ಪ್ರಸ್ತುತ ಸಮುದ್ರ ಉತ್ಪನ್ನಗಳು ಜಿಲ್ಲೆಯಿಂದ ಪ್ರಮುಖವಾಗಿ ರಫ್ತಾಗುತ್ತಿವೆ. ಗುಣಮಟ್ಟವನ್ನು ಕಾಯ್ದುಕೊಂಡು ಬೆಳೆಸಿದ ಮಟ್ಟು ಗುಳ್ಳ ಮತ್ತು ಉಡುಪಿ ಮಲ್ಲಿಗೆ ಬೆಳೆಗಳನ್ನು ರಫ್ತು ಮಾಡುವ ಅವಕಾಶವಿದೆ. ಬೆಳೆಗಾರರು ಈ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ನಾಯಕ್ ಸೂಚಿಸಿದ್ದಾರೆ.
ಉಡುಪಿ: ಪ್ರಸ್ತುತ ಸಮುದ್ರ ಉತ್ಪನ್ನಗಳು ಜಿಲ್ಲೆಯಿಂದ ಪ್ರಮುಖವಾಗಿ ರಫ್ತಾಗುತ್ತಿವೆ. ಗುಣಮಟ್ಟವನ್ನು ಕಾಯ್ದುಕೊಂಡು ಬೆಳೆಸಿದ ಮಟ್ಟು ಗುಳ್ಳ ಮತ್ತು ಉಡುಪಿ ಮಲ್ಲಿಗೆ ಬೆಳೆಗಳನ್ನು ರಫ್ತು ಮಾಡುವ ಅವಕಾಶವಿದೆ. ಬೆಳೆಗಾರರು ಈ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ನಾಯಕ್ ಸೂಚಿಸಿದ್ದಾರೆ.ನಗರದ ದೊಡ್ಡಣಗುಡ್ಡೆ ರೈತ ಸೇವಾ ಕೇಂದ್ರದ ಆವರಣದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದ 2ನೇ ದಿನ ಮಂಗಳವಾರ, ಬೆಂಗಳೂರಿನ ಅಪೇಡಾ ಸಂಸ್ಥೆಯ ಸಹಯೋಗದಲ್ಲಿ ನಡೆದ, ಭೌಗೋಳಿಕ ಮಾನ್ಯತೆ ಪಡೆದಿರುವ ಉಡುಪಿ ಜಿಲ್ಲೆಯ ವಿಶಿಷ್ಟ ಬೆಳೆಗಳಾದ ಉಡುಪಿ ಮಲ್ಲಿಗೆ ಹಾಗೂ ಮಟ್ಟು ಗುಳ್ಳ ಬೆಳೆಗಳಿಗೆ ಇರುವ ರಫ್ತು ಅವಕಾಶಗಳ ಬಗ್ಗೆ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತವಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರು ಅಪೇಡಾದ ವ್ಯವಸ್ಥಾಪಕಿ ಮಧುಮತಿ ಅವರು ಉಡುಪಿ ಮಲ್ಲಿಗೆ ಹಾಗೂ ಮಟ್ಟುಗುಳ್ಳ ಬದನೆ ಬೆಳೆಗಳನ್ನು ರಫ್ತು ಮಾಡಲು ಇರುವ ಅವಕಾಶಗಳು ಹಾಗೂ ರಫ್ತು ಮಾಡಲು ಅಪೇಡಾ ಸಂಸ್ಥೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಇನ್ನೊಬ್ಬ ಸಂಪನ್ಮೂಲ ವ್ಯಕ್ತಿಯಾಗಿ ಅಪೇಡದ ಮಾರುಕಟ್ಟೆ ವಿಭಾಗದ ಅಧಿಕಾರಿ ಕಾರಂತ ಆಗಮಿಸಿದ್ದರು.ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್ ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯ ಉಡುಪಿ ಮಲ್ಲಿಗೆ ಮತ್ತು ಮಟ್ಟು ಗುಳ್ಳ ಬದನೆ ಬೆಳೆಗಳು ಜಿ.ಐ. ಮಾನ್ಯತೆ ಹೊಂದಿದ್ದು, ಈ ಬೆಳೆಗಳ ರೈತರು ಉತ್ಪಾದಕರ ಸಂಸ್ಥೆಗಳನ್ನು ಸ್ಥಾಪಿಸಿ ವ್ಯವಸ್ಥಿತವಾಗಿ ಬೆಳೆಗಳನ್ನು ಬೆಳೆಸುತ್ತಿದ್ದಾರೆ. ಮುಂದೆ ಸಂಸ್ಥೆಗಳ ಕಾರ್ಯವ್ಯಾಪ್ತಿ ವಿಸ್ತರಿಸಿ ಬೆಳೆಗಾರರು ಬೆಳೆದ ಉತ್ಪನ್ನಗಳನ್ನು ರಫ್ತು ಮಾಡುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ ಎಂದರು. ಶಿವಮೊಗ್ಗ ಕೃಷಿ - ತೋಟಗಾರಿಕಾ ವಿ.ವಿ.ಯ ನಿವೃತ್ತ ಉಪಕುಲಪತಿ ಎಂ. ಕೆ. ನಾಯಕ್, ಮಟ್ಟು ಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ಸುನಿಲ್ ಬಂಗೇರಾ ಹಾಗೂ ಬೆಳೆಗಾರರು ಇದ್ದರು. ಹೇಮಂತಕುಮಾರ್ ಎಲ್. ನಿರೂಪಿಸಿದರು. ಗುರುಪ್ರಸಾದ್ ವಂದಿಸಿದರು.