ಸಾರಾಂಶ
ಕಲಘಟಗಿ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೆ ಕಲಘಟಗಿ ಮತಕ್ಷೇತ್ರ ವ್ಯಾಪ್ತಿಯ ವಿವಿಧ ಹಳ್ಳಿಗಳಿಗೆ, ಬೆಳೆಹಾನಿಯಾದ ರೈತರ ಜಮೀನುಗಳಿಗೆ ಭೇಟಿ ನೀಡಿ, ಕಲಘಟಗಿ ಪಟ್ಟಣದಲ್ಲಿ ಜನಸ್ಪಂದನ ಸಭೆ ಜರುಗಿಸಿ, ಸಾರ್ವಜನಿಕರ ಸಮಸ್ಯೆ ಕುಂದುಕೊರತೆಗಳ ಅಹವಾಲು ಸ್ವೀಕರಿಸಿದರು.
ಹುಲಕೊಪ್ಪ ಹಾಗೂ ಗಳಗಿ ಗ್ರಾಮಗಳ ಚನ್ನಬಸಪ್ಪ ಹಳ್ಯಾಳ ಅವರ ಜಮೀನಿಗೆ ಭೇಟಿ ನೀಡಿದ ಸಚಿವರು ಕಾಡುಹಂದಿ, ಕರಡಿ ಹಾಗೂ ಇತರ ಕಾಡು ಪ್ರಾಣಿಗಳಿಂದ ಗೋವಿನಜೋಳದ ಬೆಳೆ, ನಾಗರಾಜ ಹಳ್ಯಾಳ ಅವರ ತೋಟದ ಭತ್ತದ ಬೆಳೆ ಹಾಗೂ ಕಬ್ಬು ಬೆಳೆ ವೀಕ್ಷಣೆ ಮಾಡಿ ಮಾಹಿತಿ ಪಡೆದುಕೊಂಡರು.ಗಳಗಿ ಗ್ರಾಮದ ರೈತರಾದ ಅಶೋಕ ಈರಪ್ಪ ಹುಬ್ಬಳ್ಳಿ, ರೇಖಾ ಪೂಜಾರ, ಧರ್ಮರಾಜ ಚಂದ್ರಗೌಡ ಪಾಟೀಲ, ಮತ್ತು ಹುಲಕೊಪ್ಪ ಗ್ರಾಮದ ರೈತ ಈರಪ್ಪ ಬಡಿಗೇರ ಅವರ ಜಮೀನೀನಲ್ಲಿ ಗೋವಿನಜೋಳ ಬೆಳೆಯು ಹಾನಿಯಾದ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು.
ನಂತರ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಕಲಘಟಗಿ ಹಾಗೂ ಧಾರವಾಡ ತಾಲೂಕಿನ ಕೆಲವು ಪ್ರದೇಶಗಳು ಮಲೆನಾಡಿನ ಸೆರಗಿನಲ್ಲಿದ್ದು, ಗುಡ್ಡ, ಕಾಡು ಹೆಚ್ಚಾಗಿವೆ. ಮತ್ತು ಕಾಡುಪ್ರಾಣಿಗಳು ಸಾಕಷ್ಟು ಇವೆ. ರೈತರು ಪ್ರತಿವರ್ಷ ಬೆಳೆದ ಬೆಳೆಯನ್ನು ಸುಸೂತ್ರವಾಗಿ ರಾಶಿ ಮಾಡಿಕೊಂಡು ಬರಲು ತೊಂದರೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಲು ಕ್ರಮವಹಿಸಬೇಕಿದೆ ಎಂದರು.ಮುಂದಿನ ಒಂದು ವಾರದಲ್ಲಿ ಪ್ರಾಣಿಗಳಿಂದ ಬೆಳೆ ಹಾನಿಯಾಗಿರುವ ಪ್ರದೇಶದಲ್ಲಿ ಕಲಘಟಗಿ ಹಾಗೂ ಧಾರವಾಡ ತಾಲೂಕಿನ ಕಂದಾಯ, ಕೃಷಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ಮಾಡಿ, ವರದಿ ಸಲ್ಲಿಸಬೇಕು. ಮತ್ತು ಸರ್ಕಾರದ ನಿಯಮಾನುಸಾರ ಪ್ರತಿ ಹೆಕ್ಟೇರ್‌ಗೆ ಪರಿಹಾರವನ್ನು ಅರಣ್ಯ ಇಲಾಖೆ ತಕ್ಷಣ ಬಿಡುಗಡೆ ಮಾಡಬೇಕೆಂದು ಸೂಚಿಸಿದರು.
ಹುಲ್ಲಂಬಿ ಗ್ರಾಮದ ಕಬ್ಬಿನ ಬೆಳೆವೀಕ್ಷಣೆ: ನಂತರ ಸಚಿವರು ಹುಲ್ಲಂಬಿ ಗ್ರಾಮ ವ್ಯಾಪ್ತಿಯ ಕಬ್ಬಿನ ತೋಟಗಳಿಗೆ ಭೇಟಿ ನೀಡಿ, ಬೆಳೆಹಾನಿ ಪರಿಶೀಲಿಸಿ, ಮನವಿ ಸ್ವೀಕರಿಸಿದರು.ಈ ಸಂದರ್ಭದಲ್ಲಿ ರೈತರು ಮಾತನಾಡಿ, ಅಂದಾಜು 100-1500 ಎಕರೆ ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಹುಲ್ಲಂಬಿ ಗ್ರಾಮದ ಸುಮಾರು 24 ಜನ ರೈತರ ಜಮೀನಿನ ಬೆಳೆ ಹಾನಿಯಾಗಿದೆ. ಕಬ್ಬು ಹಾಗೂ ಮಾವಿನ ತೋಟದ ಬೆಳೆಗಳನ್ನು ಸಹ ಕಾಡುಪ್ರಾಣಿಗಳು ಹಾಳು ಮಾಡುತ್ತಿವೆ. ಇದರಿಂದಾಗಿ ಬೀಜ, ಗೊಬ್ಬರ ಎಲ್ಲವೂ ಹಾಳಾಗುತ್ತಿದೆ. ಕಾಡುಪ್ರಾಣಿಗಳನ್ನು ಹೆದರಿಸಿ, ಓಡಿಸಲು ನಮಗೆ ಬಂದೂಕು ಬಳಕೆಗೆ ಅನುಮತಿಯನ್ನು ಕೊಡಿಸಬೇಕೆಂದು ಕೋರಿದರು. ರೈತರಿಗೆ ಸೂಕ್ತ ಪರಿಹಾರ ಹಾಗೂ ಸಹಾಯ ಧನ ನೀಡಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ, ಜಿಪಂ ಸಿಇಒ ಭುವನೇಶ ಪಾಟೀಲ, ಎಸ್ಪಿ ಗುಂಜನ್ ಆರ್ಯ, ಪ್ರೊಬೆಷನರಿ ರಿತೀಕಾ ವರ್ಮಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಕಲಘಟಗಿ ತಹಸೀಲ್ದಾರ್ ಬಸವರಾಜ ಸೇರಿದಂತೆ ಹಲವರಿದ್ದರು.;Resize=(128,128))
;Resize=(128,128))
;Resize=(128,128))