ಬ್ಯಾಂಕುಗಳಲ್ಲಿ ಕನ್ನಡ ಕಡ್ಡಾಯಕ್ಕೆ ಒಂದು ವಾರದ ಗಡುವು: ಕರವೇ ಮನುಕುಮಾರ್

| Published : Aug 01 2025, 12:00 AM IST

ಬ್ಯಾಂಕುಗಳಲ್ಲಿ ಕನ್ನಡ ಕಡ್ಡಾಯಕ್ಕೆ ಒಂದು ವಾರದ ಗಡುವು: ಕರವೇ ಮನುಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿರುವ ಎಲ್ಲಾ ಬ್ಯಾಂಕ್‌ಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ವ್ಯವಹಾರ ನಡೆಸಬೇಕು ಹಾಗೂ ಬ್ಯಾಂಕಿನ ಸಿಬ್ಬಂದಿ ಗ್ರಾಹಕರೊಂದಿಗೆ ಕನ್ನಡ ಭಾಷೆಯಲ್ಲೇ ವ್ಯವಹರಿಸಲು ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯಲ್ಲಿರುವ ಎಲ್ಲಾ ಬ್ಯಾಂಕ್‌ಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ವ್ಯವಹಾರ ನಡೆಸಬೇಕು ಹಾಗೂ ಹಣ ತೆಗೆದುಕೊಳ್ಳುವ, ಕಟ್ಟುವ ಎಲ್ಲಾ ಚಲನ್ ಗಳು ಕನ್ನಡದಲ್ಲಿ ಇರಬೇಕು. ಇನ್ನೊಂದು ವಾರದಲ್ಲಿ ಇದನ್ನು ಕಾರ್ಯರೂಪಕ್ಕೆ ತರದೇ ಹೋದಲ್ಲಿ ಬ್ಯಾಂಕ್ ವ್ಯವಸ್ಥೆ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ ಗುರುವಾರ ಕೆನರಾ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಕನ್ನಡ ಭಾಷೆ ಬಳಕೆ ಮಾಡದೇ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶ ಉಲ್ಲಂಘಿಸುತ್ತಿರುವ ಜಿಲ್ಲೆಯ ವಿವಿಧ ಬ್ಯಾಂಕುಗಳು ದುರ್ವರ್ತನೆ ತಿದ್ದಿಕೊಂಡು ಕನ್ನಡ ಭಾಷೆಯಲ್ಲೇ ಸೇವೆ ನೀಡಬೇಕು. ಆರ್.ಬಿ.ಐ ಮಾರ್ಗದರ್ಶಿ ಸೂತ್ರಗಳನ್ವಯ ಬ್ಯಾಂಕುಗಳಲ್ಲಿ ಪ್ರಾದೇಶಿಕ ಭಾಷೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಆದರೆ ಬ್ಯಾಂಕುಗಳು ಆರ್.ಬಿ.ಐ ಸೂಚನೆಗಳನ್ನು ಪಾಲಿಸದೇ ಉದ್ಭಟತನವನ್ನು ಮೆರೆಯುತ್ತಿವೆ. ಈ ನಿಯಮದ ಪ್ರಕಾರ ಸಿಬ್ಬಂದಿ ೩ ತಿಂಗಳೊಳಗೆ ಸ್ಥಳೀಯ ಕನ್ನಡ ಭಾಷೆ ಕಲಿಯಬೇಕು. ಆದರೆ ಇದು ಜಿಲ್ಲೆಯಲ್ಲಿ ಪಾಲನೆ ಆಗುತ್ತಿಲ್ಲ. ಸರ್ಕಾರ, ನೀತಿ, ನಿಯಮಾವಳಿ ರೂಪಿಸಿದರೂ ಅವುಗಳನ್ನು ಪಾಲನೆ ಮಾಡದೇ ಇರುವುದು ಖಂಡನೀಯವಾಗಿದೆ ಎಂದು ಹೇಳಿದರು. ಬ್ಯಾಂಕಿನ ಸೂಚನಾ ಫಲಕಗಳು, ಬ್ಯಾಂಕ್ ಚಲನ್‌ಗಳು ಸೇರಿದಂತೆ ಎಲ್ಲಾ ರಸೀದಿಗಳು ಕನ್ನಡ ಭಾಷೆಯಲ್ಲೇ ಮುದ್ರಿತವಾಗಿರುವಂತೆ ನೋಡಿಕೊಳ್ಳಬೇಕು, ಹೊರ ರಾಜ್ಯದ ಬ್ಯಾಂಕ್ ಸಿಬ್ಬಂದಿ ಗ್ರಾಹಕರ ಜೊತೆ ತೆಲುಗು, ಹಿಂದಿ ಭಾಷೆ ಬಳಸುತ್ತಿದ್ದು, ಇದರಿಂದ ಸ್ಥಳೀಯರಿಗೆ ಮತ್ತು ರೈತರಿಗೆ ತೊಂದರೆಯಾಗುತ್ತಿದೆ, ಅವರು ಸ್ಥಳೀಯ ಭಾಷೆಯ ನೆರವು ಪಡೆದು ರೈತರು, ಮಹಿಳೆಯರು, ಹಿರಿಯ ನಾಗರಿಕರು, ಅನಕ್ಷರಸ್ಥರ ಮನವಿಯನ್ನು ಅರಿತುಕೊಂಡು ಅವರಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ನಿಯಮಾವಳಿಗಳು ಹೇಳುತ್ತಿದ್ದರೂ ಯಾರೊಬ್ಬರೂ ಇದನ್ನು ಅನುಸರಿಸದೇ ಗ್ರಾಮೀಣ ಪ್ರದೇಶದ ಜನರನ್ನು ಸಣ್ಣ- ಪುಟ್ಟ ಕೆಲಸಕ್ಕೆ ಬ್ಯಾಂಕಿಗೆ ದಿನನಿತ್ಯ ಅಲೆಯುವಂತೆ ಮಾಡುತ್ತಿದ್ದೀರಿ. ಇದಲ್ಲದೇ ಬ್ಯಾಂಕ್‌ಗೆ ಬಂದಂತಹ ಗ್ರಾಹಕರಿಗೆ ವಿಶಾಲವಾದ ಜಾಗ ಮತ್ತು ಆಸನಗಳ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂಬ ನಿಯಮಗಳನ್ನೂ ಸಹ ಇಲ್ಲಿ ಗಾಳಿಗೆ ತೂರಲಾಗಿದೆ ಎಂದು ದೂರಿದರು.

ಜಿಲ್ಲೆಯಲ್ಲಿರುವ ಎಲ್ಲಾ ಬ್ಯಾಂಕ್‌ಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ವ್ಯವಹಾರ ನಡೆಸಬೇಕು ಹಾಗೂ ಬ್ಯಾಂಕಿನ ಸಿಬ್ಬಂದಿ ಗ್ರಾಹಕರೊಂದಿಗೆ ಕನ್ನಡ ಭಾಷೆಯಲ್ಲೇ ವ್ಯವಹರಿಸಲು ಮುಂದಾಗಬೇಕು. ಇನ್ನು ಮುಂದೆ ಸಿಬ್ಬಂದಿಯ ದುರ್ವರ್ತನೆ ಸರಿಪಡಿಸಲು ಕಾರ್ಯರೂಪಕ್ಕೆ ತರದೇ ಹೋದಲ್ಲಿ ಬ್ಯಾಂಕ್ ವ್ಯವಸ್ಥೆ ವಿರುದ್ಧ ಹೋರಾಟ ಮಾಡಲಾಗುವುದು. ಸ್ಥಳೀಯ ಭಾಷೆಗೆ ಆದ್ಯತೆ ನೀಡದೇ ಇದ್ದರೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಉಗ್ರವಾದ ಹೋರಾಟವನ್ನು ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಗರಾಧ್ಯಕ್ಷ ಶಿವಕುಮಾರ್, ಅಭಿಗೌಡ, ಪ್ರೀತಂ ರಾಜ್, ಆಲ್ವೀನ್, ಬೋರೇಗೌಡ, ಶಶಾಂಕ್, ಶ್ರೀಶಾಂತ್ ಇತರರು ಉಪಸ್ಥಿತರಿದ್ದರು.