ಹುಬ್ಬಳ್ಳಿ:

ಕಾವೇರಿ ತಂತ್ರಾಂಶ ಮೂಲಕ ಸಬ್‌ ರಿಜಿಸ್ಟ್ರಾರ್‌ ಕಚೇರಿಯ ಪೇಪರ್‌ ಲೆಸ್‌ ನೋಂದಣಿ ಜಾರಿಗೊಳಿಸಿರುವುದನ್ನು ಖಂಡಿಸಿ ಶನಿವಾರ ಧಾರವಾಡ ಜಿಲ್ಲಾ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ (ದಸ್ತು) ಪತ್ರ ಬರಹಗಾರರ ಟ್ರಸ್ಟ್‌ನ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಇಲ್ಲಿಯ ಅಂಬೇಡ್ಕರ್‌ ವೃತ್ತದಿಂದ ಮಿನಿ ವಿಧಾನಸೌಧದ ವರೆಗೆ ಕಪ್ಪು ಬಟ್ಟೆಕಟ್ಟಿಕೊಂಡು ಪ್ರತಿಭಟನಾ ರ‍್ಯಾಲಿ ನಡೆಸಿದ ಪ್ರತಿಭಟನಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.

ಪೇಪರ್‌ ಲೆಸ್‌ ನೋಂದಣಿಯಿಂದ ಸಾರ್ವಜನಿಕರ ಆಸ್ತಿ ದಾಖಲಾತಿಗೆ ಭದ್ರತೆ ಇಲ್ಲದಂತಾಗಲಿದ್ದು, ಆಸ್ತಿ ನೋಂದಣಿ ಆಗಿರುವ ಬಗ್ಗೆ ಭೌತಿಕ ಪತ್ರಗಳ ಸಿಗದೇ ಖರೀದಿದಾರರಿಗೆ ಯಾವುದೇ ನಿಖರ ದಾಖಲೆಗಳು ಸಿಗುವುದಿಲ್ಲ. ಪರೋಕ್ಷವಾಗಿ ಭೂ ಮಾಫಿಯಾಕ್ಕೆ ಸರ್ಕಾರವೇ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಕಿಡಿಕಾರಿದರು. ಆಸ್ತಿ ಮೂಲ ಪತ್ರಗಳು ಸಿಗದ ಹಿನ್ನೆಲೆಯಲ್ಲಿ ಅವರ ಸ್ವತ್ತಿನ ಪತ್ರಗಳನ್ನು ಬ್ಯಾಂಕ್‌ನಲ್ಲಿ ಅಡಾವೆ ಇಟ್ಟು ಸಾಲ ಸೌಲಭ್ಯ ಪಡೆಯಲು ಸಹ ಅನೂಕೂಲವಾಗಲಿದೆ, ಅಡಮಾನ ಪತ್ರ ಕಲಂನ ಅಸ್ತಿತ್ವಕ್ಕೆ ಪೇಪರ್‌ ಲೆಸ್‌ ಡಿಜಿಟಲ್‌ ನೋಂದಣಿ ವ್ಯವಸ್ಥೆ ವಿರುದ್ಧವಾಗಿದೆ. ಹಾಗಾಗಿ ಸರ್ಕಾರ ಈ ಕೂಡಲೇ ಪೇಪರ್‌ ಲೆಸ್‌ ತಂತ್ರಾಂಶ ಕೈಬಿಡಬೇಕು. ಆ ಮೂಲಕ ದಸ್ತಾವೇಜು ಬರಹಗಾರರ ಹಿತರಕ್ಷಣೆ ಮತ್ತು ಉದ್ಯೋಗ ಖಾತ್ರಿ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಟ್ರಸ್ಟ್‌ನ ಅಧ್ಯಕ್ಷ ಶಾಂತರಾಜ ಪೋಳ, ವಿನೋದಗೌಡ ಪಾಟೀಲ, ವಿಜಯ ಕುಲಕರ್ಣಿ, ಜಗದೀಶ ಚಿಕ್ಕಮಠ, ವಿನೋದಗೌಡ ಪಾಟೀಲ, ಶಂಕರ ಹುಟಗಿ, ಗುರುರಾಜ ಕೊಟಬಾಗಿ ಸೇರಿ ಹಲವರಿದ್ದರು.