ರಾಷ್ಟ್ರೀಯ ಮಂದಗತಿಯ ಹೆದ್ದಾರಿ ಕಾಮಗಾರಿಗೆ ಆಕ್ರೋಶ

| Published : Feb 12 2024, 01:34 AM IST

ರಾಷ್ಟ್ರೀಯ ಮಂದಗತಿಯ ಹೆದ್ದಾರಿ ಕಾಮಗಾರಿಗೆ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಹಲವು ವರ್ಷಗಳಿಂದ ಹೆದ್ದಾರಿ ಆಗಲೀಕರಣ ಕಾಮಗಾರಿ ಸಮಸ್ಯೆಗೆ ಗುತ್ತಿಗೆದಾರ ಐಆರ್‌ಬಿ ಕಂಪನಿ ಕಿವಿಗೊಡುತ್ತಿಲ್ಲ. ಹೆದ್ದಾರಿ ಅಗಲೀಕರಣ ಕಾಮಗಾರಿ ಉದ್ಘಾಟನೆಗೊಂಡು ೮ ವರ್ಷ ಕಳೆಯುತ್ತ ಬಂದರೂ ಕಾಮಗಾರಿ ಮುಗಿದಿಲ್ಲ

ಭಟ್ಕಳ: ತಾಲೂಕಿನಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಬಗ್ಗೆ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಹಾಗೂ ಅವೈಜ್ಞಾನಿಕವಾಗಿರುವುದರಿಂದ ಅಪಘಾತಕ್ಕೆ ಕಾರಣವಾಗುತ್ತಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.

ಭಟ್ಕಳ ತಾಲೂಕು ನಾಗರಿಕ ಹಿತ ರಕ್ಷಣಾ ವೇದಿಕೆ ಹಾಗೂ ರಾಷ್ಟ್ರೀಯ ಹೆದ್ಧಾರಿ ಅಭಿವೃದ್ಧಿ ಸಮಿತಿ ಜಂಟಿ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದ್ದು, ಸುಮಾರು ೮ ವರ್ಷದ ಹಿಂದೆ ಆರಂಭಗೊಂಡಿರುವ ರಾ. ಹೆ. ಹೆದ್ದಾರಿ ಕಾಮಗಾರಿ ಇದುವರೆಗೂ ಪೂರ್ಣಗೊಳ್ಳಲಿಲ್ಲ. ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಮೌನ ವಹಿಸಿದ್ದು ಇದರ ವಿರುದ್ಧ ಬೃಹತ್ ಪ್ರತಿಭಟನೆ ಹಾಗೂ ಕಾನೂನು ಹೋರಾಟಕ್ಕೆ ನಿರ್ಧರಿಸಲಾಯಿತು.

ಕಳೆದ ಹಲವು ವರ್ಷಗಳಿಂದ ಹೆದ್ದಾರಿ ಆಗಲೀಕರಣ ಕಾಮಗಾರಿ ಸಮಸ್ಯೆಗೆ ಗುತ್ತಿಗೆದಾರ ಐಆರ್‌ಬಿ ಕಂಪನಿ ಕಿವಿಗೊಡುತ್ತಿಲ್ಲ. ಹೆದ್ದಾರಿ ಅಗಲೀಕರಣ ಕಾಮಗಾರಿ ಉದ್ಘಾಟನೆಗೊಂಡು ೮ ವರ್ಷ ಕಳೆಯುತ್ತ ಬಂದರೂ ಕಾಮಗಾರಿ ಮುಗಿದಿಲ್ಲ. ಆದರೆ ಐಆರ್‌ಬಿ ಕಂಪನಿಯ ಟೋಲ್ ಸಂಗ್ರಹ ಕಾರ್ಯ ಯಾವುದೇ ಅಡೆತಡೆ ಇಲ್ಲದೇ ಮುಂದುವರಿಸಿದ್ದು ಇದು ನಾಗರಿಕರಿಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ. ನಾಗರಿಕರಿಗೆ ಇಷ್ಟೆಲ್ಲ ತೊಂದರೆಯಾಗುತ್ತಿದ್ದರೂ ಜಿಲ್ಲಾಡಳಿತವಾಗಲಿ ಗುತ್ತಿಗೆದಾರ ಕಂಪೆನಿ ಐಆರ್‌ಬಿ ಯಾಗಲೀ ಯಾವುದೇ ಕ್ರಮ ಜರುಗಿಸುತ್ತಿಲ್ಲ. ನಮ್ಮ ಹೆದ್ದಾರಿಯ ಕುರಿತು ಅಧಿಕಾರಯುತವಾಗಿ ಮಾತನಾಡಲು ಅವಕಾಶವಿದ್ದರೂ ಸಹ ನಮ್ಮ ಸಂಸದರು ಚಕಾರ ಎತ್ತುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಆಗೊಮ್ಮೆ ಈಗೊಮ್ಮೆ ಐ.ಆರ್.ಬಿ ವಿರುದ್ಧ ಮಾತನಾಡಿ ಸುಮ್ಮನಾಗಿದ್ದಾರೆ. ಈಗ ಪ್ರತಿಭಟನೆ ಮತ್ತು ಕಾನೂನು ಹೋರಾಟವೊಂದೇ ಇದಕ್ಕೆ ಇರುವ ಅಂತಿಮ ಮಾರ್ಗವಾಗಿದೆ. ಮುಂದಿನ ವಾರದೊಳಗೆ ಹೆದ್ದಾರಿ ಕಾಮಗಾರಿ ಸ್ಥಗಿತಗೊಂಡಿರುವುದರ ಕುರಿತು ಮಾಹಿತಿ ಕ್ರೂಢೀಕರಿಸಿ ಕಾನೂನು ತಜ್ಞರೊಂದಿಗೆ ಚರ್ಚಿಸಿ ಐ.ಆರ್.ಬಿಯ ಟೋಲ್ ಗೇಟ್ ಎದುರು ಬೃಹತ್ ಪ್ರತಿಭಟನೆ ನಡೆಸುವುದರ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು.

ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಸಂಚಾಲಕ ರಾಜೇಶ ನಾಯಕ, ಭಟ್ಕಳ ತಾಲೂಕು ನಾಗರಿಕ ಹಿತರಕ್ಷಣಾ ವೇದಿಕೆ ಸಂಚಾಲಕ ಸತೀಶಕುಮಾರ್, ತಂಜೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ನಾಮಧಾರಿ ಸಮಾಜದ ಅಧ್ಯಕ್ಷ ಅರುಣ ನಾಯ್ಕ, ಗೌರವಾಧ್ಯಕ್ಷ ಕೃಷ್ಣಾ ನಾಯ್ಕ ಆಸರಕೇರಿ, ಅಟೋ ಚಾಲಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ, ಪುರಸಭಾ ಸದಸ್ಯ ಪಾಸ್ಕಲ್ ಗೋಮ್ಸ್, ಪಪಂ ಸದಸ್ಯ ಇಮ್ರಾನ್ ಲಂಕಾ, ತಂಜೀಂ ಮಾಜಿ ಅಧ್ಯಕ್ಷ ಎಸ್.ಎಂ. ಪರ್ವೇಜ್, ಎಸ್.ಎಂ. ನಾಯ್ಕ, ಸುಬೋದ ಆಚಾರ್ಯ, ಆಶಿಫ್, ಅಷ್ಫಾಕ್, ರಾಮನಾಥ ಬಳೆಗಾರ ಮುಂತಾದವರು ಉಪಸ್ಥಿತರಿದ್ದರು.