತಾಗುತ್ತದೆ. ಜೊತೆಗೆ ನಮ್ಮ ಭಾಗದ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಧ್ವನಿಯೆತ್ತುವ ಮೂಲಕ ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿಯವರು, ಸಾರರ ಖಂಡ್ರೆಯವರು ಸಂಸದರಾದ ತಕ್ಷಣ ನಮ್ಮ ಭಾಗದ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಈಗಾಗಲೇ ಚರ್ಚೆಮಾಡುವ ಮೂಲಕ ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ. ಹಲವು ಟೀಕೆಗಳಿಗೆ ತಮ್ಮ ನಿರಂತರ ಅಭಿವೃದ್ಧಿ ಕಾರ್ಯಗಳ ಮೂಲಕ ಉತ್ತರಿಸುತ್ತಿದ್ದಾರೆ ಎಂದರು.

ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮ ಪಾರಾ, ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ್‌, ನ್ಯಾಸದ ಕಾರ್ಯದರ್ಶಿ ಮಡಿವಾಳಪ್ಪ ಗಂಗಶೆಟ್ಟಿ ಸೇರಿ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ಆಡಳಿತ ಮಂಡಳಿ ಸದಸ್ಯರು, ವಿವಿಧ ಅಂಗ ಸಂಸ್ಥೆಗಳ ಪ್ರಾಂಶುಪಾಲರು, ಉಪನ್ಯಾಸಕ ಬಾಂಧವರು ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.