ಆರೋಗ್ಯ ಇಲಾಖೆಯ ಆ ವೈಜ್ಞಾನಿಕ ಆದೇಶ ಹಿಂಪಡೆಯುವ ಕುರಿತು ಹಕ್ಕೊತ್ತಾಯ ಮಾಡಿ ಶಿಗ್ಗಾಂವಿ-ಸವಣೂರ ಶಾಸಕ ಯಾಸೀರ ಅಹ್ಮದಖಾನ ಪಠಾಣ ಅವರಿಗೆ ರೈತ ಮುಖಂಡರು ಮನವಿ ಸಲ್ಲಿಸಿ ಆಗ್ರಹಿಸಿದರು.
ಶಿಗ್ಗಾಂವಿ: ಆರೋಗ್ಯ ಇಲಾಖೆಯ ಆ ವೈಜ್ಞಾನಿಕ ಆದೇಶ ಹಿಂಪಡೆಯುವ ಕುರಿತು ಹಕ್ಕೊತ್ತಾಯ ಮಾಡಿ ಶಿಗ್ಗಾಂವಿ-ಸವಣೂರ ಶಾಸಕ ಯಾಸೀರ ಅಹ್ಮದಖಾನ ಪಠಾಣ ಅವರಿಗೆ ರೈತ ಮುಖಂಡರು ಮನವಿ ಸಲ್ಲಿಸಿ ಆಗ್ರಹಿಸಿದರು.
ತಾಲೂಕಿನಲ್ಲಿ ಆರೋಗ್ಯ ಇಲಾಖೆ ಹೊಸ ಆದೇಶದ ಪ್ರಕಾರ ಪ್ರತಿ ತಾಲೂಕಿನಲ್ಲಿ ಇರುವ ಸಮುದಾಯ ಆರೋಗ್ಯ ಕೇಂದ್ರಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಾಗಿ ಪರಿವರ್ತನೆ ಮಾಡಿದ್ದಾರೆ. ಪ್ರತಿ ತಿಂಗಳಿನಲ್ಲಿ ೩೦ ಹೆರಿಗೆಗಳು ಇಲ್ಲದ ಕಾರಣ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಾಗಿ ಪರಿವರ್ತನೆ ಮಾಡಿದ್ದಾರೆ. ಇದು ಜನಸಾಮಾನ್ಯರ ಮೇಲೆ ಕೈಗೊಂಡ ಕರಾಳ ಆದೇಶವಾಗಿದೆ. ಆಸ್ಪತ್ರೆಗಳಲ್ಲಿ ಹೆರಿಗೆ ತಜ್ಞರು ನೇಮಕ ಇಲ್ಲ. ಅರವಳಿಕೆ ತಜ್ಞರು ಇರುವುದಿಲ್ಲ. ಒಳ್ಳೆಯ ಸೌಲಭ್ಯದಿಂದ ಕೂಡಿದ ಪ್ರಯೋಗಾಲಯಗಳು ಇಲ್ಲ. ಸೌಲಭ್ಯಗಳನ್ನು ನೀಡದೇ ಈ ರೀತಿ ಸರ್ಕಾರ ತೀರ್ಮಾನ ತೆಗೆದುಕೊಳ್ಳುವುದು ಮಹಾ ತಪ್ಪು.ಪ್ರತಿ ತಾಲೂಕು ಕೇಂದ್ರದಿಂದ ಸುಮಾರು ೩೦-೩೫ ಕಿಲೋಮೀಟರ್ ದೂರದಲ್ಲಿರುವ ಹಳ್ಳಿಗಳ ಜನಸಾಮಾನ್ಯರಿಗೆ ಹಾವು ಕಚ್ಚಿದರೆ, ವಿದ್ಯುತ್ ಸ್ಪರ್ಶ ಆದರೆ ಕಾಡು ಮೃಗಗಳಿಂದ ಹಾನಿಯಾದರೆ, ವಿಷಪ್ರಾಶನ ಆದರೆ. ಅಪಘಾತ ಸಂಭವಿಸಿದರೆ, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಯಾದರೆ, ತುರ್ತು ಸಮಸ್ಯೆಗಳು ಬಂದಾಗ. ಹೆರಿಗೆ ಸಮಸ್ಯೆಯಾದಾಗ ದೂರದಿಂದ ಬರುವುದು ಬಹಳ ಕಷ್ಟಕರವಾಗುತ್ತದೆ. ತುರ್ತು ಚಿಕಿತ್ಸೆ ಸಿಕ್ಕರೆ ಅವರ ಜೀವ ಉಳಿಸಬಹುದು ಇಂತಹ ಅವೈಜ್ಞಾನಿಕ ತೀರ್ಮಾನದ ಆದೇಶದಿಂದ ಜನರ ಜೀವಕ್ಕೆ ಅಪಾಯವಾಗುತ್ತದೆ. ಇದನ್ನು ಸರ್ಕಾರಕ್ಕೆ ಶಾಸಕರು ಮನವರಿಕೆ ಮಾಡಿಸಬೇಕು.ಪ್ರತಿ ಸಮುದಾಯ ಕೇಂದ್ರದಲ್ಲಿ ಡಯಾಲಿಸಿಸ್ ಸೌಲಭ್ಯ ಕಲ್ಪಿಸಬೇಕು. ತಜ್ಞ ವೈದ್ಯರನ್ನು ನೇಮಿಸಬೇಕು. ಅರವಳಿಕೆ ತಜ್ಞರನ್ನು ನೇಮಿಸಬೇಕು. ಪ್ರಯೋಗಾಲಯಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಆಸ್ಪತ್ರೆಯ ಮೇಲ್ವಿಚಾರಣೆಗೆ ಅನುಭವಿಕರ ಮಾರ್ಗದರ್ಶನ ಸಮಿತಿ ರಚನೆ ಆಗಬೇಕು. ತಾತ್ಕಾಲಿಕವಾಗಿ ನೇಮಕಗೊಂಡ ಸಿಬ್ಬಂದಿಗಳು ರೋಗಿಗಳ ಜೊತೆಗೆ ಸರಿಯಾಗಿ ನಡೆದುಕೊಳ್ಳುವಂತೆ ಸೂಚಿಸಬೇಕು. ಈ ಎಲ್ಲಾ ವಿಚಾರಗಳನ್ನು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಅಲ್ಲಿಯ ವಸ್ತು ಸ್ಥಿತಿಯನ್ನು ಸರ್ಕಾರಕ್ಕೆ ವಿವರಿಸಿ ತಕ್ಷಣದಿಂದ ಈ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯ ಮಾಡಬೇಕೆಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಮುತ್ತಪ್ಪ ಗುಡಗೇರಿ, ಮಾಲತೇಶ ಬಾರಕೇರ, ನಾಗಪ್ಪ ಕೊಟದ, ಪಂಚಯ್ಯ ಹಿರೇಮಠ,ಹವ್ಯಾಕ ಕಂಬಾರ, ನಾಗರಾಜ ಕುಂದಗೋಳ ಸೇರಿದಂತೆ ಹಲವಾರು ರೈತರು ಇದ್ದರು.