ಕನ್ನಡಪ್ರಭ ವಾರ್ತೆ ಇಳಕಲ್ಲ
ತನ್ನ ಸುಮಧುರ ಕಂಠದಿಂದ ಇಡೀ ಜಗತ್ತಿನ ಜನರ ಹೃದಯ ಸಾಮ್ರಾಟನಾದ ಏಕೈಕ ಹಾಡುಗಾರ ಪಿ.ಬಿ. ಶ್ರೀನಿವಾಸರು ಎಂದು ಇಳಕಲ್ಲ ವಿಜಯ ಮಹಾಂತೇಶ್ವರ ಶ್ರೀಮಠದ ಗುರುಮಹಾಂತ ಶ್ರೀಗಳು ನುಡಿದರು.ನಗರದ ವಿಜಯ ಮಹಾಂತೇಶ್ವರ ಅನುಭವ ಮಂಟಪದಲ್ಲಿ ರವೀಂದ್ರ ಅಂಬಣ್ಣಪ್ಪ ದೇವಗಿರಕರ ಪುಣೆ (ಸಾ.ಇಳಕಲ್ಲ) ಹಾಗೂ ಇಳಕಲ್ಲಿನ ಸ್ನೇಹರಂಗ ಇವರ ಸಹಯೋಗದಲ್ಲಿ ಮಾಧುರ್ಯ ಸಾರ್ವಭೌಮ ಡಾ.ಪಿ.ಬಿ.ಶ್ರೀನಿವಾಸರ ೧೩ನೇ ಸ್ವರಸ್ಮರಣೆ ನಿಮಿತ್ತ ಗೌರವ ಸಮರ್ಪಣೆ ಹಾಗೂ ಸಮಾಜ ಸೇವಕರಿಗೆ ಗೌರವ ಸತ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಆಂಧ್ರಪ್ರದೇಶದಲ್ಲಿ ಹುಟ್ಟಿದ ಪಿ.ಬಿ. ಶ್ರೀನಿವಾಸರು ತಮಿಳುನಾಡಿನಲ್ಲಿ ಬೆಳೆದರೂ ಕನ್ನಡ ಹಾಡುಗಳಿಂದ ಜಗತ್ಪ್ರಸಿದ್ಧಿಯಾದರು. ಪಿ.ಬಿ.ಶ್ರೀನಿವಾಸರು ಏಳು ಭಾಷೆಗಳ ಸಿನಿಮಾಗಳ ಹಾಡು ಹಾಡಿದ್ದಾರೆ. ಪಿ.ಬಿ.ಶ್ರೀನಿವಾಸರ ಹಾಡುಗಳನ್ನು ಜನರನ್ನು ಮಂತ್ರ ಮುಗ್ಧಗೊಳಿಸುತ್ತಿದ್ದವು. ಅವರ ದ್ವನಿಯಲ್ಲಿ ಅಂಥ ಆಕರ್ಷಣೆ ಇತ್ತು. ರವಿಂದ್ರ ದೇವಗಿರಕರ ಅವರು ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ನಿಮ್ಮೆಲ್ಲರ ಭಾಗ್ಯ ಎಂದರು.
ಮುಖ್ಯ ಅತಿಥಿ ಬೆಂಗಳೂರಿನ ದೂರದರ್ಶನ ಚಂದನ ಟಿವಿಯ ಮಧುರ ಮಧುರವಿ ಮಂಜುಳಗಾನ ಕಾರ್ಯಕ್ರಮದ ನಿರೂಪಕರಾದ ಸಾರ್ಥಹಳ್ಳಿ ನಾರಾಯಣಸ್ವಾಮಿ ಅವರು ಗೌರವ ಸತ್ಕಾರ ಸ್ವೀಕರಿಸಿ ಮಾತನಾಡಿ, ಪಿ.ಬಿ.ಶ್ರಿನಿವಾಸರು ಹುಟ್ಟಿದಾಗ ಮೂಗರಾಗಿದ್ದರು. ಮೂರು ವರ್ಷದ ನಂತರ ಅವರ ತಾಯಿ ಮಗನನ್ನು ಕರೆದುಕೊಂಡು ದೇವರ ಮುಂದೆ ಎತ್ತಿ ಹಿಡಿದು ಪ್ರಾರ್ಥಿಸಿದಾಗ ಪಿ.ಬಿ.ಶ್ರೀನಿವಾಸರಿಗೆ ಧ್ವನಿ ಬಂತು. ಅಂತಹ ಮಹಾಮಹಿಮನ ಪುಣ್ಯ ಸ್ಮರಣೆಯನ್ನು ಬೆಂಗಳೂರಿನವರು, ಚಲನಚಿತ್ರದವರು ಅವರ ಕುಟುಂಬದವರು ಮಾಡಬೇಕು. ಆದರೆ ಅವರ ಕಟ್ಟಾ ಅಭಿಮಾನಿ ರವೀಂದ್ರ ದೇವಗಿರಕರ ಇಂಥ ದೊಡ್ಡ ಕಾರ್ಯಕ್ರಮ ಮಾಡುತ್ತಿರುವುದು ನೋಡಿ ಅತೀವ ಸಂತಸವಾಗಿದೆ ಎಂದರು.ಇದೇ ವೇಳೆಯಲ್ಲಿ ರವೀಂದ್ರ ದೇವಗಿರಕರ ಅವರು ಸಾರ್ಥಹಳ್ಳಿ ನಾರಾಯಣಸ್ವಾಮಿ ಮತ್ತು ಸಮಾಜ ಸೇವಕ ಸಿದ್ದಪ್ಪ ಬಮ್ಮಸಾಗರ ಅವರನ್ನು ಸತ್ಕರಿಸಿ ಗೌರವಿಸಿದರು. ನಗರದ ಹಿರಿಯ ಕಲಾವಿದೆ ಸುಗುಣಾತಾಯಿ ಸಪ್ಪಂಡಿ ಅವರಿಗೆ ₹೫೦ ಸಾವಿರ ಕಾಣಿಕೆ ನೀಡಿ ಸತ್ಕರಿಸಿದರು.
ವೇದಿಕೆಯ ಮೇಲೆ ರವೀಂದ್ರ ದೇವಗಿರಕರ, ಸ್ನೇಹರಂಗದ ಅಧ್ಯಕ್ಷ ಬಸವರಾಜ ಮಠದ ಉಪಸ್ಥಿತರಿದ್ದರು. ರವೀಂದ್ರ ದೇವಗಿರಕರ ಸ್ವಾಗತಿಸಿದರು. ಡಾ.ವಿಶ್ವನಾಥ ವಂಶಾಕೃಥಮಠ ಪ್ರಾಸ್ತಾವಿಕ ಮಾತನಾಡಿದರು. ಗೋಪನಾಥ ಕಠಾರೆ ವಂದಿಸಿದರು.
ಇಳಕಲ್ಲ ನಗರದ ಪ್ರಸಿದ್ದ ಗಾಯಕರಾದ ಗೋಪಿಕೃಷ್ಣ ಕಠಾರೆ, ಪರುಶರಾಮ ಪವಾರ, ನರಸಿಂಗ ಕಾಟವಾ, ಸುರೇಶ ರಾಯಬಾಗಿ, ಜಗದೀಶ ಕಾಟವಾ, ವಿದ್ಯಾಶ್ರೀ ಗಂಜಿ, ವೃಷ್ಣವಿ ಗೂಳಿ, ಸ್ವಾತಿ ನಾಲತವಾಡ. ಆಮುನಾ ಕಾಟವಾ ಅವರು ಪಿಬಿಶ್ರೀ ಅವರ ಹಾಡುಗಳನ್ನು ಹಾಡಿ ರಂಜಿಸಿದರು. ತೇಜಸ್ವಿನಿ ತೋಟದ ತಂಡದ ನೃತ್ಯ ಜನಮನ ಗೆದ್ದಿತು.