ಅಧಿಕಾರಿಗಳು ಅವಳಿ ನಗರದ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ-ಗದಗ ನಗರಸಭೆ ಅಧ್ಯಕ್ಷೆ ಉಷಾ

| Published : Feb 10 2024, 01:46 AM IST

ಅಧಿಕಾರಿಗಳು ಅವಳಿ ನಗರದ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ-ಗದಗ ನಗರಸಭೆ ಅಧ್ಯಕ್ಷೆ ಉಷಾ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ಬೆಟಗೇರಿ ನಗರಸಭೆಗೆ ಪ್ರಭಾರ ಪೌರಾಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಅಧಿಕಾರಿಗಳು ಸೇರಿದಂತೆ ಇಲ್ಲಿನ ಸಿಬ್ಬಂದಿಗಳು ಅವಳಿ ನಗರದ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ, ಇದರಿಂದಾಗಿ ಆಡಳಿತ ಕುಂಠಿತವಾಗುತ್ತಿದೆ ಎಂದು ನಗರಸಭೆಯ ಅಧ್ಯಕ್ಷೆ ಉಷಾ ದಾಸರ ಹೇಳಿದರು.

ಗದಗ: ಗದಗ ಬೆಟಗೇರಿ ನಗರಸಭೆಗೆ ಪ್ರಭಾರ ಪೌರಾಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಅಧಿಕಾರಿಗಳು ಸೇರಿದಂತೆ ಇಲ್ಲಿನ ಸಿಬ್ಬಂದಿಗಳು ಅವಳಿ ನಗರದ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ, ಇದರಿಂದಾಗಿ ಆಡಳಿತ ಕುಂಠಿತವಾಗುತ್ತಿದೆ ಎಂದು ನಗರಸಭೆಯ ಅಧ್ಯಕ್ಷೆ ಉಷಾ ದಾಸರ ಹೇಳಿದರು. ಅವರು ಶುಕ್ರವಾರ ನಗರಸಭೆಯ ಸಭಾಭವನದಲ್ಲಿ ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಧ್ಯಕ್ಷರ ಅಭಿಪ್ರಾಯಕ್ಕೆ ಉಪಾಧ್ಯಕ್ಷರು ಸಹಿತ ಆಡಳಿತ ಹಾಗೂ ವಿರೋಧ ಪಕ್ಷದ ಎಲ್ಲಾ ಸದಸ್ಯರು ಸಹಮತ ವ್ಯಕ್ತ ಪಡಿಸಿದ್ದಲ್ಲದೇ ಯೋಜನಾ ನಿರ್ದೇಶಕ ಹಾಗೂ ಪ್ರಭಾರ ಪೌರಾಯುಕ್ತರ ನಿರ್ಲಕ್ಷ್ಯತನದ ವರ್ತನದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಹಿಂದಿನ ಠರಾವು ಓದಿ ದೃಢೀಕರಿಸುವುದು, ಬೀದಿದೀಪ ನಿರ್ವಹಣೆ ಮತ್ತು ಮೇಲುಸ್ತುವಾರಿ ಮರು ಟೆಂಡರ್ ಕರೆಯುವುದು ಸೇರಿ ವಿವಿಧ ವಿಷಯಗಳಿಗೆ ಮಂಜೂರು ನೀಡುವ ಕುರಿತು ನಗರಸಭೆ ಸಭಾಂಗಣದಲ್ಲಿ ನಿಗದಿಯಾಗಿದ್ದ ಸಾಮಾನ್ಯ ಸಭೆಯಲ್ಲಿ ಚರ್ಚೆಗಾಗಿಯೇ ಕರೆಯಲಾಗಿದ್ದ ಸಭೆಯ ಸಂಪೂರ್ಣ ಪ್ರಭಾರ ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಳ್ಳುವುದಕ್ಕೆ ಮೀಸಲಾಗಿ ಮಾರ್ಪಟ್ಟಿತು. ನಗರಸಭೆಯ ವಿರೋಧ ಪಕ್ಷದ ನಾಯಕ ಎಲ್.ಡಿ. ಚಂದಾವರಿ ಮಾತನಾಡಿ, ಪೌರಾಯುಕ್ತರಿಂದ ಸ್ಪಂದನೆ ಸಿಗುತ್ತಿಲ್ಲ, ಕೆಲಸ ಮಾಡಲು ತಯಾರಿಲ್ಲ, ನಗರಸಭೆ ಸದಸ್ಯರ ಹಾಗೂ ಸಿಬ್ಬಂದಿ ಬಗ್ಗೆ ಅವಳಿ ನಗರದಲ್ಲಿ ಕೆಟ್ಟ ಭಾವನೆ ಬಂದಿದೆ, ಅಧ್ಯಕ್ಷರ, ಉಪಾಧ್ಯಕ್ಷರ ಹಾಗೂ ಸದಸ್ಯರ ಶ್ರಮಕ್ಕೆ ಪ್ರತಿಫಲ ಇಲ್ಲದಂತಾಗಿದೆ ಪ್ರಭಾರ ಪೌರಾಯುಕ್ತ ಮಾರುತಿ ಬ್ಯಾಕೋಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೌರಾಯುಕ್ತರ ಮೇಲೆ ನಮಗೆ ವೈಯಕ್ತಿಕ ದ್ವೇಷವಿಲ್ಲ. ಈಗಾಗಲೇ ಬೇಸಿಗೆ ಬಂದಿದ್ದು, ನಗರದ 35 ವಾರ್ಡಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದೆ. ಕಾನೂನು ಬದ್ಧವಾಗಿ ಇರುವ ಕೆಲಸಗಳನ್ನು ಮಾಡಿಕೊಟ್ಟರೆ ಅನುಕೂಲವಾಗುತ್ತದೆ. ಸದಸ್ಯರು ಟೆಂಡರ್ ಸಹಿಗಾಗಿ ಓಡಾಡುವುದೇ ಕೆಲಸವಾಗಿದೆ. ತ್ವರಿತವಾಗಿ ನಿರ್ಣಯ ಕೈಗೊಳ್ಳಬೇಕು ಎಂದು ಪೌರಾಯುಕ್ತರಿಗೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಅಬ್ಬಿಗೇರಿ ಮನವಿ ಮಾಡಿದರು. ಸದಸ್ಯ ರಾಘವೇಂದ್ರ ಯಳವತ್ತಿ ಮಾತನಾಡಿ, ಗದಗ-ಬೆಟಗೇರಿ ಅವಳಿ ನಗರದಲ್ಲಿ 2.15 ಲಕ್ಷ ಜನಸಂಖ್ಯೆ ಇದ್ದು, ಬಹುದೊಡ್ಡ ನಗರವಾಗಿ ಬೆಳೆಯುತ್ತಿದೆ. ವಿವಿಧ ಯೋಜನೆಗಳು, ಕೆಲಸಗಳು ಪರಿಣಾಮಕಾರಿಯಾಗಿ ಆಗಬೇಕಿವೆ. ಆದರೆ, ಪೌರಾಯುಕ್ತರು ಅಭಿವೃದ್ಧಿ ಕಾಮಗಾರಿಗಳ ಕಡತಗಳಿಗೆ ಕಾರ್ಯಾದೇಶ ಕೊಡುತ್ತಿಲ್ಲ. ಟೆಂಡರ್ ಪ್ರಕ್ರಿಯೆ ಕರೆಯುತ್ತಿಲ್ಲ. ಇದರಿಂದ ಸಾರ್ವಜನಿಕರು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿ, ಕರವಸೂಲಿಗಾರರು ಕರ ವಸೂಲಿ ಮಾಡುವುದನ್ನು ಬಿಟ್ಟು, ಫಾರ್ಮ್ ನಂ. 3 ಕೊಡುವ ಕೆಲಸಗಾರರಾಗಿದ್ದಾರೆ. ಅವಳಿ ನಗರಕ್ಕೆ ದಿನನಿತ್ಯ ಕನಿಷ್ಠ 33 ಎಂಎಲ್‌ಡಿ ನೀರು ಬೇಕು, ಸದ್ಯ 18 ಎಂಎಲ್‌ಡಿ ನೀರು ಮಾತ್ರ ಬರುತ್ತಿದೆ ಎಂದ ಅವರು ನೀರಿನ ಸಮಸ್ಯೆ ಕುರಿತು ಸುದೀರ್ಘವಾಗಿ ಮಾತನಾಡಿದರು. ಪ್ರಭಾರ ಪೌರಾಯುಕ್ತ ಮಾರುತಿ ಬ್ಯಾಕೋಡ ಮಾತನಾಡಿ, ಬಜೆಟ್‌ನಲ್ಲಿ ಯಾವುದು ಅಗತ್ಯವಿದೆ, ಅದಕ್ಕೆ ಖಂಡಿತ ಬೆಂಬಲ ನೀಡುತ್ತೇನೆ. ಟೆಂಡರ್ ಹಾಗೂ ವರ್ಕ್ ಆರ್ಡರ್‌ಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಲಾಗಿದೆ. ಅಲ್ಲಿಂದ ಯಾವ ಆದೇಶ ಬರುತ್ತದೆ. ಆ ಆದೇಶದಂತೆ ಕೆಲಸ ನಿರ್ವಹಿಸುತ್ತೇನೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸದಸ್ಯರು ಮಾಹಿತಿ ತೆಗೆದುಕೊಳ್ಳಲು ಎಷ್ಟು ದಿನ ಬೇಕು ಎಂದು ಆಕ್ಷೇಪಿಸಿದರು. ಅಲ್ಲದೆ, ಸಹಿ ಮಾಡಿದರೆ ಏನು ಆಗುತ್ತದೆ ಎಂಬ ಭಯ ಮತ್ತು ಆತಂಕದಲ್ಲಿ ಪೌರಾಯುಕ್ತರಿದ್ದಾರೆ ಎಂದರು. ನಗರಸಭೆಯಲ್ಲಿ ವಿವಿಧ ಯೋಜನೆಗಳ ಪೈಕಿ ಕಂಪ್ಯೂಟರ್ ವಿತರಣೆಯ ಎಸ್ಸಿ-ಎಸ್ಟಿ ಫಲಾನುಭವಿಗಳ ಆಯ್ಕೆಯಲ್ಲಿ ದ್ವಿತೀಯ ದರ್ಜೆ ಸಹಾಯಕ ಎಚ್.ಎಂ. ಹುಣಸಿಮರದ ಅವರು ಅಧ್ಯಕ್ಷರ ಹಾಗೂ ಸದಸ್ಯರ ಗಮನಕ್ಕೆ ತರಲಾರದೆ ತಾನೇ ಫಲಾನುಭವಿಗಳನ್ನು ಆಯ್ಕೆ ಮಾಡಿ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದು ಈ ಕುರಿತು ಕ್ರಮ ತೆಗೆದುಕೊಳ್ಳುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯಲ್ಲಿ ಹಲವಾರು ಪ್ರಮುಖ ವಿಷಯಗಳ ಕುರಿತು ಚರ್ಚಿಸಲಾಯಿತು. ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಹಿರಿಯ ಅಧಿಕಾರಿಗಳು ಹಾಜರಿದ್ದರು.