ಮೋದಿ ಮತ್ತೂಮ್ಮೆ ಪ್ರಧಾನಿ ಮಾಡುವುದೇ ನಮ್ಮ ಗುರಿ: ಬಿ.ವೈ.ರಾಘವೇಂದ್ರ

| Published : Apr 04 2024, 01:03 AM IST

ಮೋದಿ ಮತ್ತೂಮ್ಮೆ ಪ್ರಧಾನಿ ಮಾಡುವುದೇ ನಮ್ಮ ಗುರಿ: ಬಿ.ವೈ.ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಶರಾವತಿ ಹಿನ್ನೀರಿನ ತುಮರಿ ಗೋಪಾಲ ಗೌಡ ರಂಗಮಂದಿರದಲ್ಲಿ ಬುಧವಾರ ಬಿಜೆಪಿ ಮಹಿಳಾ ಸಮಾವೇಶ ನಡೆಯಿತು. ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ ಮತ್ತೆ ಮೋದಿ ಪ್ರಧಾನಿ ಮಾಡುವ ಗುರಿಯೊಟ್ಟಿಗೆ ಚುನಾವಣೆಯಲ್ಲಿ ಶ್ರಮಿಸಲು ಕಾರ್ಯಕರ್ತರಿಗೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಬ್ಯಾಕೋಡು

ಕೋವಿಡ್ ಸಂಧರ್ಭದಲ್ಲಿ ದೇಶದ ಜನರ ರಕ್ಷಣೆಗೆ ನಿಂತ ನರೇಂದ್ರ ಮೋದಿಯವರನ್ನು ಮತ್ತೂಮ್ಮೆ ಪ್ರಧಾನಿ ಮಾಡುವುದೇ ನಮ್ಮ ಗುರಿಯಾಗಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಕರೆ ನೀಡಿದರು.

ಶರಾವತಿ ಹಿನ್ನೀರಿನ ತುಮರಿ ಗೋಪಾಲಗೌಡ ರಂಗಮಂದಿರದಲ್ಲಿ ಬುಧವಾರ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗಿಂತ ಬಿಜೆಪಿ ಜನಪ್ರಿಯ ಯೋಜನೆಗಳು ಹೆಚ್ಚು ಜನಪರವಾಗಿದ್ದು, ದೇಶದ ಆರ್ಥಿಕ ಭದ್ರತೆಗೆ ಬಗ್ಗೆ ಜನರು ಯೋಚಿಸಿ ಮತದಾನ ಮಾಡಿ ಎಂದು ಸಲಹೆ ನೀಡಿದರು.

ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಕಾಂಗ್ರೆಸ್ ಹಲವು ವರ್ಷಗಳಿಂದ ಆಡಳಿತ ಮಾಡಿದ್ದರು, ಕಾಗೋಡು ತಿಮ್ಮಪ್ಪನವರಿಗೆ ಈ ಭಾಗದ ಹಲ್ಕೆ - ಮುಪ್ಪಾನೆ ಬಳಿ ಚಿಕ್ಕ ಲಾಂಚ್ ಸೇವೆ ಒದಗಿಸಲು ಏಕೆ ಸಾಧ್ಯವಾಗಲಿಲ್ಲ.

ಭಾರತೀಯ ಜನತಾ ಪಾರ್ಟಿ ದೇಶದಲ್ಲಿ ಸರ್ವರ ಏಳಿಗೆಗೆ ಶ್ರಮಿಸುವ ಪಕ್ಷವಾಗಿದ್ದು ಸೀಮೀತ ಜಾತಿಯ ಹೆಸರಿನಲ್ಲಿ ಮತ ಕೆಳಲು ಬರುವವರಿಗೆ ಮತ ನೀಡಬೇಡಿ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ರಾಜನಂದಿನಿ ಮಾತನಾಡಿ, ಶರಾವತಿ ಹಿನ್ನೀರಿಗೆ ಬಹು ಕೋಟಿ ರು. ವೆಚ್ಚದಲ್ಲಿ ಬೃಹತ್ ಸೇತುವೆ ಬಿಜೆಪಿ ಕೊಡುಗೆಯಾಗಿದ್ದು, ಇದಕ್ಕೆ ಅಂದಿನ ಕೇಂದ್ರ ಸಚಿವ ನಿತಿನ್ ಗಡ್ಕರಿ, ಸಂಸದ ಬಿ.ವೈ.ರಾಘವೇಂದ್ರ, ಯಡಿಯೂರಪ್ಪ ಅವರ ಶ್ರಮವಿದೆ. ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಆಯುಷ್ಮಾನ್. ಯೋಜನೆಯಡಿ ದೇಶದಲ್ಲಿ ಹೆಚ್ಚಿನ ಪ್ರಮಾಣ ದಲ್ಲಿ ಜನರು ಫಲಾನುಭವಿಗಳಾಗಿ ಕೇಂದ್ರ ಸರ್ಕಾರದ ಯೋಜನೆಯನ್ನು ಸದುಪಯೋಗ ಪಡೆದುಕೊಂಡು ಇಂದು ಆರೋಗ್ಯ ದಲ್ಲಿ ಸುಧಾರಣೆ ಕಂಡಿದ್ದಾರೆ. ಎಂದರೆ, ಅದಕ್ಕೆ ನರೇಂದ್ರ ಮೋದಿಯವರು ಸಾಕ್ಷಿ , ಈ ಭಾಗದ ಜನರು ಇವರ ಈ ಕೊಡುಗೆ ಯನ್ನು ಪರಿಗಣಿಸಿ ಈ ಭಾರಿ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಬಿಜೆಪಿ ಮುಖಂಡ ಪ್ರಸನ್ನ ಕೆರಕೈ ಮಾತನಾಡಿ, ಸಿಗಂದೂರು ಸೇತುವೆ, ನೆಟ್ವರ್ಕ್, ಸೇರಿದಂತೆ, ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಯಡಿಯೂರಪ್ಪನವರ ಕೊಡುಗೆ ಅಪಾರ. ಶರಾವತಿ ನದಿಯಲ್ಲಿ ಗಣನೀಯವಾಗಿ ನೀರು ಕಡಿಮೆಯಾಗು ತ್ತಿದ್ದು, ಇನ್ನೂ ನಾಲ್ಕು ಐದು ಮೀಟರ್ ಕಡಿಮೆ ಆದರೆ ಲಾಂಚ್ ಅನ್ನು ಸ್ಥಗಿತಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದರಿಂದ ದ್ವೀಪದ ಜನರಿಗೆ ತಾಲೂಕು ಕೇಂದ್ರವಾದ ಸಾಗರಕ್ಕೆ ಹೋಗಲು ಹಾಗೂ ಒಂದು ದಡದಿಂದ ಇನ್ನೊಂದು ದಡಕ್ಕೆ ದಾಟುವ ಸಲುವಾಗಿ ಈ ಹಿಂದೆ ಪ್ರವಾಸಿಗರು ಮತ್ತು ಸ್ಥಳೀಯ ನಾಗರಿಕರ ನಡುವೆ ದಿನನಿತ್ಯ ನಡೆಯುವ ಗದ್ದಲ ಗುದ್ದಾಟ, ಇವೆಲ್ಲ ಸಮಸ್ಯೆಗಳಿಗೆ ಸೇತುವೆ ಈ ಉದ್ಘಾಟನೆಯಾದ ಬಳಿಕ ವಿರಾಮ ಬೀಳಲಿದೆ ಎಂದರು.

ಸಿಗಂದೂರು ಸೇತುವೆ ಮೂಲಕ ಈ ಭಾಗದಲ್ಲಿ ಹೊಸ ಉದ್ಯೋಗ, ಉದ್ಯಮಗಳ ಸೃಷ್ಟಿ ಸಾಧ್ಯವಾಗಿದ್ದು ಈ ಭಾಗದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಭಾರಿ ಕೆ.ಎಸ್‌.ಪ್ರಶಾಂತ್, ಬಿಜೆಪಿಯ ತಾಲೂಕು ಉಪಾಧ್ಯಕ್ಷ ನಾಗರಾಜ ಬೊಬ್ಬಿಗೆ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಸುವರ್ಣ ಟೀಕಪ್ಪ, ಕುದರೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಸರಸ್ವತಿ. ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಗಾಯತ್ರಿ ಮಲ್ಲಪ್ಪ ಮತ್ತಿತರರು ಹಾಜರಿದ್ದರು.ಸಿಗಂದೂರು ಚೌಡೇಶ್ವರಿಗೆ ವಿಶೇಷ ಪೂಜೆ

ಕಾರ್ಯಕ್ರಮಕ್ಕೂ ಮುನ್ನ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂಸದ ಬಿ.ವೈ.ರಾಘವೇಂದ್ರ ವಿಶೇಷ ಪೂಜೆ ಸಲ್ಲಿಸಿದರು. ಕಾರ್ಯದರ್ಶಿ ರವಿಕುಮಾರ್ ಎಚ್.ಆರ್. ಹಾಗೂ ಧರ್ಮಾಧಿಕಾರಿ ಎಸ್.ರಾಮಪ್ಪ ಅವರ ಆಶೀರ್ವಾದ ಪಡೆದರು.