ನಂದಗುಡಿ-ಸೂಲಿಬೆಲೆ ಟೌನ್‌ಶಿಪ್‌ಗೆ ವಿರೋಧ

| Published : Nov 14 2024, 12:52 AM IST

ನಂದಗುಡಿ-ಸೂಲಿಬೆಲೆ ಟೌನ್‌ಶಿಪ್‌ಗೆ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಕೋಟೆ: ತಾಲೂಕಿನ ನಂದಗುಡಿ ಹಾಗೂ ಸೂಲಿಬೆಲೆ ಹೋಬಳಿಯ 36 ಗ್ರಾಮಗಳ 18,500 ಸಾವಿರ ಎಕರೆ ಪ್ರದೇಶದಲ್ಲಿ ಟೌನ್ ಶಿಪ್ ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನೀತಿಯನ್ನು ವಿರೊಧಿಸುತ್ತೇನೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ಹೊಸಕೋಟೆ: ತಾಲೂಕಿನ ನಂದಗುಡಿ ಹಾಗೂ ಸೂಲಿಬೆಲೆ ಹೋಬಳಿಯ 36 ಗ್ರಾಮಗಳ 18,500 ಸಾವಿರ ಎಕರೆ ಪ್ರದೇಶದಲ್ಲಿ ಟೌನ್ ಶಿಪ್ ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನೀತಿಯನ್ನು ವಿರೊಧಿಸುತ್ತೇನೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂದಗುಡಿ ಹೋಬಳಿಯಲ್ಲಿ 2005 ಹಾಗೂ 2006ನೇ ಇಸವಿಯಲ್ಲಿ ಸ್ಪೆಷಲ್ ಎಕನಾಮಿಕ್ ಜೋನ್ ನಿರ್ಮಾಣ ಮಾಡಲು ಹೊರಟಿದ್ದ ನಮ್ಮದೇ ಸರ್ಕಾರದ ವಿರುದ್ಧ ಸದನದಲ್ಲಿ ವಿರೋಧ ವ್ಯಕ್ತ ಪಡಿಸಿ ರೈತರ ಭೂಮಿಯನ್ನು ಉಳಿಸುವ ಕಾರ್ಯ ಮಾಡಿದ್ದೆ. ಸ್ಥಳೀಯ ರೈತರೊಂದಿಗೆ ಸೇರಿಕೊಂಡು ಬೃಹತ್ ಪ್ರತಿಭಟನೆ ನಡೆಸಿ ವಿರೋಧಿಸಿದ್ದೆವು. ರೈತರ ಹಾಗೂ ಜನಪ್ರತಿನಿಧಿಗಳ ಪ್ರತಿಭಟನೆಗೆ ಬೆಚ್ಚಿದ ಆಗಿನ ಸರ್ಕಾರ ಯೋಜನೆಯನ್ನು ಕೈಬಿಟ್ಟಿತ್ತು.

ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಪುನಃ ಬಿಡದಿ, ಸೋಲೂರು ಹಾಗೂ ನಂದಗುಡಿಯಲ್ಲಿ ಟೌನ್‌ಶಿಪ್ ನಿರ್ಮಿಸಲು ಹೊರಟಿರುವುದು ಖಂಡನೀಯ ಎಂದರು.

ಟೌನ್‌ಶಿಫ್ ಮಾಡಲು ಉದ್ದೇಶಿಸಿರುವ ಪ್ರದೇಶಗಳ ಜನರು ಕೃಷಿ, ಹೈನುಗಾರಿಕೆ, ಕೂಲಿಯಿನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದು, ಬೆಂಗಳೂರಿಗೆ ಅತಿ ಹೆಚ್ಚಿನ ತರಕಾರಿ ಸರಬರಾಜು ಆಗುತ್ತಿರುವುದು ಕೂಡ ನಂದಗುಡಿ ಹೋಬಳಿಯಿಂದಲೆ. ರಿಯಲ್ ಎಸ್ಟೇಟ್ ಮಾಫಿಯಾ ಮಾತು ಕೇಳಿಕೊಂಡು ಇಂತಹ ಸಂಪದ್ಭರಿತ ಕೃಷಿ ಜಮೀನನ್ನು ಸ್ವಾಧೀನಪಡಿಸಿಕೊಂಡು ಟೌನ್‌ಶಿಪ್ ಮಾಡಲು ಹೊರಟಿರುವ ನಡೆ ಸರಿಯಲ್ಲ. ನಂದಗುಡಿ ಮತ್ತು ಸೂಲಿಬೆಲೆ ಹೋಬಳಿಯಲ್ಲಿ ಸಾವಿರಾರು ಎಕರೆ ಅರಣ್ಯ ಪ್ರದೇಶ ಇರುವುದರಿಂದ ಹೆಚ್ಚಿನ ರೈತರು ಸಣ್ಣ ಹಿಡುವಳಿದಾರರಾಗಿದ್ದು, 1ರಿಂದ 3 ಎಕರೆ ಜಮೀನನ್ನು ಮಾತ್ರ ಹೊಂದಿದ್ದಾರೆ. ಈ ಜಮೀನು ಬಿಟ್ಟರೆ ಬೇರೆ ಜಮೀನುಗಳಿಲ್ಲ. ಇದನ್ನು ಸ್ವಾಧೀನಪಡಿಸಿಕೊಂಡಲ್ಲಿ ರೈತ ಕುಟುಂಬಗಳು ಬೀದಿಗೆ ಬೀಳಬೇಕಾಗುತ್ತದೆ ಎಂದು ಎಚ್ಚರಿಸಿದರು.

8.5 ಗುಂಟೆ ಪರಿಹಾರ: ಈ ಪ್ರದೇಶದಲ್ಲಿ ಜಮೀನಿನ ಬೆಲೆ ಕೋಟ್ಯಂತರ ರು.ಗಳಿದ್ದು, ಅಭಿವೃದ್ದಿಪಡಿಸಿ 8.5 ಗುಂಟೆ ಜಮೀನು ನೀಡುತ್ತೇವೆಂದು ಹೇಳುತ್ತಿರುವುದು ಅವೈಜ್ಞಾನಿಕ. ಇದರಿಂದ ರೈತ ಕುಟುಂಬಗಳು ದಿಕ್ಕಾಪಾಲಾಗುವಂತಹ ಪರಿಸ್ಥಿತಿ ಉಂಟಾಗಲಿದೆ. ಸಂಸಾರ ನಡೆಸಲು ವ್ಯವಸಾಯವನ್ನೇ ನಂಬಿಕೊಂಡಿದ್ದ ಸಾವಿರಾರು ಕುಟುಂಬಗಳು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದರು.

ಬಾಕ್ಸ್..............

ಅಂದು ಪ್ರತಿಭಟಿಸಿದವರಿಂದಲೇ ಲೂಟಿಗೆ ಯತ್ನ

ಈ ಹಿಂದೆ 2005-06ರಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ನಂದಗುಡಿ ಹೋಬಳಿಯನ್ನು ಎಸ್‌ಇಝಡ್ ಮಾಡಲು ಹೊರಟಾಗ ಅದನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಈಗಿನ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿ.ಕೆ ಶಿವಕುಮಾರ್, ಕಂದಾಯ ಸಚಿವರಾದ ಕೃಷ್ಣಬೈರೇಗೌಡ, ಹೆಚ್.ಕೆ.ಪಾಟೀಲ್ ಪಾಲ್ಗೊಂಡು ರೈತರ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳಬಾರದೆಂದು ಪ್ರತಿಭಟನೆ ನಡೆಸಿದ್ದರು. ಆದರೆ ಇಂದು ಕಾಂಗ್ರೆಸ್ ಸರ್ಕಾರವೇ ಲೂಟಿ ಮಾಡುವ ಉದ್ದೇಶದಿಂದ ರೈತರಿಗೆ ಮಣ್ಣೆರಚಿ ಅವರ ಜಮೀನನ್ನು ಕಿತ್ತುಕೊಂಡು ಅವರನ್ನು ಬೀದಿಗೆ ತಳ್ಳುವ ಹುನ್ನಾರ ನಡೆಸಿದೆ. ಆದ್ದರಿಂದ ತಲೆ- ತಲಾಂತರದಿಂದ ಕೃಷಿಯಿಂದಲೇ ಕುಟುಂಬ ನಿರ್ವಹಿಸುತ್ತಿರುವ ರೈತ ಕುಟುಂಬಗಳ ಒಕ್ಕಲೆಬ್ಬಿಸುತ್ತಿರುವುದನ್ನು ನಾವು ವಿರೋಧಿಸುತ್ತೇವೆ. ಈಗಿನ ಕಾಂಗ್ರೆಸ್‌ ಸರ್ಕಾರ ಪುನಃ ಟೌನ್‌ಶಿಪ್ ಮಾಡಲು ಮುಂದಾಗಿದ್ದು, ಈಗಾಗಲೇ ರೈತರು ಹೋರಾಟ ಮಾಡುತ್ತಿದ್ದು, ರೈತರಿಗೆ ಬೆಂಗಾವಲಾಗಿ ನಿಂತು ರೈತರ ಹಿತಾಸಕ್ತಿಯನ್ನು ಕಾಪಾಡಲು ಹಾಗೂ ಅವರ ಭೂಮಿಯನ್ನು ಉಳಿಸಲು ಬದ್ದರಾಗಿದ್ದೇವೆ. ಪಕ್ಷಾತೀತವಾಗಿ, ಜಾತ್ಯತೀತವಾಗಿ, ಸಾಮಾಜಿಕ ಸಂಸ್ಥೆಗಳು, ಸಾರ್ವಜನಿಕರು, ರೈತರೊಂದಿಗೆ ಹೋರಾಟ ನಡೆಸುತ್ತೇವೆ. ಸರ್ಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ಫೋಟೋ: 13 ಹೆಚ್‌ಎಸ್‌ಕೆ 4

ಹೊಸಕೋಟೆ ತಾಲೂಕಿನ ನಂದಗುಡಿ-ಸೂಲಿಬೆಲೆ ಟೌನ್‌ಶಿಪ್ ವಿರೋಧಿಸಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಸುದ್ದಿಗಾರರೊಂದಿಗೆ ಮಾತನಾಡಿದರು.