₹4.5 ಲಕ್ಷ ಕೋಟಿಗೆ ಕೇವಲ ₹50 ಸಾವಿರ ಕೋಟಿ ವಾಪಸ್‌

| Published : Feb 12 2024, 01:34 AM IST

₹4.5 ಲಕ್ಷ ಕೋಟಿಗೆ ಕೇವಲ ₹50 ಸಾವಿರ ಕೋಟಿ ವಾಪಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಆರ್ಯ ವೈಶ್ಯ ಚಾರಿಟಬಲ್‌ ಟ್ರಸ್ಟ್‌ ಜಯನಗರದ ಎನ್‌ಎಂಕೆಆರ್‌ವಿ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಿಂದ ₹4.50 ಲಕ್ಷ ಕೋಟಿ ತೆರಿಗೆ ಕೇಂದ್ರ ಸರ್ಕಾರಕ್ಕೆ ಸಂದಾಯವಾಗುತ್ತಿದ್ದರೂ ನಮಗೆ ವಾಪಸ್‌ ಬರುತ್ತಿರುವುದು ಕೇವಲ ₹50 ಸಾವಿರ ಕೋಟಿ ಮಾತ್ರ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

ಆರ್ಯ ವೈಶ್ಯ ಚಾರಿಟಬಲ್‌ ಟ್ರಸ್ಟ್‌ ಜಯನಗರದ ಎನ್‌ಎಂಕೆಆರ್‌ವಿ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಅವರು ಮಾತನಾಡಿದರು.

ನಮ್ಮದು ಒಕ್ಕೂಟ ವ್ಯವಸ್ಥೆಯಾಗಿದ್ದು ಇರುವವರಿಂದ ಸಂಗ್ರಹಿಸಿ ಇಲ್ಲದವರಿಗೆ ನೀಡಬೇಕಾಗುತ್ತದೆ. ಆದರೆ ಪೂರ್ತಿ ಕಿತ್ತುಕೊಳ್ಳಬಾರದು. ನಮ್ಮ ತೆರಿಗೆ ಪಾಲಿನ ಒಂದು ರುಪಾಯಿಯಲ್ಲಿ 13 ಪೈಸೆ ಮಾತ್ರ ವಾಪಸ್‌ ಬರುತ್ತಿದೆ. ಕೆಲವು ರಾಜ್ಯಗಳಿಗೆ ಬಡತನ, ಜನಸಂಖ್ಯೆ ಆಧಾರದಲ್ಲಿ ಒಂದು ರುಪಾಯಿಗೆ ₹200 ನೀಡಲಾಗುತ್ತಿದೆ ಎಂದು ವಿವರಿಸಿದರು.

ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಸಹಕಾರ:

ಆರ್ಯ ವೈಶ್ಯ ಚಾರಿಟಬಲ್‌ ಟ್ರಸ್ಟ್‌ನಿಂದ ವಿದ್ಯಾರ್ಥಿ ನಿಲಯ ಸ್ಥಾಪಿಸಲು ಅನುಮತಿ ಕೊಡಿಸಬೇಕೆಂಬ ಬೇಡಿಕೆಗೆ ಬಿಬಿಎಂಪಿಯಿಂದ ಯೋಜನಾ ಮಂಜೂರಾತಿ ಕೊಡಿಸುವುದಲ್ಲದೇ ಇದಕ್ಕೆ ತಗಲುವ ಶುಲ್ಕವನ್ನು ಸ್ವತಃ ತಾವೇ ಭರಿಸುತ್ತೇನೆ ಎಂದು ಭರವಸೆ ನೀಡಿದರು.

ಸಮುದಾಯದ ಬಹುತೇಕರು ಹಿಂದೆ ವ್ಯಾಪಾರ ವೃತ್ತಿ ಮಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗುತ್ತಿದ್ದು ಉನ್ನತ ವಿದ್ಯಾಭ್ಯಾಸ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಿದ್ಯಾರ್ಥಿ ವೇತನ ಪಡೆಯುತ್ತಿರುವವರಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಸ್ನಾತಕೋತ್ತರ ಪದವಿ ಅಭ್ಯಾಸ ಮಾಡಿದವರೇ ಹೆಚ್ಚಾಗಿದ್ದಾರೆ. ಅದರಲ್ಲೂ ವಿಕಲಚೇತನರಿಗೆ ಟ್ರಸ್ಟ್‌ನವರು ವಿದ್ಯಾರ್ಥಿ ವೇತನ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸದ ತೇಜಸ್ವಿ ಸೂರ್ಯ, ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌.ಅರುಣ್‌, ಟ್ರಸ್ಟ್‌ನ ಪ್ರಸಾದ್‌ ಹಾಜರಿದ್ದರು.