ರಸ್ತೆ ಅಪಘಾತ ತಡೆಯಲು ಬ್ಲಾಕ್ ಸ್ಪಾಟ್ ಗುರುತಿಸಿ: ಡೀಸಿ ಲತಾಕುಮಾರಿ ಸೂಚನೆ

| Published : Aug 01 2025, 12:00 AM IST

ರಸ್ತೆ ಅಪಘಾತ ತಡೆಯಲು ಬ್ಲಾಕ್ ಸ್ಪಾಟ್ ಗುರುತಿಸಿ: ಡೀಸಿ ಲತಾಕುಮಾರಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ರಸ್ತೆಬದಿಗಳನ್ನು ಕಸ ವಿಲೇವಾರಿ ಸ್ಥಳಗಳನ್ನಾಗಿ ಮಾಡಬೇಡಿ, ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನಿಗಾವಹಿಸುವಂತೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯಲ್ಲಿ ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಬ್ಲಾಕ್‌ಸ್ಪಾಟ್(ಅಪಘಾತ ಸಂಭವಿಸಬಹುದಾದ ಸ್ಥಳಗಳು) ಗಳನ್ನು ಗುರುತಿಸಿ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನ್ಯೂನ್ಯತೆಗಳ ಬಗ್ಗೆ ಮುನ್ನೆಚ್ಚರಿಕೆವಹಿಸಿ ಸರಿಪಡಿಸುವ ಮೂಲಕ ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡುವಂತೆ ತಿಳಿಸಿದರಲ್ಲದೆ, ದ್ವಿಚಕ್ರ ವಾಹನ ಚಾಲನೆಯಿಂದ ಅಪಘಾತಗಳು ಸಂಭವಿಸಿ, ಹೆಚ್ಚು ಜನರು ಮೃತಪಟ್ಟಿರುತ್ತಾರೆ, ಇದನ್ನು ತಡೆಗಟ್ಟಲು ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ನಾಲ್ಕು ಚಕ್ರದ ವಾಹನದಲ್ಲಿ ಮುಂದಿನ ಹಾಗೂ ಹಿಂದಿನ ಸೀಟುಗಳಲ್ಲಿ ಕುಳಿತುಕೊಳ್ಳುವವರು ಪ್ರಾಣ ರಕ್ಷಣೆಗಾಗಿ ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕುವಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮವಹಿಸಲು ನಿರ್ದೇಶನ ನೀಡಿದರು.

ಕಳೆದ ಆರು ತಿಂಗಳಲ್ಲಿ ಅಪಘಾತಗಳಿಂದ ಜಿಲ್ಲೆಯ ನಗರ ವ್ಯಾಪ್ತಿಯಲ್ಲಿ ೨೮೧ ಹಾಗೂ ಗ್ರಾಮೀಣ ಪ್ರದೇಶದಲ್ಲಿ ೧೭೦ ಜನರು ಮೃತಪಟ್ಟಿದ್ದಾರೆ, ಇದನ್ನು ಗಂಭೀರವಾಗಿ ಪರಿಗಣಿಸಿ ಅಪಘಾತಗಳು ಸಂಭವಿಸದಂತೆ ತಡೆಗಟ್ಟಲು ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕು ಎಂದು ತಿಳಿಸಿದರು.

ವಾಹನಗಳ ಚಲಾಯಿಸುವ ಬಗ್ಗೆ ಪ್ರತಿಯೊಬ್ಬರಿಗೂ ಶಿಕ್ಷಣದ ಅಗತ್ಯವಿದೆ, ಈ ನಿಟ್ಟಿನಲ್ಲಿ ಸಂಚಾರಿ ನಿಯಮಗಳ ಕುರಿತು ಕಲಾ ತಂಡಗಳಿಂದ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲು ಹೇಳಿದರಲ್ಲದೆ, ಪದವಿಪೂರ್ವ ಕಾಲೇಜುಗಳಲ್ಲಿ ರಸಪ್ರಶ್ನೆ ಕಾರ್ಯಕ್ರಮ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಪಘಾತಕ್ಕೆ ಕಾರಣವಾದ ಕುಡಿದು ವಾಹನ ಚಲಾಯಿಸುವುದು, ಅತೀವೇಗವಾಗಿ ವಾಹನ ಚಲಾಯಿಸುವುದು, ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿ ವಾಹನ ಚಲಾಯಿಸುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಈ ನಿಟ್ಟಿನಲ್ಲಿ ವೃತ್ತಿನಿರತ ವಾಹನ ಚಾಲಕರಿಗೆ ಓರಿಯೆಂಟೇಷನ್ ತರಬೇತಿ, ರಿಫ್ರೆಶ್ ಮೆಂಟ್ ಕೋರ್ಸ್ ಆಯೋಜಿಸಲು ಸೂಚಿಸಿದರಲ್ಲದೆ, ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಪ್ರತಿ ತಿಂಗಳ ಎರಡನೇ ಮಂಗಳವಾರ ಸಂಜೆ ೬ ಗಂಟೆಗೆ ರಸ್ತೆ ಸುರಕ್ಷಾತಾ ಸಮಿತಿಯ ವರ್ಚುವಲ್ ಸಭೆ, ಹಾಗೂ ೪ನೇ ಮಂಗಳವಾರ ಮಧ್ಯಾಹ್ನ ೩ ಗಂಟೆಗೆ ಭೌದ್ಧಿಕ ಸಭೆಯನ್ನು ನಡೆಸಲಾಗುವುದು ಎಂದ ಜಿಲ್ಲಾಧಿಕಾರಿ ಅವರು, ತಾಲೂಕು ಮಟ್ಟದಲ್ಲಿಯೂ ಕಡ್ಡಾಯವಾಗಿ ತಹಸೀಲ್ದಾರ್‌ಗಳು ರಸ್ತೆ ಸುರಕ್ಷಾತಾ ಸಮಿತಿ ಸಭೆಯನ್ನು ನಡೆಸಿ ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು.

ಸಭೆಗೆ ಕಡ್ಡಾಯವಾಗಿ ಆಟೋ ಚಾಲಕರ ಸಂಘ, ಟ್ರಕ್, ಕ್ಯಾಬ್.ಟ್ಯಾಕ್ಸಿ, ಗೂಡ್ಸ್ ವಾಹನದ ಚಾಲಕರ ಸಂಘ ಪದಾಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಯ ಪದಾಧಿಕಾರಿಗಳನ್ನು ಆಹ್ವಾನಿಸುವಂತೆ ಸೂಚನೆ ನೀಡಿದರು.

ಪಾದಚಾರಿಗಳ ಮಾರ್ಗಗಳು ಪಾದಚಾರಿಗಳಿಗೆ ಮುಕ್ತವಾಗಿರುವಂತೆ ಹಾಗೂ ಯಾವುದೇ ಅತಿಕ್ರಮಣವಾಗಿದ್ದಲ್ಲಿ ಕೂಡಲೇ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಟ್ರಾಫಿಕ್ ಸಿಗ್ನಲ್ ಗಳಲ್ಲಿ ಸಿಸಿ ಕ್ಯಾಮೆರಾಗಳು ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸುವುದು. ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ ಹಾಗೂ ಅಗತ್ಯವಿರುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ, ಸೈನೇಜ್ ಹಾಗೂ ಎಚ್ಚರಿಕೆ ಬೋರ್ಡ್‌ಗಳನ್ನು ಅಳವಡಿಸಲು ನಿರ್ದೇಶನ ನೀಡಿದರು.

ಅಪಘಾತಗಳು ಸಂಭವಿಸಿದಾಗ ಗೋಲ್ಡನ್ ಹವರ್‌ನಲ್ಲಿ ಪ್ರಾಣ ಉಳಿಸಲು ಆಸ್ಪತ್ರೆಗಳಲ್ಲಿ ತುರ್ತು ವೈದ್ಯಕೀಯ ಸೇವೆ ಒದಗಿಸಲು ಆಸ್ಪತ್ರೆಗಳನ್ನು ನೋಟಿಪೈ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರಲ್ಲದೆ, ಆ್ಯಂಬುಲೆನ್ಸ್‌ಗಳು ಬಳಕೆಗೆ ಯೋಗ್ಯವಾಗಿವೆಯೇ ಎಂದು ಪರಿಶೀಲಿಸುವಂತೆ ಸೂಚಿಸಿ, ರಾಷ್ಟ್ರೀಯ ಹೆದ್ದಾರಿಯ ಸಹಾಯವಾಣಿ ಸಂಖ್ಯೆ ೧೦೩೩ ಗೂ ಕರೆ ಮಾಡಬಹುದಾಗಿದೆ ಎಂದು ಸಲಹೆ ನೀಡಿದರು.

ಅಪಘಾತಗಳನ್ನು ನಿಯಂತ್ರಿಸಲು ರಸ್ತೆ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಎಲ್ಲಾ ವಾಹನಗಳಿಗೆ ಕಡ್ಡಾಯವಾಗಿ ರೇಡಿಯಂ ಸ್ಟ್ರಿಪ್ ಅಳವಡಿಸಬೇಕು ಎಂದರಲ್ಲದೆ, ನಾಯಿಗಳು ವಾಹನಗಳಿಗೆ ಅಡ್ಡ ಬರುವುದರಿಂದಲೂ ಅಪಘಾತಗಳು ಸಂಭವಿಸುವುದರಿಂದ ನಾಯಿಗಳ ಜನನ ನಿಯಂತ್ರಣಕ್ಕೆ ಸ್ಥಳೀಯ ಸಂಸ್ಥೆಗಳು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದರು.

ಜೆಜೆಎಂ ಯೋಜನೆಯಡಿ ಕಾಮಗಾರಿ ಮಾಡುವ ಸಂದರ್ಭದಲ್ಲಿ ರಸ್ತೆಗಳನ್ನು ಹಾಗೂ ರಸ್ತೆ ಬದಿಗಳಲ್ಲಿ ಗುಂಡಿ ತೆಗೆದಿದ್ದು, ಅವುಗಳನ್ನು ಮುಚ್ಚಿಲ್ಲದಿರುವ ಕಾರಣ ಅಪಘಾತಗಳು ಸಂಭವಿಸುತ್ತಿವೆ. ಇವುಗಳನ್ನು ಮುಚ್ಚಲು ಕ್ರಮವಹಿಸುವಂತೆ ಸೂಚಿಸಿದರು.

ರಸ್ತೆಬದಿಗಳನ್ನು ಕಸ ವಿಲೇವಾರಿ ಸ್ಥಳಗಳನ್ನಾಗಿ ಮಾಡಬೇಡಿ, ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನಿಗಾವಹಿಸುವಂತೆ ಸೂಚಿಸಿದರು.

ಆ.೧ ರಂದು ವಾಹನ ಚಾಲಕರುಗಳಿಗೆ ಹೃದಯ ಸಂಬಂಧಿ ಆರೋಗ್ಯ ತಪಾಸಣೆಯನ್ನು ನಗರದ ಹಾಸನಾಂಬೆ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಗಿರೀಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಾಶ್ ಹಾಗೂ ಮತ್ತಿತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.