ಆತ್ಮಹತ್ಯೆಯಲ್ಲ, ಕೊಲೆ: ಪಾಲಕರ ಆರೋಪ, ಪ್ರತಿಭಟನೆ

| Published : Oct 06 2025, 01:00 AM IST

ಸಾರಾಂಶ

Not suicide, but murder: Parents' allegations, protest

- ಕೊಡೇಕಲ್‌ ಸಮೀಪದ ನೇಳಗುಂಡ ತಾಂಡಾದಲ್ಲಿ ವ್ಯಕ್ತಿಯೊಬ್ಬರನ ಅನುಮಾನಸ್ಪದ ಸಾವು ಪ್ರಕರಣ

- ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೊಲೆಯಾದಾತನ ಪತ್ನಿಯ ಮೇಲೂ ಪೊಲೀಸ್‌ ಸಂಶಯ

--

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ಹುಣಸಗಿ ತಾಲೂಕಿನ ನೇಳಗುಂಡ ತಾಂಡಾದಲ್ಲಿ ಇದೇ ಸೆ.26 ರಂದು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ 32 ವರ್ಷ ವಯಸ್ಸಿನ ಬಸವರಾಜ್‌ ಎಂಬಾತನ ಮೃತದೇಹದ ಪ್ರಕರಣ ಇದೀಗ ಜೀವ ತೆಳೆದಿದೆ.

ತಮ್ಮ ಮಗನದ್ದು ಆತ್ಮಹತ್ಯೆಯಲ್ಲ, ಇದೊಂದು ವ್ಯವಸ್ಥಿತ ಕೊಲೆ ಎಂದು ಮೃತ ಬಸವರಾಜನ ಪೋಷಕರು ಆರೋಪಿಸಿದ್ದಾರೆ. ಬಸವರಾಜ್‌ನ ಪತ್ನಿ ಅನಸೂಯ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ತಿರುಪತಿ ಎಂಬಾತನೇ ಈ ಕೊಲೆ ಮಾಡಿದ್ದಾನೆಂದು ಆರೋಪಿಸಿದ ಬಸವರಾಜ್‌ನ ತಂದೆ ತಿಪ್ಪಣ್ಣ, ಸಂಬಂಧಿಕರು ಹಾಗೂ ತಾಂಡಾ ಜನರೊಡಗೂಡಿ ಪೊಲೀಸ್‌ ಠಾಣೆಯೆದುರು ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ನಡೆದಿದೆ.

ಕೊಲೆ ಮಾಡಿದೆಯೆನ್ನಲಾದ ಬಗ್ಗೆ ಮೇಲ್ನೋಟಕ್ಕೆ ಪ್ರಾಥಮಿಕ ಮರಣೋತ್ತರ ವರದಿಯಲ್ಲಿ ಕಂಡುಬರುತ್ತಿದ್ದರೂ, ಆರೋಪಿ ತಿರುಪತಿ ಎಂಬಾತನನ್ನು ರಾಜಕೀಯ ಪ್ರಭಾವದಿಂದಾಗಿ ಪೊಲೀಸರು ಬಂಧಿಸುತ್ತಿಲ್ಲ ಎಂದು ಆಕ್ರೋಶಗೊಂಡ ತಾಂಡಾ ಜನರು,

ಬಿಜೆಪಿ ಮುಖಂಡ ಬಬ್ಲೂಗೌಡ ನೇತೃತ್ವದಲ್ಲಿ ಠಾಣೆಯೆದುರು ಜಮಾಯಿಸಿ, ಆರೋಪಿ ಬಂಧನಕ್ಕೆ ಆಗ್ರಹಿಸಿದ್ದರು.

ಇನ್ನು, ಠಾಣೆಯೆದುರು ನಡೆದ ಈ ಪ್ರತಿಭಟನೆಯಲ್ಲಿ ಮೃತ ಬಸವರಾಜ್‌ನ ಪತ್ನಿ ಅನಸೂಯ ಪಾಲ್ಗೊಂಡಿದ್ದು, ಪತಿ ಕೊಲೆ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದರು. ಆದರೆ, ಈ ಪ್ರಕರಣದಲ್ಲಿ ಆರಂಭಂದಿಂದಲೂ ಕೂಡ ಅನಸೂಯಾಳ ಹೇಳಿಕೆಗಳು ದ್ವಂದ್ವ ಹಾಗೂ ಗೊಂದಲಗಳಿಂದ ಕೂಡಿದ್ದು, ಆಕೆಯ ಮೇಲೂ ಸಂಶಯ ವ್ಯಕ್ತಪಡಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅದರೆ, ಕೊಲೆ ವಿಷಯ ಹೇಳಿದರೆ ಮಕ್ಕಳ ಸಹಿತ ತನ್ನನ್ನೂ ಕೊಲ್ಲಲಾಗುವುದು ಎಂದು ಆರೋಪಿ ಹೇಳಿದ್ದರಿಂದ ಹೆದರಿಕೆಯಿಂದ ಸುಮ್ಮನ್ನಿದ್ದೆ ಎಂದು ಪ್ರತಿಭಟನಾಕಾರರು ಹಾಗೂ ಪೊಲೀಸರೆದುರು ಪತ್ನಿ ಅನಸೂಯಾಳ ಹೇಳಿಕೆ ಕುತೂಹಲ ಕೆರಳಿಸಿದೆ.

ಮಗನ ಸಾವಿಗೆ ನ್ಯಾಯ ಕೊಡಿಸುವಂತೆ ಮೃತ ಬಸವರಾಜನ ತಂದೆ ಹಾಗೂ ಗ್ರಾಮಸ್ಥರು ಆಗ್ರಹಿಸಿ, ಕೊಡೇಕಲ್ ಪೊಲೀಸ್ ಠಾಣೆ ಮುಂದೆ ಭಾನುವಾರ ಪ್ರತಿಭಟನೆ ನಡೆಸಿದರು. ಆರೋಪಿ ತಿರುಪತಿಯನ್ನು ಬಂಧಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಬಸವರಾಜನ ಪತ್ನಿ ಅನಸೂಯ ಹಾಗೂ ತಿರುಪತಿ ಸೇರಿ ಕೊಲೆ ಮಾಡಿರುವ ಆರೋಪದ ಬಗ್ಗೆ ಪ್ರಕರಣ ದಾಖಲಾಗಿತ್ತು.

"ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮೃತನ ಪತ್ನಿಯೂ ಸಹ ಗೊಂದಲದ ಹೇಳಿಕೆಗಳನ್ನು ನೀಡಿದ್ದಾಳೆ, ಅದನ್ನೂ ಸಹ ಪರಿಶೀಲಿಸಲಾಗುತ್ತಿದೆ. ಪ್ರಕರಣದ ವಾಸ್ತವತೆಯನ್ನು ಸಂಗ್ರಹಿಸಿ, ಯಾರು ಇದರಲ್ಲಿ ಶಾಮೀಲಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ ಎಂದು ತಮ್ಮನ್ನು ಸಂಪರ್ಕಿಸಿದ "ಕನ್ನಡಪ್ರಭ "ಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಪೃಥ್ವಿಕ್ ಶಂಕರ್, ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದರು. ಪ್ರತಿಭಟನಾಕಾರರು ಮನವಿ ಪತ್ರವನ್ನು ಯಾದಗಿರಿ ಎಸ್ಪಿ ಪೃತ್ವಿಕ್‌ ಶಂಕರ್‌ ಅವರಿಗೆ ಸಲ್ಲಿಸಿದರು. ಡಿವೈಎಸ್ಪಿ ಜಾವೀದ್‌ ಇನಾಂದಾರ, ಸಿಪಿಐ ರವಿಕುಮಾರ, ಉಮೇಶ, ಸೇರಿದಂತೆ ಪೊಲೀಸ್‌ ಸಿಬ್ಬಂದಿಗಳು ಉಪಸ್ಥಿತರಿದ್ದರು.

-

ಕೋಟ್-1 : ಪ್ರಕರಣ ಕುರಿತು ಪ್ರತ್ಯೇಕ ತಂಡ ರಚಿಸಲಾಗಿದೆ, ತನಿಖೆ ಪ್ರಗತಿಯಲ್ಲಿದ್ದು, ವೈದ್ಯಕೀಯ ಹಾಗೂ ವಿಧಿ ವಿಜ್ಞಾ ಪ್ರಯೋಗಾಲಯದಿಂದ ಬೆರಳಚ್ಚು ಮುಂತಾದ ವರದಿಗಳು ಬಂದ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ. : ಪೃಥ್ವಿಕ್‌ ಶಂಕರ್‌, ಎಸ್ಪಿ ಯಾದಗಿರಿ.

-

5ವೈಡಿಆರ್11 : ಬಸವರಾಜ್‌, ಮೃತ.

5ವೈಡಿಆರ್12 : ಕೊಡೇಕಲ್‌ ಠಾಣೆಯೆದುರು ಪ್ರತಿಭಟನೆ.

5ವೈಡಿಆರ್13 : ಕೊಡೇಕಲ್‌ ಠಾಣೆಯೆದುರು ಪ್ರತಿಭಟನೆಯ ವೇಳೆ ಬಂದೋಬಸ್ತ್‌.