ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಅನ್ನದಾತ ರೈತನಿಂದ ಮಾತ್ರ ದೇಶದ ಹಸಿವು ನೀಗಿಸುವ ಶಕ್ತಿ ಇದೆ, ಎಐ ತಂತ್ರಜ್ಞಾನ ಕಾಲದಲ್ಲೂ ರೈತನ ಕೆಲಸವನ್ನು ಯಾರು ಕಸಿದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ವನಕಲ್ಲು ಮಠದ ಡಾ. ಶ್ರೀ ಬಸವರಮಾನಂದ ಸ್ವಾಮೀಜಿ ಹೇಳಿದರು.ತ್ಯಾಮಗೊಂಡ್ಲು ಹೋಬಳಿಯ ಸೂಲ್ಕುಂಟೆ ಗ್ರಾಮದಲ್ಲಿ ಕೃಷಿ ರಾಜ್ಯ ರೈತ ಸಂಘದ ಘಟಕಶಾಖೆಗೆ, ತೆಂಗಿನ ಸಸಿಗಳನ್ನು ವಿತರಿಸಿ, ದೀಪಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತ ಸಮಗ್ರ ಕೃಷಿಯತ್ತ ಮನಸ್ಸು ಮಾಡಬೇಕು, ರಾಜ್ಯ ರೈತ ಸಂಘವು ರೈತರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಸ್ಥಾಪಿತವಾದ ಒಂದು ಸಂಘಟನೆಯಾಗಿದೆ, ಇದು ರೈತರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಅವರ ಜೀವನವನ್ನು ಸುಧಾರಿಸುವ ಗುರಿ ಹೊಂದಿದೆ, ರೈತರಿಗೆ ಕೃಷಿ ಸಲಹೆ ಮತ್ತು ತಾಂತ್ರಿಕ ನೆರವು ಒದಗಿಸುವ ಪ್ರಮುಖ ಉದ್ದೇಶವನ್ನು ರೈತಸಂಘ ಹೊಂದಿದೆ, ಘಟಕ ಶಾಖೆ ಹೆಚ್ಚು ಪ್ರಭಾವಶಾಲಿಯಾಗಲಿ ಎಂದರು.ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಾಜು.ಡಿ.ಎಂ. ಮಾತನಾಡಿ, ರಾಜ್ಯಾದ್ಯಂತ ನಮ್ಮ 28 ಶಾಖೆಗಳಿವೆ, ಪ್ರಮುಖ ಕೇಂದ್ರ ಕಚೇರಿ ತುಮಕೂರಿನಲ್ಲಿದೆ, ಇಂದು ಗ್ರಾಮ ಘಟಕವನ್ನು ಸೂಲ್ಕುಂಟೆ ಗ್ರಾಮದಲ್ಲಿ ಪ್ರಾರಂಭಿಸಿದ್ದೇವೆ, ಸಂಘಟನೆಯಿಂದ, ತ್ಯಾಮಗೊಂಡ್ಲು- ದಾಬಸ್‍ಪೇಟೆ ಹೋಬಳಿಯಲ್ಲಿ ಕೆಐಎಡಿಬಿ ಈ ಭಾಗದಲ್ಲಿ ರೈತರ ಕೃಷಿ ಜಮೀನು ವಶಪಡಿಸಿಕೊಂಡಿರುವುದನ್ನು ವಿರೋಧಿಸಿ ಹೋರಾಟ ರೂಪಿಸುತ್ತೇವೆ ಎಂದರು.
ಸಂಘಟನೆಯ ರಾಜ್ಯ ನಿರ್ದೇಶಕ ಬಿ.ಕೆ. ಚಿಕ್ಕಹನುಮಯ್ಯ, ಸಂಘಟನಾ ಕಾರ್ಯದರ್ಶಿ ನಾರಾಯಣಪ್ಪ, ವೈದ್ಯ ಡಾ.ಸಿ.ಅಶೋಕ್, ತನುಜಾ, ಏಕಾಂತ್, ಜಯರಾಮಯ್ಯ, ಗ್ರಾಪಂ ಮಾಜಿ ಸದಸ್ಯರಾದ ಆಂಜಿನಮೂರ್ತಿ, ಬಾಲಕೃಷ್ಣ, ಮುಖಂಡರಾದ ಕಾಂತರಾಜ್, ಮಂಜುನಾಥ್, ಪಾರ್ಥಸಾರಥಿ, ನಾಗರಾಜ್, ತಾಲೂಕು ಸಂಘಟನಾ ಕಾರ್ಯದರ್ಶಿಗಳಾದ ಹರೀಶ್, ಬಿ.ಜಿ ಬೋಗಯ್ಯ, ಬಿ.ಜಿ ನವೀನ್ ಕುಮಾರ್, ಲಕ್ಷ್ಮಣ, ಲಕ್ಷ್ಮಯ್ಯ, ನಾಗರತ್ನಮ್ಮ, ಪುಷ್ಪಲತಾ, ಬೋರೇಗೌಡ್ರು ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ರೈತ ಬಾಂಧವರು ಹಾಜರಿದ್ದರು.
----------
ಕೋಟ್:ನಮ್ಮ ಸಂಘಟನೆ ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತದೆ, ರೈತರಿಗೆ ನ್ಯಾಯಯುತ ಬೆಲೆ ಒದಗಿಸುವುದು. ಕೃಷಿ ಸಾಲ ಮತ್ತು ಇತರೆ ಆರ್ಥಿಕ ನೆರವು, ರೈತರಿಗೆ ಎಲ್ಲಾ ಸೇವೆ ಒದಗಿಸುವುದು ಮತ್ತು ರೈತರಿಗಾಗಿ ರೈತರಿಗೋಸ್ಕರ, ರೈತರ ಸಮಗ್ರ ಅಭಿವೃದ್ಧಿಯೇ ನಮ್ಮ ಸಂಘಟನೆಯ ಗುರಿಯಾಗಿದೆ.
ಬಿ.ಕೆ. ಚಿಕ್ಕಹನುಮಯ್ಯ, ರಾಜ್ಯ ನಿರ್ದೇಶಕ, ಕೃಷಿ ರಾಜ್ಯ ರೈತ ಸಂಘ