ವರದಕ್ಷಿಣೆಗಾಗಿ ಪತ್ನಿ ಮನೆಗೆ ನುಗ್ಗಿ ದಾಂಧಲೆ

| Published : Feb 10 2024, 01:46 AM IST

ಸಾರಾಂಶ

ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ನಿವಾಸಿಗಳ ಸಮಯ ಪ್ರಜ್ಞೆಯಿಂದಾಗಿ ಒಂದೇ ಕುಟುಂಬದ ಮೂವರ ಹತ್ಯೆ ತಪ್ಪಿದಂತಾಗಿದೆ. ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಆರೋಪಿಗಳಿಗೆ ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಹೆಚ್ಚಿನ ವರದಕ್ಷಿಣೆಗಾಗಿ ಪತ್ನಿಯ ತವರು ಮನೆಗೆ ನುಗ್ಗಿದ ಪತಿ ಮತ್ತು ಆತನ ಕುಟುಂಬದವರು ದಾಂಧಲೆ ನಡೆಸಿ ಆಕೆ ಸಹೋದರನ ಮೇಲೆ ಚಾಕುವಿನಿಂದ ಇರಿದು ಹತ್ಯೆಗೆ ವಿಫಲ ಯತ್ನ ನಡೆಸಿರುವ ಘಟನೆ ತಾಲೂಕಿನ ಚನ್ನಸಂದ್ರ ಗ್ರಾಮದಲ್ಲಿ ಗುರುವಾರ ಸಂಜೆ ಜರುಗಿದೆ.

ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ನಿವಾಸಿಗಳ ಸಮಯ ಪ್ರಜ್ಞೆಯಿಂದಾಗಿ ಒಂದೇ ಕುಟುಂಬದ ಮೂವರ ಹತ್ಯೆ ತಪ್ಪಿದಂತಾಗಿದೆ. ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಆರೋಪಿಗಳಿಗೆ ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಆರೋಪಿಗಳ ಚಾಕು ಇರಿತದಿಂದ ಗ್ರಾಮದ ಪುಟ್ಟರಾಮು ಪುತ್ರಿ ಸತ್ಯಶ್ರೀ, ಸಹೋದರ ಸಿ.ಪಿ. ನಾಗೇಂದ್ರ, ತಾಯಿ ಕೆ. ಉಮಾವತಿ ಅವರು ಗಾಯಗೊಂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಪ್ರಕರಣ ಸಂಬಂಧ ಬೆಂಗಳೂರು ನಾಗರಬಾವಿ ಬಡಾವಣೆಯ ಸತ್ಯಶ್ರೀ ಪತಿ ಸುನಿಲ್‌ ಕುಮಾರ್, ನಾದಿನಿ ನೀತೂಶ್ರೀ, ನೀತೂಶ್ರೀ ಗಂಡ ಜಗದೀಶ್, ಕಾರು ಚಾಲಕ ಹೇಮಂತ್ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 498, ಎ 504, 506, 323, 307, ಹಾಗೂ 34 ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಗಳ ಪೈಕಿ ಸುನಿಲ್‌ ಕುಮಾರ್, ಜಗದೀಶ್, ಹೇಮಂತ್ ಅವರನ್ನು ಗುರುವಾರ ರಾತ್ರಿ ಪಟ್ಟಣದ ಜೆಎಂಎಫ್‌ಸಿ 2ನೇ ಹೆಚ್ಚುವರಿ ನ್ಯಾಯಾಧೀಶ ಎನ್.ವಿ. ಕೋನಪ್ಪರವರ ಮುಂದೆ ಹಾಜರುಪಡಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಪೈಕಿ 2ನೇ ಆರೋಪಿ ನೀತೂಶ್ರೀಗೆ ಮಗು ಇರುವ ಕಾರಣ ಈಕೆಗೆ ನ್ಯಾಯಾಂಗ ಬಂಧನದಿಂದ ವಿನಾಯಿತಿ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

ಘಟನೆ ವಿವರ:

ಚನ್ನಸಂದ್ರ ಗ್ರಾಮದ ಪುಟ್ಟರಾಮು ಪುತ್ರಿ ಸಿ.ಪಿ. ಸತ್ಯಶ್ರೀ ಅವರನ್ನು ಬೆಂಗಳೂರಿನ ನಾಗರಬಾವಿ ಬಡಾವಣೆಯ ಆರ್. ಸುನಿಲ್‌ ಕುಮಾರ್ ರೊಂದಿಗೆ ಕಳೆದ 2021ರ ಮೇ 9ರಂದು ಪಟ್ಟಣದ ಶಿವಪುರ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ವಿವಾಹ ಮಾಡಿಕೊಡಲಾಗಿತ್ತು.

ವರದಕ್ಷಿಣ ರೂಪದಲ್ಲಿ 600 ಗ್ರಾಂ ಚಿನ್ನಾಭರಣ, ಬೆಳ್ಳಿ ಪದಾರ್ಥ ಹಾಗೂ ಕಾರು ಖರೀದಿಗೆ 15 ಲಕ್ಷ ವರದಕ್ಷಿಣೆ ರೂಪದಲ್ಲಿ ಆರೋಪಿ ಸುನಿಲ್‌ಕುಮಾರ್‌ಗೆ ನೀಡಲಾಗಿತ್ತು. ಮದುವೆ ನಂತರ ಸತ್ಯಶ್ರೀ 8 ತಿಂಗಳ ಗರ್ಭಿಣಿಯಾಗಿದ್ದಳು. ಬಾಣಂತನಕ್ಕಾಗಿ ತವರಿಗೆ ಬಂದಿದ್ದರು. ಈ ವೇಳೆ ಆಕೆ ಮನೆಗೆ ಧಾವಿಸಿದ ಗಂಡ, ನಾದಿನಿ, ಭಾವ ಸೇರಿದಂತೆ ನಾಲ್ವರು ಗುರುವಾರ ರಾತ್ರಿ ಮನೆಗೆ ನುಗ್ಗಿ ಸಹೋದರ ನಾಗೇಂದ್ರನ ಮೇಲೆ ಚಾಕುವಿನಿಂದ ಇರಿದು ಹತ್ಯೆಗೆ ವಿಫಲ ಯತ್ನ ನಡೆಸಿದ್ದಾರೆ.

ನಂತರ ಈತನ ರಕ್ಷಣೆಗೆ ಬಂದ ನಾದಿನಿ ನೀತೂಶ್ರೀ, ತಾಯಿ ಉಮಾವತಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದೂ ಅಲ್ಲದೆ, ಮನೆಯಲ್ಲಿ ದಾಂಧಲೆ ಮಾಡಿದ್ದಾರೆ ಎಂದು ಸತ್ಯಶ್ರೀ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಕೃತ್ಯಕ್ಕೆ ಬಳಸಿದ್ದ ಚಾಕು ಮತ್ತು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.