ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯದ ಅಂಗಸಂಸ್ಥೆಗಳಾದ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಮಣಿಪಾಲ್ ಸ್ಕೂಲ್ ಆಫ್ ನರ್ಸಿಂಗ್ ಜಂಟಿಯಾಗಿ ಅಂತಾರಾಷ್ಟ್ರೀಯ ದಾದಿಯರ ದಿನ ಆಚರಿಸಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೊಯಮತ್ತೂರಿನ ರಾಯಲ್ ಕೇರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನರ್ಸಿಂಗ್ ನಿರ್ದೇಶಕಿ ಡಾ. ಶ್ಯಾಮಲಾ ಕುಮಾರ್ ಮಾತನಾಡಿ, ಆಧುನಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ದಾದಿಯರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ದಾದಿಯ ಉಪಸ್ಥಿತಿಯೇ ರೋಗಿಗೆ ಪರಮ ಔಷಧಿಯಿದ್ದಂತೆ. ಶುಶ್ರೂಷಾ ವೃತ್ತಿಯು ಕೇವಲ ಜೀವನಾಧಾರಕ್ಕೆ ಸೀಮಿತವಾಗಿಲ್ಲ. ಅದು ಸಹಾನುಭೂತಿ, ನಾಯಕತ್ವ ಮತ್ತು ರೋಗಿ ಕೇಂದ್ರಿತ ಕಾಳಜಿಯನ್ನೊಳಗೊಂಡ ಒಂದು ಸುಂದರ ಜವಾಬ್ದಾರಿಯಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ದಾದಿಯರ ಯೋಗಕ್ಷೇಮ, ನಿರಂತರ ವೃತ್ತಿಪರ ಕಲಿಕೆ ಹಾಗೂ ಪೂರಕ ಸೇವಾ ವಾತಾವರಣ ನಿರ್ಮಾಣವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ರೋಗಿಗಳ ಆರೈಕೆ ಮತ್ತು ಸಮುದಾಯ ಆರೋಗ್ಯ ಸೇವೆಯಲ್ಲಿ ಗಣನೀಯ ಸಾಧನೆ ಮಾಡಿದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವಾರ್ಡ್ ಸಿಸ್ಟರ್ ಸುಜಾತಾ ಬಿ. ಮತ್ತು ಹಿರಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಲಕ್ಷ್ಮಿ ಬಿ. ಅವರನ್ನು ಸನ್ಮಾನಿಸಲಾಯಿತು.ಮಣಿಪಾಲ್ ಸ್ಕೂಲ್ ಆಫ್ ನರ್ಸಿಂಗ್‌ನ ಮಾಜಿ ಪ್ರಿನ್ಸಿಪಾಲ್‌ ಡಾ. ಕಸ್ತೂರಿ ಆರ್. ಅಡಿಗ ಅವರು ಸ್ಥಾಪಿಸಿದ ಕ್ಲಿನಿಕಲ್ ಪ್ರಾಕ್ಟೀಸ್‌ನಲ್ಲಿ ಅತ್ಯುತ್ತಮ ಸಾಧನೆ ಪ್ರಶಸ್ತಿಯನ್ನು ತುರ್ತು ಚಿಕಿತ್ಸಾ ವಿಭಾಗದ ಸ್ಟಾಫ್ ನರ್ಸ್ ಶಿವಪ್ರಸಾದ್ ಅವರಿಗೆ ಪ್ರದಾನ ಮಾಡಲಾಯಿತು. ಅಕಾಡೆಮಿಕ್ ಮತ್ತು ಕ್ಲಿನಿಕಲ್ ಸಾಧನೆಗಾಗಿ ವಿದ್ಯಾರ್ಥಿಗಳಾದ ಅಭಿಷೇಕ್ ಕುಮಾರ್ ಮತ್ತು ಕುಮಾರಿ ಸಾನಿಯಾ ದಾಸ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಣಿಪಾಲ್ ಸ್ಕೂಲ್ ಆಫ್ ನರ್ಸಿಂಗ್ ಪ್ರಿನ್ಸಿಪಾಲ್‌ ಡಾ. ಲೀನಾ ಸಿಕ್ವೇರಾ ಪ್ರಶಸ್ತಿ ಪುರಸ್ಕೃತರ ಸಾಧನೆ ಮತ್ತು ಸಮರ್ಪಣಾ ಮನೋಭಾವದ ಸೇವೆಯನ್ನು ಶ್ಲಾಘಿಸಿದರು. ಕಾರ್ಯಕ್ರಮದ ಸಂಚಾಲಕಿ ಜ್ಯಾನೆಟ್ ಪ್ರಮೀಳಾ ಡಿಸೋಜಾ ಅವರು ದಾದಿಯರ ವಾರದ ಕಾರ್ಯಕ್ರಮಗಳ ವರದಿಯನ್ನು ಮಂಡಿಸಿದರು. ಇದರ ಭಾಗವಾಗಿ ಸೆಮಿನಾರ್, ಟ್ರಾಮಾ ಮ್ಯಾನೇಜ್‌ಮೆಂಟ್ ಕುರಿತು ಕಾರ್ಯಾಗಾರ, ದೂರದರ್ಶನ ಸಂದರ್ಶನ ಹಾಗೂ ವಿದ್ಯಾರ್ಥಿಗಳಿಗೆ ಆಶುಭಾಷಣ, ಕೊಲಾಜ್ ಮೇಕಿಂಗ್, ರೀಲ್ಸ್ ಮೇಕಿಂಗ್ ಮತ್ತು ಪೋಸ್ಟರ್ ಪ್ರೆಸೆಂಟೇಶನ್ ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.