ಆಗಸ್ಟ್‌ 19ಕ್ಕೆ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಪಾದಯಾತ್ರೆ-ರವಿಕಾಂತ ಅಂಗಡಿ

| Published : Aug 09 2025, 12:02 AM IST

ಆಗಸ್ಟ್‌ 19ಕ್ಕೆ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಪಾದಯಾತ್ರೆ-ರವಿಕಾಂತ ಅಂಗಡಿ
Share this Article
  • FB
  • TW
  • Linkdin
  • Email

ಸಾರಾಂಶ

ಹಲವು ದಶಕಗಳಿಂದ ಉಳುಮೆ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡದೇ ಅನ್ಯಾಯ ಮಾಡಿರುವ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ಆ. ೧೯ರಂದು ಪಟ್ಟಣದ ಫಕೀರೇಶ್ವರ ಮಠದಿಂದ ಆರಂಭಗೊಂಡು ಗದಗ ನಗರದ ಜಿಲ್ಲಾಡಳಿತ ಭವನದವರೆಗೆ ಪಾದಯಾತ್ರೆ ಹಾಗೂ ಭವನದ ಮುಂದೆ ಆಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುವುದಾಗಿ ಉತ್ತರ ಕರ್ನಾಟಕ ಮಹಾಸಭಾ ರಾಜ್ಯ ಘಟಕ ಅಧ್ಯಕ್ಷ ರವಿಕಾಂತ ಅಂಗಡಿ ಹೇಳಿದರು.

ಶಿರಹಟ್ಟಿ: ಹಲವು ದಶಕಗಳಿಂದ ಉಳುಮೆ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡದೇ ಅನ್ಯಾಯ ಮಾಡಿರುವ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ಆ. ೧೯ರಂದು ಪಟ್ಟಣದ ಫಕೀರೇಶ್ವರ ಮಠದಿಂದ ಆರಂಭಗೊಂಡು ಗದಗ ನಗರದ ಜಿಲ್ಲಾಡಳಿತ ಭವನದವರೆಗೆ ಪಾದಯಾತ್ರೆ ಹಾಗೂ ಭವನದ ಮುಂದೆ ಆಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುವುದಾಗಿ ಉತ್ತರ ಕರ್ನಾಟಕ ಮಹಾಸಭಾ ರಾಜ್ಯ ಘಟಕ ಅಧ್ಯಕ್ಷ ರವಿಕಾಂತ ಅಂಗಡಿ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವ ಎಲ್ಲ ರೈತರಿಗೆ ಹಕ್ಕುಪತ್ರ ವಿತರಣೆ ಮಾಡಿದ್ದೇವೆ ಎಂದು ಬೊಬ್ಬೆಹೊಡೆಯುವ ರಾಜ್ಯ ಸರ್ಕಾರ ರೈತ ಸಮುದಾಯಕ್ಕೆ ಉತ್ತರ ನೀಡಬೇಕು. ಕೇವಲ ಸರ್ಕಾರಿ ಕಡತಗಳಲ್ಲಿ ಮಾತ್ರ ರೈತರಿಗೆ ಹಕ್ಕುಪತ್ರ ವಿತರಣೆಯಾಗಿದೆ. ಇದನ್ನು ವಿರೋಧಿಸಿ ಎಲ್ಲ ರೈತರ ಜೊತೆಗೂಡಿ ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಸಾಗುವಳಿ ಮಾಡಿರುವ ಎಲ್ಲ ದಾಖಲೆ ನೀಡಿ ಮನವಿ ಮಾಡಿದರೂ ಸಂಬಂಧಿಸಿದ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಉಳುಮೆದಾರರ ಅರ್ಜಿ ಪುನರ್‌ ಪರಿಶೀಲನೆ ಮಾಡಬೇಕು. ಸಮರ್ಪಕ ಅರ್ಜಿ ತಿರಸ್ಕಾರ ಮಾಡುವ ಪದ್ಧತಿ ಕೈಬಿಡಬೇಕು. ರೈತರ ವ್ಯಾಜ್ಯ ಇದ್ದರೆ ಅಧಿಕಾರಿಗಳು ತಕ್ಷಣ ಅದನ್ನು ಸರಿಪಡಿಸಬೇಕು. ರೈತರನ್ನು ಒಕ್ಕೆಲೆಬ್ಬಿಸುವ ಯಾವುದೇ ಪ್ರಯತ್ನ ಸರ್ಕಾರ ಹಾಗೂ ಅಧಿಕಾರಿಗಳಿಂದ ನಡೆಯಬಾರದು ಎಂದು ತಾಕೀತು ಮಾಡಿದರು.

ಅರಣ್ಯ ಭೂಮಿ ಸಾಗುವಳಿ ಮಾಡುವ ರೈತರು ಕೇವಲ ಗದಗ ತಾಲೂಕಿನಲ್ಲಿ ಮಾತ್ರ ಇಲ್ಲ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಇದ್ದಾರೆ ಎನ್ನುವ ವಾಸ್ತವ ಅಂಶ ಜಿಲ್ಲಾ ಉಸ್ತುವಾರಿ ಸಚಿವರು ಮನನ ಮಾಡಿಕೊಳ್ಳಬೇಕು. ಕಪ್ಪತ್ತಗುಡ್ಡ ವನ್ಯಜೀವಿ ಸಂರಕ್ಷಣೆಗೆ ಈ ಹಿಂದೆ ಹತ್ತು ಕಿಮೀ ನಿಗದಿಯಾಗಿತ್ತು. ವಿಪರ್ಯಾಸ ಎಂದರೆ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಸಂರಕ್ಷಿತ ಪ್ರದೇಶವನ್ನು ಕೇವಲ ಒಂದು ಕಿಮಿ ಮಾತ್ರ ನಿಗದಿ ಮಾಡಿದ್ದಾರೆ. ಜನರಿಗೆ ಒಂದು ನ್ಯಾಯ.ರಾಜಕಾರಣಿಗಳಿಗೆ ಒಂದು ನ್ಯಾಯವಾಗಿದೆ. ಆದರೆ ಈ ಕುರಿತು ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.

ಸಚಿವರು ಜಿಮ್ಸ್ ಆಸ್ಪತ್ರೆಗೆ ತಮ್ಮ ತಂದೆಯ ಹೆಸರನ್ನು ಇಡಲು ಸರ್ಕಾರದ ಹಂತದಲ್ಲಿ ಏನೆಲ್ಲ ಹರಸಾಹಸ ಮಾಡಿದರು. ಅದೇ ರೀತಿ ಹಲವು ದಶಕಗಳಿಂದ ಅಕ್ರಮ ಜಮೀನನ್ನು ಸಕ್ರಮ ಮಾಡಿಕೊಡಿ ಎಂದು ಜಿಲ್ಲೆಯ ರೈತರು ಹೋರಾಟ, ಪ್ರತಿಭಟನೆ ಮಾಡಿದರೂ ಯಾವುದೇ ಕ್ರಮ ಇದುವರೆಗೂ ಕೈಗೊಂಡಿಲ್ಲ. ರೈತರ ಸಮಸ್ಯೆ ಹಾಗೂ ಭಾವನೆ ನಿಮಗೆ ಅರ್ಥವಾಗುತ್ತಿಲ್ಲವೇ? ಅರ್ಥವಾದರೂ ಮಾಡುವ ಇಚ್ಛಾಶಕ್ತಿ ಕೊರತೆ ಇದೆಯಾ ಎಂಬುದನ್ನು ಜಿಲ್ಲೆಯ ಜನತೆಗೆ ತಿಳಿಸಬೇಕು ಎಂದು ಹರಿಹಾಯ್ದರು.

ಆ. ೧೯ರಂದು ಫಕೀರೇಶ್ವರ ಮಠದಿಂದ ಆರಂಭಗೊಂಡು ಸೊರಟೂರ ಗ್ರಾಮದ ಮೂಲಕ ನಾಗಾವಿ, ಬೆಳದಡಿ ಮೂಲಕ ಜಿಲ್ಲಾಡಳಿತ ಭವನದಲ್ಲಿ ಸಮಾರೋಪಗೊಳ್ಳುತ್ತದೆ. ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ನಮ್ಮ ನ್ಯಾಯಯುತ ಬೇಡಿಕೆ ಈಡೇರುವವರೆಗೂ ಆಹೋರಾತ್ರಿ ಹೋರಾಟ ನಡೆಯುತ್ತದೆ. ಈ ಹೋರಾಟದಲ್ಲಿ ಜಿಲ್ಲೆಯ ಎಲ್ಲ ರೈತರು, ಪ್ರಗತಿಪರ ಹೋರಾಟಗಾರರು, ಎಲ್ಲ ರಾಜಕೀಯ ಮುಖಂಡರು ಹಾಗೂ ಅರಣ್ಯ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ಎಲ್ಲ ರೈತರು ಭಾಗವಹಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಚಂಬಣ್ಣ ಬೆಂತೂರ, ಮಂಜುನಾಥ ಅರೆಪಲ್ಲಿ, ಪರಶುರಾಮ ಕಟಗಿ, ಚಿನ್ನಪ್ಪ ವಡ್ಡರ, ಶ್ರೀನಿವಾಸ ಬಾರಬಾರ, ಈರಣ್ಣ ಚವ್ಹಾಣ, ಶೇಖಪ್ಪ ಲಮಾಣಿ, ಸಂತೋಷ ಲಮಾಣಿ, ಧರ್ಮಣ್ಣ ಚವ್ಹಾಣ, ಈಶ್ವರಗೌಡ ಪಾಟೀಲ ಸೇರಿ ಅನೇಕರು ಇದ್ದರು.