ಈರುಳ್ಳಿ ದರ ಕುಸಿತ, ಕುರಿ ಮೇಯಿಸಿದ ರೈತ

| Published : Sep 10 2025, 01:03 AM IST

ಸಾರಾಂಶ

ಜಿಲ್ಲಾದ್ಯಂತ ಈ ವರ್ಷ ಈರುಳ್ಳಿ ಬೆಳೆ ಉತ್ತಮ ಫಸಲು ಬಂದಿದ್ದು ಬಹುತೇಕ ಕಟಾವಿಗೆ ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ದರ ಪಾತಳಕ್ಕೆ ಕುಸಿದಿದೆ. ಮಾರುಕಟ್ಟೆಯಲ್ಲಿ ₹ 100ಗೆ ಐದು ಕೆಜಿ ಮಾರಾಟವಾಗುತ್ತಿದೆ. ರೈತರಿಗೆ ₹ 5 ಸಹ ಸಿಗುವುದಿಲ್ಲ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಮುಂಗಾರು ಮಳೆ ಕಣ್ಣುಮುಚ್ಚಾಲೆಯಿಂದ ಬಾಡಿದ ಮೆಕ್ಕೆಜೋಳ ಹರಗಿದ್ದ ರೈತರಿಗೆ ಇದೀಗ ಈರುಳ್ಳಿ ಬೆಳೆ ಕುಸಿತ ಗಾಯದ ಮೇಲೆ ಬರೆ ಎಳೆದಿದೆ. ಹುಲುಸಾಗಿ ಬೆಳೆದಿದ್ದ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಪರಿಣಾಮ ಕಟಾವಿಗೆ ಬಂದಿದ್ದ ಬೆಳೆಯಲ್ಲಿ ಕುರಿ ಮೇಯಿಸುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಈರುಳ್ಳಿ ದರ ಪಾತಾಳಕ್ಕೆ ಕುಸಿದ ಪರಿಣಾಮ ತಾಲೂಕಿನ ಬೆಳೂರು ಗ್ರಾಮದ ರೈತ ದೇವಪ್ಪ ಕುರುಬರ ಮೂರು ಎಕರೆ ಜಮೀನಿನಲ್ಲಿ ಕುರಿ ಮೇಯಿಸಿದ್ದಾರೆ.

ಜಿಲ್ಲಾದ್ಯಂತ ಈ ವರ್ಷ ಈರುಳ್ಳಿ ಬೆಳೆ ಉತ್ತಮ ಫಸಲು ಬಂದಿದ್ದು ಬಹುತೇಕ ಕಟಾವಿಗೆ ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ದರ ಪಾತಳಕ್ಕೆ ಕುಸಿದಿದೆ. ಮಾರುಕಟ್ಟೆಯಲ್ಲಿ ₹ 100ಗೆ ಐದು ಕೆಜಿ ಮಾರಾಟವಾಗುತ್ತಿದೆ. ರೈತರಿಗೆ ₹ 5 ಸಹ ಸಿಗುವುದಿಲ್ಲ. ಕಟಾವು ಮಾಡಿಕೊಂಡು ತೆಗೆದುಕೊಂಡು ಹೋದರೆ ಖರ್ಚು ಸಹ ಮೈಮೇಲೆ ಬೀಳುತ್ತದೆ ಎಂದು ಕುರಿ ಮೇಯಿಸುತ್ತಿದ್ದಾರೆ.

ಎರಡು ಲೋಡ್‌:

ದೇವಪ್ಪ ಕುರುಬರ ತಮ್ಮ ಜಮೀನಿನಲ್ಲಿ ಬೆಳೆದ ಈರುಳ್ಳಿ ಬೆಳೆ ಬರೋಬ್ಬರಿ ಎರಡು ಲೋಡ್‌ ಆಗುತ್ತದೆ. ಆದರೆ, ಇದನ್ನು ಕಟಾವು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಮೈಮೇಲೆ ಖರ್ಚು ಬೀಳುತ್ತದೆ ಎಂದು ಕುರಿಗಾರರಿಗೆ ಮೇಯಿಸಿಕೊಂಡು ಹೋಗುವಂತೆ ಹೇಳಿದ್ದಾರೆ. ಹೀಗೇ ಮಾಡುವುದರಿಂದ ಕುರಿ ಹಿಕ್ಕಿ ಜಮೀನಿನಲ್ಲಿ ಬಿದ್ದು ಫಲವತ್ತತೆ ಆದರೂ ಆಗುತ್ತದೆ ಎಂದು ದೇವಪ್ಪ ಹೇಳಿದ್ದಾರೆ.

₹2 ಲಕ್ಷ ಖರ್ಚು:

ಮೂರು ಎಕರೆಯಲ್ಲಿ ಈರುಳ್ಳಿ ಬೆಳೆಯಲ್ಲಿ ₹ 2 ಲಕ್ಷ ಖರ್ಚಾಗಿದೆ. ಕಟಾವು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಮತ್ತೊಂದು ₹ 1 ಲಕ್ಷ ಬೇಕಾಗುತ್ತದೆ. ಈಗಿನ ದರಕ್ಕೆ ಮಾರಾಟ ಮಾಡಿದರೆ ₹ 50 ಸಾವಿರ ಬರುವುದಿಲ್ಲ. ಒಂದು ಆಳಿಗೆ ₹ 300ರಿಂದ ₹ 400 ಕೊಡಬೇಕು. ಮಾಡಿದ ಖರ್ಚು ಹೋಗಲಿ, ಕಟಾವು ಮಾಡಿದ ಖರ್ಚು ಬರುವುದಿಲ್ಲ ಎಂದು ಕುರಿಗಳನ್ನು ಮೇಯಿಸಲು ಹೇಳಿದ್ದೇನೆ ಎನ್ನುತ್ತಾರೆ ರೈತ. ಈ ಬಾರಿ ಉತ್ತಮವಾಗಿ ಬೆಳೆ ಬಂದಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕಿದ್ದರೆ ನಾಲ್ಕಾರು ಲಕ್ಷ ರುಪಾಯಿ ಸಿಗುತ್ತಿತ್ತು. ಆದರೆ, ದರ ಕುಸಿತದಿಂದ ಕಟಾವು ಮಾಡಿ ಮಾರಾಟ ಮಾಡಿದರೆ ಬಿತ್ತನೆ ಮಾಡಿ ಪೋಷಣೆ ಮಾಡಿದ ಖರ್ಚು ಸಹ ಬರುವುದಿಲ್ಲ. ಹೀಗಾಗಿ ಕುರಿ ಮೇಯಿಸಲು ಹೇಳಿದ್ದೇನೆ. ಇದರಿಂದ ಎರಡ್ಮೂರು ಲಕ್ಷ ನಷ್ಟವಾಗಿದೆ ಎಂದು ರೈತ ದೇವಪ್ಪ ಕುರುಬರ ಹೇಳಿದರು. ಎಲ್ಲ ದರವೂ ಏರಿಕೆಯಾಗಿವೆ. ಆದರೆ, ರೈತರು ಬೆಳೆದ ಬೆಳೆಗೆ ಮಾತ್ರ ದರ ಏರುತ್ತಲೇ ಇಲ್ಲ. ಇಂದು ಕೂಲಿಯಾಳು ಮತ್ತು ಗೊಬ್ಬರದ ದರ ಲೆಕ್ಕಾಚಾರಕ್ಕೆ ಈರುಳ್ಳಿ ₹ 100ಗೆ ಕೆಜಿ ಮಾರಬೇಕು. ಆದರೆ, ಈಗಲೂ ₹10ಕ್ಕೆ ಮಾರಾಟವಾದರೆ ರೈತರು ಬದುಕುವುದಾದರೂ ಹೇಗೆ? ಎಂದು ರೈತ ಗ್ಯಾನಪ್ಪ ಬೆಳೂರು ಹೇಳಿದರು.