ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮಹಿಳೆಯರಿಗೆ ಕರಕುಶಲ ತರಬೇತಿಯನ್ನು ಕೊಡಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸಬೇಕು ಎಂದು ಸ್ನೇಹ ಜ್ಯೋತಿ ಮಹಿಳಾ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಚಂದ್ರಶೇಖರ್ ಎಚ್.ಪಾಟೀಲ್ ಸಲಹೆ ನೀಡಿದರು.ನಗರದ ಭ್ರಮರಾಂಬ ಬಡಾವಣೆಯಲ್ಲಿ ಇರುವ ಸ್ನೇಹ ಜ್ಯೋತಿ ಮಹಿಳಾ ಸೌಹಾರ್ದ ಸಹಕಾರಿ ಸಂಘದ ಕಚೇರಿಯಲ್ಲಿ ನಡೆದ 2023- 24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.ಮುಂಬರುವ ಆರ್ಥಿಕ ವರ್ಷಗಳಲ್ಲಿ ಸಂಘದ ವತಿಯಿಂದ ಅಧಿಕವಾಗಿ ಷೇರು ಸಂಗ್ರಹಣೆ ಮಾಡುವುದರ ಜೊತೆಗೆ 240ಕ್ಕೂ ಹೆಚ್ಚು ಹೊಸ ಮಹಿಳಾ ಸ್ವ ಸಹಾಯ ಸಂಘವನ್ನು ರಚನೆ ಮಾಡಬೇಕು. ಈ ಮೂಲಕ ಮಹಿಳೆಯರಲ್ಲಿ ಉಳಿತಾಯ ಮಾಡುವ ಹವ್ಯಾಸವನ್ನು ಹೆಚ್ಚಿಸಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು ಎಂದು ತಿಳಿಸಿದರು.ಅಲ್ಲದೇ ಸಹಕಾರಿ ತತ್ವದಡಿಯಲ್ಲಿ ಎಲ್ಲಾ ತಾಲೂಕುಗಳಲ್ಲಿ ವಿವಿಧ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರಗಳನ್ನು ಸ್ಥಾಪನೆ ಮಾಡಿ ಷೇರುದಾರರು, ಮಹಿಳೆಯರು ಹಾಗೂ ಅವರ ಮಕ್ಕಳಿಗೆ ಹೊಲಿಗೆ, ಕಂಪ್ಯೂಟರ್ ಸೇರಿದಂತೆ ಹಲವು ಕುಶಲ ತರಬೇತಿಗಳನ್ನು ಕೊಡಿಸಬೇಕು ಎಂದು ತಿಳಿಸಿದರು.ನಂತರ ಸಂಘದ ಅಧ್ಯಕ್ಷರಾದ ನಾಗರತ್ನಮ್ಮ ಮಾತನಾಡಿ, ಮಹಿಳೆಯರು ಸಂಘದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.ಇದೇ ವೇಳೆ ಸಂಘದ ವಾರ್ಷಿಕ ವರದಿಯನ್ನು ಮಂಡಿಸಲಾಯಿತು. ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ನಿಂಗರಾಜಮ್ಮ, ಸಿಮ್ಸ್ ನ ಐಸಿಟಿಸಿ ಕೇಂದ್ರದ ಆಪ್ತ ಸಮಾಲೋಚಕರಾದ ಆಶಾ, ಸೇರಿದಂತೆ ಸಂಘದ ನಿರ್ದೇಶಕರು, ಸದಸ್ಯರು ಮತ್ತು ಷೇರುದಾರರು ಇದ್ದರು.