ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷ ತೊರೆದು ಸುಮಾರು 200ಕ್ಕೂ ಅಧಿಕ ಮುಖಂಡರು, ಕಾರ್ಯಕರ್ತರು ಜೆಡಿಎಸ್‌ ಸೇರ್ಪಡೆಗೊಂಡಿದ್ದಾರೆ.

ಬೆಂಗಳೂರಿನ ಜೆಡಿಎಸ್‌ ಕೇಂದ್ರ ಕಚೇರಿಯ ಜೆ.ಪಿ ಭವನದಲ್ಲಿ ಬುಧವಾರ ನಡೆದ ಜೆಡಿಎಸ್‌ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.

ಜೆಡಿಎಸ್‌ ಮುಖಂಡರು ಹಾಗೂ ವಿಧಾನ ಪರಿಷತ್ತು ಸದಸ್ಯ ಎಸ್‌.ಎಲ್‌. ಭೋಜೇಗೌಡ ನೇತೃತ್ವದಲ್ಲಿ ಹಾಗೂ 2023ರ ವಿಧಾನಸಭಾ ಚುನಾವಣೆಯ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಪ್ರಮುಖ ಮುಖಂಡ ವಿಜಯ್‌ಕುಮಾರ್‌ ಅವರ ನಾಯಕತ್ವದಲ್ಲಿ ಈ ಪಕ್ಷಾಂತರ ಪ್ರಕ್ರಿಯೆ ನಡೆದಿದೆ.

ಇವರೊಂದಿಗೆ ಹಿಂದುತ್ವವಾದಿ ಹಾಗೂ ಭಜರಂಗದಳದ ಮಾಜಿ ಜಿಲ್ಲಾ ಸಂಚಾಲಕ ತುಡುಕೂರು ಮಂಜು, ಯೂತ್‌ ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷ ಮಂಜು ಸೇರಿದಂತೆ ಬಿಜೆಪಿ ಯುವ ಮೋರ್ಚಾ ಮಂಡಲದ ಪ್ರಮುಖ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್-ಬಿಜೆಪಿಯ 200ಕ್ಕೂ ಹೆಚ್ಚು ಸಕ್ರಿಯ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.


ಎಚ್ಡಿಕೆ ರೈತಪರ ಕಾಳಜಿ:

ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಮುಖಂಡ ವಿಜಯ್‌ಕುಮಾರ್‌, ಕೇಂದ್ರ ಸಚಿವ ಎಚ್‌.ಡಿ,ಕುಮಾರ್‌ ಸ್ವಾಮಿ ಅವರ ರೈತ ಪರ ಕಾಳಜಿ ಹಾಗೂ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರ್‌ ಸ್ವಾಮಿ ಅವರ ಸಂಘಟನಾ ಶೈಲಿಯ ಪ್ರಭಾವದಿಂದ ಜೆಡಿಎಸ್‌ ಪಕ್ಷ ಸೇರ್ಪಡೆಯಾಗಿದ್ದೇವೆ. ಜೆಡಿಎಸ್‌ ಪಕ್ಷದಲ್ಲಿ ಜನರ ಸೇವೆ ಮಾಡುವುದಕ್ಕೆ ಹೆಚ್ಚಿನ ಅವಕಾಶ ಇವೆ. ಜನ ಸೇವೆ ಮಾಡುವುದಕ್ಕೆ ಇದೊಂದು ಉತ್ತಮ ವೇದಿಕೆ ಎಂಬ ಕಾರಣಕ್ಕೆ ಜೆಡಿಎಸ್‌ ಸೇರ್ಪಡೆಯಾಗುತ್ತಿದ್ದೇವೆ ಎಂದು ಹೇಳಿದರು.

ಇತ್ತೀಚಿಗೆ ಜೆಡಿಎಸ್‌ನ ಪಕ್ಷದಿಂದ ಕೈಗೊಂಡ ಬಿಡದಿ ಹೋರಾಟ ಹಾಗೂ ನೈಸ್‌ ಕುರಿತ ನಿಲುವಿಗೆ ಕೈ ಜೋಡಿಸಬೇಕೆಂದು ನೂರಾರು ಕಾರ್ಯಕರ್ತರು ಅಪೇಕ್ಷೆ ಪಟ್ಟ ಹಿನ್ನೆಲೆಯಲ್ಲಿ ಬೆಂಬಲಿಗರೊಂದಿಗೆ ಜೆಡಿಎಸ್‌ ಕುಟುಂಬ ಸೇರಿದ್ದೇವೆ. ಮುಂದಿನ ಚುನಾವಣೆಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರೈತ ಪರ ನಾಯಕರಾದ ಎಚ್‌.ಡಿ.ಕುಮಾರಸ್ವಾಮಿ ಅವರ ಕೈ ಬಲಪಡಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಿ.ಜೆ. ಸುರೇಶ್, ಡಿ.ಬಿ. ಅಶೋಕ್ ಗೌಡ, ಬಿ.ಎಸ್. ಅಜಿತ್ ಗೌಡ, ಜಿ.ಯು. ಚಂದ್ರೇಗೌಡ, ಝುಕಾರಿಯಾ ಜಾಕೀರ್, ಎಚ್.ಎಸ್. ಮಂಜಪ್ಪ, ರಾಜೇಂದ್ರ ಕಣಚೂರು, ಎಂ.ಕೆ.ರವಿ, ಚಂದ್ರು ನಿಡುವಾಳ, ಜ್ಯೋತಿ ವಿರಲ್, ಸಂಪತ್ ಪಟ್ಟದೂರು, ಎಂ.ಎಸ್.ಸುರೇಶ್, ಎಚ್.ಎಂ. ಮಂಜುನಾಥ್, ಸತೀಶ್ ಮರ್ಕಲ್, ರೆಹಮಾನ್, ಪ್ರಸನ್ನ, ಕೆ.ಪಿ. ಭಾರತಿ, ರವಿ ಹೊಸ್ಮಾರೆ, ಲೋಹಿತ್, ಧರ್ಮೇಶ್, ಸಂದೇಶ್, ಪ್ರಹ್ಲಾದ್, ಪ್ರವೀಣ್, ರುದ್ರೇಗೌಡ, ಜಗನ್ನಾಥ್, ಸಂತೋಷ್ ಇನಾರಿ, ಸತೀಶ್ ಕೋಟೆಬೇಳುರು ಸೇರಿದಂತೆ ಹಲವು ಕಾರ್ಯಕರ್ತರು ಸೇರ್ಪಡೆಯಾದರು ಎಂದು ತಿಳಿಸಿದರು.

ಜೆಡಿಎಸ್‌ ಬಲ ಹೆಚ್ಚಳ:

ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರ ಈ ದಿಢೀರ್ ವಲಸೆಯು ಮಲೆನಾಡು ಭಾಗದ ಕಾಂಗ್ರೆಸ್ ಮತ್ತು ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದ್ದು, ಜೆಡಿಎಸ್ ಪಕ್ಷದ ಸಂಘಟನಾ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.