ಸಾರಾಂಶ
ಗದಗ ನಗರದ ಜಿಲ್ಲಾಡಳಿತ ಭವನದ ಎದುರು ನಡೆದ ಬಗರ್‌ಹುಕುಂ ರೈತರ ಅಹೋರಾತ್ರಿ ಧರಣಿ 23ನೇ ದಿನಕ್ಕೆ ಕಾಲಿಟ್ಟಿದ್ದು, ಮಂಗಳವಾರ ರೈತರು ಸರ್ಕಾರ ತಕ್ಷಣ ನೊಂದ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ರಸ್ತೆ ತಡೆ ನಡೆಸಿ ಬಾರಕೋಲು ಚಳವಳಿ ನಡೆಸಿ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿದರು.
ಗದಗ: ನಗರದ ಜಿಲ್ಲಾಡಳಿತ ಭವನದ ಎದುರು ನಡೆದ ಬಗರ್‌ಹುಕುಂ ರೈತರ ಅಹೋರಾತ್ರಿ ಧರಣಿ 23ನೇ ದಿನಕ್ಕೆ ಕಾಲಿಟ್ಟಿದ್ದು, ಮಂಗಳವಾರ ರೈತರು ಸರ್ಕಾರ ತಕ್ಷಣ ನೊಂದ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ರಸ್ತೆ ತಡೆ ನಡೆಸಿ ಬಾರಕೋಲು ಚಳವಳಿ ನಡೆಸಿ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿದರು.
2023ರಲ್ಲಿ ಸಚಿವ ಎಚ್.ಕೆ. ಪಾಟೀಲರು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರೂ, ಇಂದಿಗೂ ಅದು ಕಾಗದದಲ್ಲೇ ಉಳಿದಿದೆ ಎಂದು ರೈತರು ಆರೋಪಿಸಿದರು.ಈ ವೇಳೆ ಉತ್ತರ ಕರ್ನಾಟಕ ಮಹಾಸಭಾದ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ತಲೆತಲಾಂತರಗಳಿಂದ ರೈತರು ಅರಣ್ಯ ಜಮೀನುಗಳನ್ನು ಉಪಜೀವನಕ್ಕಾಗಿ ಸಾಗುವಳಿ ಮಾಡುತ್ತಿದ್ದು, ಕಪ್ಪತ್ತಗುಡ್ಡವನ್ನು ಸಂರಕ್ಷಣೆ ಮಾಡಿರುವ ಬಗರ್‌ಹುಕುಂ ರೈತರಿಗೆ ಹಾಗೂ ಅರಣ್ಯ ಅವಲಂಬಿತರಿಗೆ ಸರ್ಕಾರ ಹಕ್ಕುಪತ್ರ ನೀಡದೆ ಕಿರುಕುಳ ನೀಡುತ್ತಿದೆ. ನಾಗಾವಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯ ನಿರ್ಮಾಣಕ್ಕಾಗಿ ಸರ್ವೆ ನಂ.143/2ಬಿ/ಬ/1ಬಿ/2 ರ 124 ಎಕರೆ ಹಾಗೂ ಸರ್ವೆ ನಂ.179/ಬಿ ರ 128 ಎಕರೆ 35 ಗುಂಟೆ ಜಮೀನುಗಳನ್ನು ನಾಲ್ಕು ತಲೆಮಾರುಗಳಿಂದ ನೂರಾರು ಕುಟುಂಬಗಳು ಉಪಯೋಗಿಸುತ್ತಿದ್ದರೂ ಪರಿಹಾರ ನೀಡದೆ ಒಕ್ಕಲಿಬ್ಬಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಎನ್.ಟಿ. ಪೂಜಾರ, ಚಂಬಣ್ಣ ಚನ್ನಪಟ್ಟಣ, ನಾಮದೇವ, ನಿಂಗಪ್ಪ, ಚನ್ನಪ್ಪ ಭಗತ್, ಫಿರೋಜ್ ನದಾಫ ಸೇರಿದಂತೆ ಜಿಲ್ಲೆಯ ಅನೇಕ ರೈತರು, ಮಹಿಳೆಯರು ಹಾಗೂ ಹೋರಾಟಗಾರರು ಇದ್ದರು.ನಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದು, ಸರ್ಕಾರ ಕೂಡಲೇ ಸ್ಪಂದಿಸಬೇಕು. ಇನ್ನೂ ಎರಡು ದಿನ ಶಾಂತಿಯುತ ಹೋರಾಟ ಮುಂದುವರಿಸುತ್ತೇವೆ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಯಾವುದೇ ಅಹಿತಕರ ಘಟನೆ ನಡೆದರೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಉತ್ತರ ಕರ್ನಾಟಕ ಮಹಾಸಭಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಹೇಳಿದರು.