ಕನ್ನಡಪ್ರಭ ವಾರ್ತೆ ಆಲೂರು

ನಗರದಲ್ಲಾಗಲಿ, ಗ್ರಾಮೀಣ ಪ್ರದೇಶದಲ್ಲಾಗಲಿ ಬೆಂಕಿ ಅನಾಹುತವಾದರೆ ಸಾರ್ವಜನಿಕರು ಗಾಬರಿಗೊಳ್ಳದೆ, ಅವರ ಹೆಸರು, ದೂರವಾಣಿ ಸಂಖ್ಯೆ, ಯಾವ ತರಹದ ಬೆಂಕಿ, ಯಾವ ಊರು, ಯಾವ ರಸ್ತೆ ಎಂಬುದರ ಸರಿಯಾದ ವಿಳಾಸವನ್ನು ತಿಳಿಸಿದಲ್ಲಿ, ಅಗ್ನಿಶಾಮಕ ದಳದವರು ಕೂಡಲೇ ಘಟನಾ ಸ್ಥಳಕ್ಕೆ ಬರಲು ಅನುಕೂಲವಾಗುತ್ತದೆ ಎಂದು ಆಲೂರು ಅಗ್ನಿಶಾಮಕ ಠಾಣಾಧಿಕಾರಿ ಡಿ.ಜಿ ಮಂಜೇಗೌಡ ತಿಳಿಸಿದರು.ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಕರಪತ್ರಗಳನ್ನು ಹಂಚಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಮಾತನಾಡಿದ ಅವರು ಬೇಸಿಗೆ ಕಾಲವಾಗಿರುವುದರಿಂದ ಮನೆಗಳಿಗೆ, ಹುಲ್ಲಿನ ಮೆದೆಗಳಿಗೆ, ಮರದ ರಾಶಿಗೆ ಬೆಂಕಿ ಆದಾಗ ಸಾಕಷ್ಟು ಮರಳು ಹಾಗೂ ನೀರನ್ನು ಹಾಕಬೇಕು. ಸೀಮೆಎಣ್ಣೆ ಪೆಟ್ರೋಲ್ ಅಥವಾ ಇತರೆ ಇಂಧನಗಳಿಗೆ ಬೆಂಕಿ ತಗುಲಿದಾಗ ನೀರನ್ನು ಹಾಕ ಬಾರದು ಏಕೆಂದರೆ ನೀರು ಭಾರವಾಗಿರುವುದರಿಂದ ಕೆಳಗಿಳಿದು ಬೆಂಕಿಯ ರಭಸ ಹೆಚ್ಚಾಗುತ್ತದೆ.ಹಾಗೂ ಬೆಂಕಿಯು ಮನೆಯ ಬೇರೆಡೆಗೆ ವ್ಯಾಪಿಸುವ ಸಾಧ್ಯತೆಗಳು ಇರುತ್ತವೆ. ಇಂತಹ ಸಂದರ್ಭದಲ್ಲಿ ಬೆಂಕಿಯನ್ನು ನಂದಿಸಲು ಹೆಚ್ಚಿನ ಮರಳನ್ನು ಉಪಯೋಗಿಸ ಬೇಕು.ವಿದ್ಯುತ್ ಒಲೆಗಳಲ್ಲಿ ಕೆಲಸ ಮಾಡುವಾಗ ಮರದ ಹಲೆಗೆ ಅಥವಾ ರಬ್ಬರ್ ಶೀಟ್ ಮೇಲೆ ನಿಂತು ಕೆಲಸ ಮಾಡಬೇಕು. ಯಾವುದೇ ವಿದ್ಯುತ್ ಉಪಕರಣಕ್ಕೆ ಬೆಂಕಿ ತಗುಲಿದಾಗ ನೀರನ್ನು ಹಾಕಬಾರದು, ಬದಲಾಗಿ ತಕ್ಷಣವೇ ಮೇನ್ ಸ್ವಿಚ್ಚನ್ನು ಆಫ್ ಮಾಡಬೇಕು, ಹಾಗೂ ಮರಳನ್ನು ಹಾಕಬೇಕು ಎಂದ ಅವರು, ಒಲೆಯ ಮೇಲಿಟ್ಟಿರುವ ಪಾತ್ರಗಳನ್ನು ಹೊರಗಡೆ ತೆಗೆಯಲು ಸೀರೆ ಅಥವಾ ಉಟ್ಟ ಬಟ್ಟೆ ಇತರ ಭಾಗವನ್ನು ಉಪಯೋಗಿಸಬೇಡಿ ಎಂದು ತಿಳಿಸಿದರು.ಯಾವುದೇ ಕಾರಣಕ್ಕೂ ಪೆಟ್ರೋಲ್, ಡೀಸೆಲ್ ಇತರೆ ಅಪಾಯಕಾರಿ ವಸ್ತುಗಳನ್ನು ಮನೆಯಲ್ಲಿ ಶೇಖರಿಸಬೇಡಿ ,ಬೆಂಕಿಯಾಗುವ ಸಂಭವ ಹೆಚ್ಚಾಗಿರುತ್ತದೆ ಹುಟ್ಟ ಬಟ್ಟೆಗೆ ಅಥವಾ ದೇಹಕ್ಕೆಬೆಂಕಿ ತಗುಲಿದಾಗ ಕೂಡಲೇ ಕಂಬಳಿ ಅಥವಾ ದಪ್ಪನೆಯ ಹೊದಿಕೆಯ ಬಟ್ಟೆಯನ್ನು ಸುತ್ತಿ ನೆಲದ ಮೇಲೆ ಎರಡು ಮೂರು ಬಾರಿ ಹೊರಳಾಡಿಸಬೇಕು, ಬೆಂಕಿಯಿಂದ ದೇಹಕ್ಕೆ ಗಾಯಗಳಾದಾಗ ಶುದ್ಧವಾದ ನೀರನ್ನು ಹಾಕಿ, ಅವರನ್ನು ಹೊರಗಡೆ ಓಡಾಡಲು ಬಿಡಬೇಡಿ, ಬೆಂಕಿ ಅವಗಡಗಳು ಸಂಭವಿಸಿದಾಗ ಸಹಾಯಕ್ಕಾಗಿ ಅಗ್ನಿಶಾಮಕ ಮತ್ತು ತುರ್ತು ಸೇವೆಗೆ ದೂರವಾಣಿ ಮುಖಾಂತರ ಸಂಪರ್ಕಿಸಲು 08170-200047,112,101, ಈ ದೂರವಾಣಿ ಸಂಖ್ಯೆಗಳಿಗೆ ಗಳಿಗೆ ಕರೆ ಮಾಡಬೇಕೆಂದು ತಿಳಿಸಿದರು.ಪ್ರಮುಖ ಅಗ್ನಿಶಾಮಕ ಯೋಗೀಶ್ ಮಾತನಾಡಿ ಅಂಗಡಿ ಮಳಿಗೆಗಳಲ್ಲಿ ರಾತ್ರಿ ಬೀಗ ಹಾಕಿ ಹೋಗುವಾಗ ಎಲೆಕ್ಟ್ರಿಕ್ ಮೇನ್ ಸ್ವಿಚ್ ಅನ್ನು ಆಫ್ ಮಾಡಬೇಕು ಹಾಗೂ ದೇವರ ಫೋಟೋಗಳ ಮುಂದೆ ದೀಪ ಗಂಧದಕಡ್ಡಿಗಳನ್ನು ಹಚ್ಚಿದ್ದಲ್ಲಿ ನಂದಿಸಿ ಹೋಗುವುದನ್ನು ಮರೆಯಬಾರದು. ಗ್ಯಾಸ್ ಸ್ಟೌವ್‌ಗಳನ್ನು ಯಾವಾಗಲೂ ಸಿಲಿಂಡರ್‌ಗಿಂತ ಎತ್ತರದ ಪ್ರದೇಶಗಳಲ್ಲಿ ಇಟ್ಟು ಅಡುಗೆ ಮಾಡುವುದು ಉತ್ತಮ, ಎಲ್ಪಿಜಿ ಉಳಿಕೆ ಅನಿಲ ಪಡೆಯುವುದಕ್ಕೋಸ್ಕರ ಸಿಲಿಂಡರನ್ನು ತಲೆಕೆಳಗಾಗಿ ಮಾಡಬೇಡಿ, ಅಥವಾ ಬಿಸಿ ನೀರಿನ ಪಾತ್ರೆಗಳಲ್ಲಿ ಇಡಬಾರದು, ಪ್ರತಿ ಉಪಯೋಗದ ನಂತರ ಯಾವಾಗಲೂ ಬರ್ನಲ್ ಹಾಗೂ ರೆಗುಲೇಟರ್ಗಳ ವಾಲ್ ಅನ್ನು ಆಫ್ ಮಾಡಬೇಕು, ಅನಿಲ ಸೋರಿಕೆ ಪತ್ತೆಹಚ್ಚಲು ಸೋಪ್ ನೀರನ್ನು ಮಾತ್ರ ಬಳಸಬೇಕು,ಬದಲಾಗಿ ಹೆಚ್ಚಿನ ದೀಪವನ್ನಾಗಲಿ ಹೆಚ್ಚಿನಮೇಣದಬತ್ತಿಯನ್ನಾಗಿ ಬೆಂಕಿ ಪಟ್ಟಣಗಳನ್ನು ಉಪಯೋಗಿಸಲು ಪ್ರಯತ್ನಿಸಬೇಡಿ ಎಂದರು. ಅನಿಲ ಸಿಲಿಂಡರ್‌ಗೆ ಬೆಂಕಿ ಹೊತ್ತಿ ಕೊಂಡರೆ ತಕ್ಷಣ ಒದ್ದೆಗೋಣಿ ಚೀಲದಿಂದ ಬೆಂಕಿ ಆರಿಸಲು ಪ್ರಯತ್ನಿಸಬೇಕು, ಎಲ್ಪಿಜಿ ಸ್ಟೌ ಬಳಕೆ ಮಾಡುವವರು ರಬ್ಬರ್ ಟ್ಯೂಬನ್ನು ವರ್ಷ ಮತ್ತೊಮ್ಮೆ ಕಡ್ಡಾಯವಾಗಿ ಬದಲಾಯಿಸಬೇಕು, ಅದು ಚೆನ್ನಾಗಿದೆ ಎಂದು ಕಂಡುಬಂದರೂ ಸಹ ಬದಲಾವಣೆ ಮಾಡುವುದರಿಂದ ಅನಾಹುತಗಳನ್ನು ತಪ್ಪಿಸಬಹುದೆಂದು ತಿಳಿಸಿದರು. ಈ ಸಂದರ್ಭದಲ್ಲಿ ಚಾಲಕ ಪ್ರೀತಮ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.