ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ರಾಗಿ ಖರೀದಿ ಕೇಂದ್ರದಲ್ಲಿ ರೈತರಿಂದ ಹಣಕ್ಕಾಗಿ ಬೇಡಿಕೆ ಇಡುವುದು, ರೈತರನ್ನು ಸತಾಹಿಸುವುದು ಕಂಡು ಬಂದರೆ ಅಂತವರ ವಿರುದ್ಧ ರೈತರೊಡಗೂಡಿ ಪ್ರತಿಭಟನೆ ನಡೆಸಲಾಗುವುದು ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಪಟ್ಟಣದ ಎಪಿಎಂಸಿಯಲ್ಲಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರವು ರೈತರ ಅನುಕೂಲಕ್ಕಾಗಿ ಬೆಂಬಲ ಯೋಜನೆಯಡಿ ರಾಗಿ ಖರೀದಿಸುತ್ತಿದೆ. ಇದರಿಂದ ಅವರ ಜೀವನ ಮಟ್ಟ ಸುಧಾರಣೆಯಾಗಲಿದೆ. ಆದರೆ, ಖರೀದಿ ಕೇಂದ್ರದ ಅಧಿಕಾರಿಗಳು ಹಮಾಲಿಗಳು, ಮಧ್ಯವರ್ತಿಗಳು, ವ್ಯಾಪಾರಸ್ಥರು ಒಟ್ಟಿಗೆ ಸೇರಿಕೊಂಡು ರೈತರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ದೂರುಗಳು ಬರುತ್ತಿವೆ, ಆದ್ದರಿಂದ ಖರೀದಿ ಕೇಂದ್ರದಲ್ಲಿ ರೈತರನ್ನು ಹಣಕ್ಕಾಗಿ ಬೇಡಿಕೆ ಇಡುವುದು ಹಾಗೂ ವಿಳಂಬ ಧೋರಣೆ ತೋರುವುದು ಕಂಡು ಬಂದರೆ ಅಂತವರ ವಿರುದ್ಧ ರೈತರೊಡಗೂಡಿ ಖರೀದಿ ಕೇಂದ್ರಕ್ಕೆ ನಾವೇ ಮುತ್ತಿಗೆ ಹಾಕುತ್ತೇವೆ ಎಂದರು.ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರ ಉತ್ತಮ ಬೆಲೆ ನೀಡುತ್ತಿದೆ, ಅದಕ್ಕಾಗಿ ಎಲ್ಲರೂ ಗುಣಮಟ್ಟದ ರಾಗಿಯನ್ನು ಮಾರುಕಟ್ಟೆಗೆ ತರಬೇಕು. ಖರೀದಿ ಕೇಂದ್ರದಲ್ಲಿ ಚೀಲದ ತೂಕ್ಕಕ್ಕಾಗಿ 600 ಗ್ರಾಂ ರಾಗಿ ಕಳೆಯಬೇಕು, ಅದು ಬಿಟ್ಟು ಹೆಚ್ಚುವರಿಯಾಗಿ ರಾಗಿಯನ್ನು ಬೆಳೆಯಬಾರದು ಒಂದು ವೇಳೆ ತೂಕಕ್ಕಿಂತ ಹೆಚ್ಚು ರಾಗಿ ಪಡೆದುಕೊಂಡರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಕೆ.ಜಿ. ರಘುಪತಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ ಮಾತನಾಡಿದರು.
ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ಕಿರಣ್ ಕುಮಾರ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಈಚೂರು ಲೋಕೇಶ್, ಕೆಪಿಸಿಸಿ ಸದಸ್ಯ ಅನಿಲ್ ಕುಮಾರ್, ಮುಖಂಡರಾದ ಪರಮೇಶ್, ರಾಜಶೇಖರ್, ಚಂದ್ರೇಗೌಡ, ಲಕ್ಷ್ಮಿ ನಾರಾಯಣ್, ಪ್ರಕಾಶ್, ಮಂಜುನಾಥ್, ಚಿಕ್ಕೇಗೌಡ, ಆರ್.ಡಿ. ಚಂದ್ರು, ಪಿ. ಮಹದೇವ್, ನಂದೀಶ್, ಲೋಹಿತ್, ಮಹದೇವ್, ನಿಸಾರ್ ಅಹಮದ್, ಸುಬ್ರಹ್ಮಣ್ಯ, ಖರೀದಿ ಅಧಿಕಾರಿಗಳಾದ ಮಂಜುನಾಥ್, ಗೀತಾ, ಶಾಂತ ಇದ್ದರು.