ಉಡುಪಿ: ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಮಂಗಳವಾರ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಪ್ರಾಧಿಕಾರಕ್ಕೆ ಸಂಬಂಧಿತ ಕಡತಗಳ ಬಗ್ಗೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.

ಉಡುಪಿಯಲ್ಲಿ ಬಡ - ಮಧ್ಯಮ ವರ್ಗದವರ ಮನೆ ನಿರ್ಮಾಣಕ್ಕೆ ಪ್ರಾಧಿಕಾರದಿಂದ ತಾಂತ್ರಿಕ ಅಭಿಪ್ರಾಯ ನೀಡುವಲ್ಲಿ ಆಗುತ್ತಿರುವ ಸಮಸ್ಯೆ ಮತ್ತು ವಿಳಂಬವನ್ನು ನಿವಾರಿಸಲು ನಿಯಮಗಳನ್ನು ಸರಳಗೊಳಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ನಿವೇಶನದ ಏಕವಿನ್ಯಾಸ ಅನುಮೋದನೆಯಲ್ಲಿ ತಾತ್ಕಾಲಿಕ ಅನುಮೋದನೆ ಮತ್ತು ಅಂತಿಮ ಅನುಮೋದನೆ ಎಂಬ ಎರಡು ಹಂತಗಳಿಂದ ಜನರಿಗೆ ಅನಗತ್ಯ ಸಮಸ್ಯೆ ವಿಳಂಬವಾಗುತ್ತಿದೆ. ರಸ್ತೆ ನಿರ್ಮಾಣ ಇತ್ಯಾದಿ ಸಮಸ್ಯೆ ಇದ್ದಲ್ಲಿ ಹಿಂದಿನಂತೆ ಷರತ್ತು ವಿಧಿಸಿ ಅಂತಿಮ ಅನುಮೋದನೆ ನೀಡಬಹುದು. ಏಕವಿನ್ಯಾಸ ರಿಯಾಯತಿ: ದಶಕಗಳ ಹಿಂದೆ ಜಿಲ್ಲಾಧಿಕಾರಿಗಳಿಂದ ಹಕ್ಕುಪತ್ರ ಪಡೆದವರು ಈಗ ಹೊಸ ಮನೆ ಕಟ್ಟುವಾಗ ಏಕವಿನ್ಯಾಸದ ನೆಪದಲ್ಲಿ ರಸ್ತೆಗೆ ಭೂಮಿ ಮೀಸಲಿಡುವಂತೆ ಸೂಚಿಸಿದರೆ, 3 - 5 ಸೆಂಟ್ಸ್ ಭೂಮಿ ಪಡೆದವರು ಮನೆ ಕಟ್ಟುವುದೇ ಸಾಧ್ಯವಿಲ್ಲ. ಆದ್ದರಿಂದ ಅವರಿಗೆ ಈ ಹಿಂದಿನಂತೆ ಏಕವಿನ್ಯಾಸದಿಂದ ವಿನಾಯತಿ ನೀಡಿ, ಮನೆ ನಿರ್ಮಾಣಕ್ಕೆ ಪರವಾನಿಗೆ ನೀಡಬೇಕು. ವಸತಿ ರಹಿತ ಕಡುಬಡ ಕುಟುಂಬಗಳಿಗೆ ಸರ್ಕಾರ 94 ಸಿಸಿ ಕಾನೂನಿನಡಿ ಮಂಜೂರು ಮಾಡಿದ 1 - 2 ಸೆಂಟ್ಸ್ ನಿವೇಶನಕ್ಕೂ ಏಕವಿನ್ಯಾಸ ಕೈಬಿಡಬೇಕು ಎಂದು ಶಾಸಕರು ಸೂಚಿಸಿದರು.

ಹೊಸ ಮಾಸ್ಟರ್‌ಪ್ಲಾನ್: 2008ರ ಬಳಿಕ ಉಡುಪಿ ನಗರದ ಸಮಗ್ರ ಮಾಸ್ಟರ್ ಪ್ಲ್ಯಾನ್ ತಯಾರಿಯಾಗದೇ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದು, ಈ ಬಗ್ಗೆ 15 ದಿನದಲ್ಲಿ ಇಲಾಖೆಯ ಅಧಿಕಾರಿಗಳು, ಇಂಜಿನಿಯರ್ ಅಸೋಸಿಯೇಷನ್, ಬಿಲ್ಡರ್ಸ್ ಅಸೋಸಿಯೇಷನ್ ಹಾಗೂ ವಿವಿಧ ಪರಿಣಿತರ ಜೊತೆ ಸಭೆ ನಡೆಸಿ, ಮಾಸ್ಟರ್ ಪ್ಲ್ಯಾನ್ ಬಗ್ಗೆ ಸಮಾಲೋಚನೆ ನಡೆಸಿ ಶೀಘ್ರದಲ್ಲೇ ಸರ್ಕಾರದಿಂದ ಮಾಸ್ಟರ್ ಪ್ಲ್ಯಾನ್ ಅಂಗೀಕಾರಕ್ಕೆ ಕ್ರಮ ವಹಿಸುವುದಾಗಿ ಶಾಸಕರು ತಿಳಿಸಿದರು.ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಂಜುನಾಥ ಆರ್., ಅಧಿಕಾರಿಗಳಾದ ಸಚಿನ್, ಸತ್ಯ, ನಗರಸಭಾ ಸದಸ್ಯರು, ಇಂಜಿನಿಯರ್ ಹಾಗೂ ಬಿಲ್ಡರ್ಸ್ ಅಸೋಸಿಯೇಷನ್ ಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.