ಸಾರಾಂಶ
ಇತ್ತೀಚೆಗೆ ನಟ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಹೆಸರಿನಲ್ಲಿ ಹಣ ವಸೂಲಿ ಪ್ರಕರಣದಲ್ಲಿ ಬಿಹಾರ ಮೂಲದ ಸೈಬರ್ ವಂಚಕರ ಪಾತ್ರ ಇರುವುದನ್ನು ಸದಾಶಿವನಗರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚೆಗೆ ನಟ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಹೆಸರಿನಲ್ಲಿ ಹಣ ವಸೂಲಿ ಪ್ರಕರಣದಲ್ಲಿ ಬಿಹಾರ ಮೂಲದ ಸೈಬರ್ ವಂಚಕರ ಪಾತ್ರ ಇರುವುದನ್ನು ಸದಾಶಿವನಗರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.ತಾರಾ ದಂಪತಿ ಮೊಬೈಲ್ ಹ್ಯಾಕ್ ಮಾಡಿ ಅವರ ಸ್ನೇಹಿತರು ಹಾಗೂ ಕುಟುಂಬ ಸದಸ್ಯರಿಂದ 1.5 ಲಕ್ಷ ರು ಹಣವನ್ನು ಸೈಬರ್ ವಂಚಕರು ವಸೂಲಿ ಮಾಡಿದ್ದರು. ಈ ಹಣ ವರ್ಗಾವಣೆ ಜಾಡು ಹಿಡಿದು ಆರೋಪಿಗಳನ್ನು ಪೊಲೀಸರು ಗುರುತು ಹಿಡಿದಿದ್ದು, ವಂಚಕರ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಕೆಲ ದಿನಗಳ ಹಿಂದೆ ಆನ್‌ಲೈನ್ ಶಾಪಿಂಗ್‌ಗೆ ನೀಡಿದ್ದ ಉಪೇಂದ್ರ ಹಾಗೂ ಅವರ ಪ್ರಿಯಾಂಕ ಉಪೇಂದ್ರ ಅವರ ಮೊಬೈಲ್ ಸಂಖ್ಯೆಗಳನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದರು. ಬಳಿಕ ತುರ್ತು 50 ಸಾವಿರ ರು. ನೆರವು ನೀಡುವಂತೆ ಕೋರಿ ತಾರಾ ದಂಪತಿ ಹೆಸರಿನಲ್ಲಿ ಅವರ ಕುಟುಂಬ ಸದಸ್ಯರು ಹಾಗೂ ಸ್ನೇಹಿತರಿಗೆ ಆರೋಪಿಗಳು ವಾಟ್ಸಪ್ ಸಂದೇಶ ಕಳುಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಲವರು ಹಣ ಕಳುಹಿಸಿದ್ದರು. ಈ ಸೈಬರ್ ವಂಚನೆ ಬಗ್ಗೆ ತಿಳಿದ ಕೂಡಲೇ ಸದಾಶಿವನಗರ ಠಾಣೆ ಪೊಲೀಸರಿಗೆ ಉಪೇಂದ್ರ ದಂಪತಿ ದೂರು ಕೊಟ್ಟಿದ್ದರು.