ಸಾಗರ ಜಿಲ್ಲೆಗೆ ಸಿದ್ದಾಪುರ ಸೇರ್ಪಡೆಗೆ ಅವಕಾಶ ನೀಡಲ್ಲ: ಉಪೇಂದ್ರ ಪೈ

| Published : Sep 16 2025, 12:03 AM IST

ಸಾಗರ ಜಿಲ್ಲೆಗೆ ಸಿದ್ದಾಪುರ ಸೇರ್ಪಡೆಗೆ ಅವಕಾಶ ನೀಡಲ್ಲ: ಉಪೇಂದ್ರ ಪೈ
Share this Article
  • FB
  • TW
  • Linkdin
  • Email

ಸಾರಾಂಶ

ಘಟ್ಟದ ಮೇಲಿನ ಕ್ಷೇತ್ರದ ಶಾಸಕರು ಸಿದ್ದಾಪುರದಲ್ಲಿ ಸಭೆ ಕರೆದು ಶಿರಸಿ ಜಿಲ್ಲೆಯನ್ನಾಗಿ ಮಾಡುತ್ತೇವೆ

ಶಿರಸಿ: ಶಿರಸಿ-ಸಿದ್ದಾಪುರಕ್ಕೆ ಅನೇಕ ವರ್ಷದ ಅವಿನಾಭಾವ ಸಂಬಂಧವಿದೆ. ಸಿದ್ದಾಪುರವನ್ನು ಪ್ರಸ್ತಾಪಿತ ಸಾಗರ ಜಿಲ್ಲೆಗೆ ಸೇರ್ಪಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಶಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಆಗ್ರಹಿಸಿದರು.

ಅವರು ಸೋಮವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಘಟ್ಟದ ಮೇಲಿನ ಕ್ಷೇತ್ರದ ಶಾಸಕರು ಸಿದ್ದಾಪುರದಲ್ಲಿ ಸಭೆ ಕರೆದು ಶಿರಸಿ ಜಿಲ್ಲೆಯನ್ನಾಗಿ ಮಾಡುತ್ತೇವೆ ಎಂಬ ಆತ್ಮವಿಶ್ವಾಸ ಅವರಲ್ಲಿ ತುಂಬಬೇಕು. ವಿಧಾನಸೌಧದಲ್ಲಿಯೂ ಜನರ ಪರವಾಗಿ ಧ್ವನಿ ಎತ್ತಬೇಕು ಎಂದರು.

ಶಿರಸಿ ಜಿಲ್ಲೆ ಕಡೆಗೆ ಆಸಕ್ತಿ ಇದೆ ಎಂಬುದನ್ನು ಸಿದ್ದಾಪುರದಲ್ಲಿ ಜರುಗಿದ ಜನಾಭಿಪ್ರಾಯ ಹಲವು ಮುಖಂಡರು ಹೇಳಿದ್ದಾರೆ. ಶಿರಸಿ ಜಿಲ್ಲೆಯಾದರೆ 35 ಕಿ.ಮೀ.ಗೆ ಜಿಲ್ಲಾ ಕೇಂದ್ರ ಸ್ಥಾನ ಸಿಗುತ್ತದೆ. ಸಿದ್ದಾಪುರ ತಾಲೂಕಿನ ಗಡಿಭಾಗದಲ್ಲಿ ಶೇ.70ರಿಂದ 80ರಷ್ಟು ಅಭಿವೃದ್ಧಿಯಾಗಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಸಾಗರದ ಜನಪ್ರತಿನಿಧಿಗಳು ಹೇಳಿದರೂ ಅವರು ಶಿರಸಿ ಜಿಲ್ಲೆಯ ಕಡೆ ಆಸಕ್ತಿ ವಹಿಸುತ್ತಿದ್ದಾರೆ. ಸಿದ್ದಾಪುರದ ಜತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಶಾಸಕರು ಜಾಗೃತರಾಗಿ ಸಿದ್ದಾಪುರವನ್ನು ಯಾವುದೇ ಕಾರಣಕ್ಕೂ ಸಾಗರಕ್ಕೆ ಸೇರ್ಪಡೆಗೆ ಸಹಕಾರ ನೀಡಬಾರದು. 3 ಕ್ಷೇತ್ರದ ಶಾಸಕರು ಕೂಡಲೇ ಚರ್ಚಿಸಿ, ಅಭಿಪ್ರಾಯ ನೀಡಬೇಕು. ಶಿರಸಿ ಜಿಲ್ಲಾ ಹೋರಾಟಗಾರರು, ಸಿದ್ದಾಪುರ ಮುಖಂಡರ ನಡುವೆ ಗೊಂದಲಗಳಿಲ್ಲ.‌ ಭಿನ್ನಾಭಿಪ್ರಾಯವಿಲ್ಲ. ಅಭಿವೃದ್ಧಿ ಜತೆ ಜಿಲ್ಲಾ ಕೇಂದ್ರ ಸಮೀಪವಾಗಬೇಕು ಎಂಬುದು ನಮ್ಮೆಲ್ಲರ ಮೂಲ ಉದ್ದೇಶ ಎಂದರು.

ಪರಮಾನಂದ ಹೆಗಡೆ ಮಾತನಾಡಿ, ಶಿರಸಿ ಪ್ರತ್ಯೇಕ ಜಿಲ್ಲೆಯಾಗಬೇಕೆಂದು ಜಿಲ್ಲಾ ಹೋರಾಟ ಸಮಿತಿಯು ಬಹಳಷ್ಟು ವರ್ಷಗಳಿಂದ ಹೋರಾಟ ಮಾಡಿದೆ. ಆದರೆ ಕಾರಣಾಂತರಗಳಿಂದ ಜಿಲ್ಲೆ ರಚನೆ ಸಾಧ್ಯವಾಗಿಲ್ಲ. ಈಗ ಹುಟ್ಟಿಕೊಂಡ ಕೆಲ ಸಂಘಟನೆಗಳು ಜನರ ಮಧ್ಯೆ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಬೇರೆ ಸಂಘಟನೆ ಬದಲು ನಮ್ಮ ಜತೆ ಸೇರಿಕೊಂಡು ಹೋರಾಟಕ್ಕೆ ಕೈಜೋಡಿಸಬಹುದು. ಸಿದ್ದಾಪುರದಲ್ಲಿ ಸಭೆ ಕರೆದು ನಮ್ಮನ್ನು ಎಚ್ಚರಿಸಿದ್ದಕ್ಕಾಗಿ ಅಲ್ಲಿನ ಮುಖಂಡರಿಗೆ, ಜನರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವಿಶ್ವನಾಥ ಶರ್ಮಾ ನಾಡಗುಳಿ, ಜನಾರ್ಧನ ನಾಯ್ಕ, ಅಭಿರಾಮ ಹೆಗಡೆ, ಅರ್ಚನಾ ನಾಯಕ, ವಾಸುದೇವ ಮಾಡಗೇರಿ, ಲೋಹಿತ ನಾಯ್ಕ, ಗಜಾನನ ಕಲ್ಮನೆ ಇದ್ದರು.

ಶಿರಸಿ ಜಿಲ್ಲೆ ಘೋಷಣೆ ಕೊನೆಯ ಹಂತಕ್ಕೆ ಬಂದಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಶಿರಸಿ ಜಿಲ್ಲೆ ಘೋಷಿಸಬೇಕು ಎಂದು ಮನವಿ ಸಲ್ಲಿಸಿದಾಗ ಅವರು ಶಿರಸಿಗೆ ಆಗಮಿಸಿ ಘೋಷಣೆ ಮಾಡುತ್ತೇನೆ ಎಂದು ಹೇಳಿದ್ದರು. ಅದರಂತೆ ಹಲವು ಸಚಿವರು ನಮ್ಮ ಹೋರಾಟಕ್ಕೆ ಬೆಂಬಲ ನೀಡುವುದರ ಜತೆ ಅಂದಿನ ಸಭಾಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅತಿ ಹೆಚ್ಚಿನ ಸಹಕಾರ ನೀಡಿದ್ದರು. ನಂತರ ಬೆಳವಣಿಗೆಯಲ್ಲಿ ಯಲ್ಲಾಪುರದ ಕೆಲವು ಸಂಘಟನೆಗಳು ಯಲ್ಲಾಪುರ ಜಿಲ್ಲೆಯಾಗಬೇಕು ಎಂದು ಹೇಳಿಕೆ ನೀಡಿದ್ದರು. ಆಗ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಚುನಾವಣೆಗೆ ಸಮಸ್ಯೆಯಾಗುತ್ತದೆ ಎಂದು ಜಿಲ್ಲಾ ಪ್ರಸ್ತಾಪ ಸದ್ಯಕ್ಕೆ ಬೇಡ ಎಂದು ಮುಖ್ಯಮಂತ್ರಿ ಬಳಿ ಒತ್ತಡ ಹೇರಿದ್ದರಿಂದ ಪ್ರಸ್ತಾವನೆ ಅಲ್ಲಿಗೆ ನಿಂತಿತು. ಈಗ ಪುನಃ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಶಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು.