₹4000ರಿಂದ ₹500ಕ್ಕೆ ಕುಸಿದ ಈರುಳ್ಳಿ ಬೆಲೆ!

| Published : Oct 01 2025, 01:01 AM IST

ಸಾರಾಂಶ

ಹಂಗಾಮು ಶುರುವಾಗಿ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದ್ದಂತೆ ಬೆಲೆ ತೀವ್ರ ಕುಸಿತವಾಗಿದ್ದು, ಪ್ರಥಮ ದರ್ಜೆ ಈರುಳ್ಳಿಯೇ ₹1000ದಿಂದ ₹1200 ವರೆಗೆ ಮಾರಾಟವಾಗುತ್ತಿದ್ದರೆ, ದ್ವಿತೀಯ ದರ್ಜೆಯ ಈರುಳ್ಳಿ ಕ್ವಿಂಟಲ್‌ಗೆ ₹300ರಿಂದ 500ಕ್ಕೆ ಮಾರಾಟವಾಗುತ್ತಿದೆ.

ಶಿವಾನಂದ ಅಂಗಡಿ

ಹುಬ್ಬಳ್ಳಿ:

ರಾಜ್ಯದ ಪ್ರಮುಖ ತೋಟಗಾರಿಕೆ ಬೆಳೆ ಈರುಳ್ಳಿ ಬೆಲೆ ಕುಸಿತವಾಗಿದ್ದು, ಈರುಳ್ಳಿ ಕೇಳುವವರಿಲ್ಲದಂತಾಗಿದೆ. ಬೆಲೆ ಕುಸಿತದ ಪರಿಣಾಮ ನಾಡಹಬ್ಬ ನವರಾತ್ರಿ ಸಂಭ್ರಮದಲ್ಲಿ ಇರಬೇಕಾದ ರೈತರು ನಷ್ಟ ಭರಿಸಲಾಗದೇ ಕಣ್ಣೀರು ಸುರಿಸುತ್ತಿದ್ದಾರೆ.

ಕಳೆದ ವರ್ಷ ರಾಜ್ಯದ ಈರುಳ್ಳಿ ಮಾರುಕಟ್ಟೆಯಲ್ಲಿ ₹ 3ರಿಂದ 4 ಸಾವಿರಕ್ಕೆ ಕ್ವಿಂಟಲ್‌ ಮಾರಾಟವಾಗಿದೆ. ಇದರಿಂದ ಪ್ರೇರೇಪಿತರಾಗಿದ್ದ ರೈತರು ಈ ಬಾರಿ 5ರಿಂದ 6 ಲಕ್ಷ ಹೆಕ್ಟೇರ್‌ನಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದಾರೆ.

ಈಗ ಹಂಗಾಮು ಶುರುವಾಗಿ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದ್ದಂತೆ ಬೆಲೆ ತೀವ್ರ ಕುಸಿತವಾಗಿದ್ದು, ಪ್ರಥಮ ದರ್ಜೆ ಈರುಳ್ಳಿಯೇ ₹1000ದಿಂದ ₹1200 ವರೆಗೆ ಮಾರಾಟವಾಗುತ್ತಿದ್ದರೆ, ದ್ವಿತೀಯ ದರ್ಜೆಯ ಈರುಳ್ಳಿ ಕ್ವಿಂಟಲ್‌ಗೆ ₹300ರಿಂದ 500ಕ್ಕೆ ಮಾರಾಟವಾಗುತ್ತಿದೆ. ಲಾರಿ ಬಾಡಿಗೆ ಕೊಡಲು ಆಗದೇ ರೈತರು ಮಾರುಕಟ್ಟೆಯಿಂದ ಹೇಳದೇ ಕೇಳದೇ ವಾಪಸ್‌ ಊರಿಗೆ ಮರಳುತ್ತಿದ್ದಾರೆ. ಬಿತ್ತನೆ ಬೀಜ, ಕಳೆ ತೆಗೆಯುವುದು, ಕೀಟನಾಶಕ ಸೇರಿ ಎಕರೆಗೆ ₹70ರಿಂದ ₹80 ಸಾವಿರ ಖರ್ಚು ಆಗಿರುತ್ತದೆ. ಬೆಲೆ ಕುಸಿತದಿಂದಾಗಿ ಹಲವಾರು ರೈತರು ಹೊಲದಲ್ಲಿ ಈರುಳ್ಳಿ ಹರಗಿದ್ದು, ಟ್ರ್ಯಾಕ್ಟರ್‌ನಿಂದಲೇ ರೂಟ್‌ವೇಟರ್‌ ಹೊಡೆದಿದ್ದಾರೆ.

ಆಂಧ್ರ ಮಾದರಿ ಪರಿಹಾರ ನೀಡಿ:

ಆಂಧ್ರ ಪ್ರದೇಶದಲ್ಲಿ ಈರುಳ್ಳಿ ಬೆಳೆಗಾರರಿಗೆ ಹೆಕ್ಟೇರ್‌ಗೆ ₹ 50 ಸಾವಿರ ಪರಿಹಾರ ಘೋಷಣೆಯಾಗಿದೆ. ಅಲ್ಲಿ ₹1200ಗೆ ಕ್ವಿಂಟಲ್‌ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ರಾಜ್ಯದಲ್ಲಿಯೂ ಕ್ವಿಂಟಲ್‌ಗೆ ಕನಿಷ್ಠ ₹2 ಸಾವಿರ ಬೆಂಬಲ ಬೆಲೆಯಲ್ಲಿ ಗ್ರೇಡ್‌ ಮಾಡದೇ ಖರೀದಿಸುವಂತೆ ಸರ್ಕಾರಕ್ಕೆ ಒತ್ತಡ ಹಾಕಿದ್ದೇವೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ನಾಫೆಡ್‌, ಎನ್‌ಸಿಸಿಎಫ್‌ ಏಜೆನ್ಸಿಗಳ ಮೂಲಕ ಖರೀದಿಸಲು ಒತ್ತಡ ಹಾಕಿದ್ದೇವೆ ಎನ್ನುತ್ತಾರೆ ಬೆಳೆಗಾರರ ಸಂಘದ ಮುಖಂಡರು.

ರಾಜ್ಯದಿಂದ ಪ್ರತಿ ವರ್ಷ ಬಾಂಗ್ಲಾದೇಶಕ್ಕೆ ಈರುಳ್ಳಿ ರಫ್ತಾಗುತ್ತಿತ್ತು. ಅಲ್ಲಿನ ರಾಜಕೀಯ ಅನಿಶ್ಚಿತತೆ ಹಿನ್ನೆಲೆಯಲ್ಲಿ ಅಲ್ಲಿನ ಖರೀದಿದಾರರು ಇಲ್ಲಿನ ಈರುಳ್ಳಿ ಖರೀದಿಸಲು ಆಸಕ್ತಿ ತೋರಿಸುತ್ತಿಲ್ಲ. ಗುಣಮಟ್ಟದ ಈರುಳ್ಳಿ ಅಭಾವದಿಂದಾಗಿ ಹೊರದೇಶಗಳಿಗೆ ಈರುಳ್ಳಿ ಹೋಗುತ್ತಿಲ್ಲ. ಹೀಗಾಗಿ ಬೆಲೆ ಏರಿಕೆಯಾಗುತ್ತಿಲ್ಲ ಎನ್ನುತ್ತಾರೆ ಈರುಳ್ಳಿ ಮಾರುಕಟ್ಟೆ ದಲಾಲರು.

ರಾಜ್ಯದ ಚಿಕ್ಕಮಗಳೂರು, ಚಿತ್ರದುರ್ಗ, ಬಳ್ಳಾರಿ, ಬೆಳಗಾವಿ, ವಿಜಯನಗರ, ಬಾಗಲಕೋಟೆ, ವಿಜಯಪುರ, ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಈ ವರ್ಷ ಪರಿಸ್ಥಿತಿ ಹೇಳತೀರದಂತಾಗಿದೆ. ಮಹಾರಾಷ್ಟ್ರದಿಂದ ಪ್ರತಿದಿನ ಬೆಂಗಳೂರಿಗೆ 30 ಸಾವಿರ ಪ್ಯಾಕೆಟ್‌ ಬರುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸೋಮವಾರ ಬೆಂಗಳೂರಿನ ಯಶವಂತಪುರ ಮಾರುಕಟ್ಟೆಗೆ 73,330, ದಾಸನಪುರ ಮಾರುಕಟ್ಟೆಗೆ 5326 ಪ್ಯಾಕೆಟ್‌ ಈರುಳ್ಳಿ ಆವಕವಾಗಿದೆ. ಗದಗ, ದಾವಣಗೆರೆ, ರಾಣಿಬೆನ್ನೂರು, ಹುಬ್ಬಳ್ಳಿ ಈರುಳ್ಳಿ ವಹಿವಾಟು ನಡೆಯುತ್ತದೆ. ಬೆಳಗಾವಿಯಲ್ಲೂ ವಾರದಲ್ಲಿ ಎರಡು ವಹಿವಾಟು ನಡೆಯುವುದು ವಿಶೇಷ.

ಖರೀದಿ ಕೇಂದ್ರಗಳನ್ನು ತೆರೆದು ಕನಿಷ್ಠ ₹2 ಸಾವಿರ ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀದಿಸಬೇಕು. ಕೇಂದ್ರ ಸರ್ಕಾರ ರೈತರಿಗೆ ನೆರವಾಗಿ ಪರಿಹಾರ ನೀಡಲು ಬರುವುದಿಲ್ಲ, ಹೀಗಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಬೆಲೆ ಕುಸಿತ ಪಾವತಿ ಮೊತ್ತ ಯೋಜನೆಯಡಿ ಪ್ರಸ್ತಾವನೆ ಸಲ್ಲಿಸಬೇಕು. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ.

ಎನ್‌. ಎಂ. ಸಿದ್ದೇಶ ಉತ್ತಂಗಿ, ಈರುಳ್ಳಿ ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷಈ ಬಾರಿ ವಿಪರೀತ ಮಳೆಯಿಂದಾಗಿ ಧಾರವಾಡ ಜಿಲ್ಲೆಯಲ್ಲಿ ಮುಂಗಾರಿ ಬೆಳೆಗಳಾದ ಹೆಸರು, ಸೋಯಾಬಿನ್‌, ಉದ್ದು ಬೆಳೆಗಳಂತೆ ಈರುಳ್ಳಿ ಬೆಳೆಯೂ ಹೆಚ್ಚಿನ ಪ್ರಮಾಣದಲ್ಲಿ ಕೊಳೆತಿದೆ. ಅಳಿದುಳಿದ ಈರುಳ್ಳಿ ಈಗ ಮಾರುಕಟ್ಟೆ ಬರುತ್ತಿದ್ದಂತೆ ಬೆಲೆ ಕುಸಿತವಾಗಿದ್ದು, ಮಾಡಿದ ಖರ್ಚು ಬರುತ್ತಿಲ್ಲ. ಹೀಗಾಗಿ ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ.

ಬಸವರಾಜ ಮೇಗೂರ, ರೈತ