ಸಾರಾಂಶ
ಪಟ್ಟಣ ಸೇರಿ ತಾಲೂಕಿನಲ್ಲಿ ಯೂರಿಯಾ ಗೊಬ್ಬರಕ್ಕಾಗಿ ಬೇಡಿಕೆ ಹೆಚ್ಚಾಗಿದ್ದು, ರೈತರು ಬೆಳಗ್ಗೆ ೪ ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ರಸಗೊಬ್ಬರಕ್ಕಾಗಿ ಅಂಗಡಿಗಳ ಮುಂದೆ ನಿಲ್ಲುವ ಸ್ಥಿತಿ ನಿರ್ಮಾಣವಾಗಿದ್ದು, ವಾಹನ ದಟ್ಟಣೆ ಹಾಗೂ ರೈತರ ನಿಯಂತ್ರಣಕ್ಕಾಗಿ ಪೊಲೀಸ್ ಸಿಬ್ಬಂದಿ ಹರಸಾಹಸ ಪಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಗಜೇಂದ್ರಗಡ: ಪಟ್ಟಣ ಸೇರಿ ತಾಲೂಕಿನಲ್ಲಿ ಯೂರಿಯಾ ಗೊಬ್ಬರಕ್ಕಾಗಿ ಬೇಡಿಕೆ ಹೆಚ್ಚಾಗಿದ್ದು, ರೈತರು ಬೆಳಗ್ಗೆ ೪ ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ರಸಗೊಬ್ಬರಕ್ಕಾಗಿ ಅಂಗಡಿಗಳ ಮುಂದೆ ನಿಲ್ಲುವ ಸ್ಥಿತಿ ನಿರ್ಮಾಣವಾಗಿದ್ದು, ವಾಹನ ದಟ್ಟಣೆ ಹಾಗೂ ರೈತರ ನಿಯಂತ್ರಣಕ್ಕಾಗಿ ಪೊಲೀಸ್ ಸಿಬ್ಬಂದಿ ಹರಸಾಹಸ ಪಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಸ್ಥಳೀಯ ಜೋಡು ರಸ್ತೆಯಲ್ಲಿ ರಸಗೊಬ್ಬರ ಅಂಗಡಿಯ ಮುಂದೆ ಬೆಳಗ್ಗೆ ೪ ಗಂಟೆಯಿಂದಲೇ ೩೦೦ಕ್ಕೂ ಅಧಿಕ ಅಧಿಕ ರೈತರು ಹಾಗೂ ಮಹಿಳೆಯರು ಯೂರಿಯಾ ಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ಪ್ರತಿದಿನ ಒಂದಿಲ್ಲೊಂದು ಅಂಗಡಿಗಳ ಮುಂದೆ ಯೂರಿಯಾ ಗೊಬ್ಬರಕ್ಕಾಗಿ ಪರದಾಡುತ್ತಿರುವುದು ಸಹಜವಾಗಿದೆ.ಪಟ್ಟಣದ ಜೋಡು ರಸ್ತೆಯಲ್ಲಿ ರಸಗೊಬ್ಬರ ಮಾರಾಟ ಅಂಗಡಿಯ ಮುಂದೆ ಸರತಿ ಸಾಲಿನಲ್ಲಿ ೩೦೦ಕ್ಕೂ ಅಧಿಕ ರೈತರು ನಿಂತಿದ್ದರು. ಪಟ್ಟಣದ ಜೋಡು ರಸ್ತೆ ಸದಾ ಜನದಟ್ಟಣೆ ಹಾಗೂ ವಾಹನದಟ್ಟನೆಯಿಂದ ಕೂಡಿರುತ್ತದೆ. ಶುಕ್ರವಾರ ವರಮಹಾಲಕ್ಷಿ ಹಬ್ಬ ಇದ್ದರಿಂದ ಮತ್ತಷ್ಟು ವಾಹನ ದಟ್ಟಣೆ ನಿರ್ಮಾಣವಾಗಿತ್ತು. ಪರಿಣಾಮ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಹಾಗೂ ಗೃಹ ರಕ್ಷಕ ಸಿಬ್ಬಂದಿ ಸುಗಮ ಸಂಚಾರ ಜತೆಗೆ ಸಮರ್ಪಕ ಯೂರಿಯಾ ಗೊಬ್ಬರ ವಿತರಣೆಗೆ ಹರಸಾಹಸ ಪಡುತ್ತಿದ್ದದ್ದು ಕಂಡು ಬಂದಿತು.ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದ್ದು ಬಿತ್ತನೆ ಕಾರ್ಯ ಮುಗಿಸಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಇರುವ ರೈತ ಸಮೂಹಕ್ಕೆ ಯೂರಿಯಾ ಗೊಬ್ಬರ ಕೊರತೆಯಿದೆ ಎದುರಾಗಿದೆ ಎಂಬ ದೂರುಗಳಿವೆ. ರಸಗೊಬ್ಬರವನ್ನು ಎಂಆರ್‌ಪಿ ದರಕ್ಕಿಂತ ಹೆಚ್ಚಿಗೆ ಮಾರಿದರೆ ಪರವಾನಗಿ ರದ್ದು ಮಾಡುತ್ತೇವೆ ಎಂಬ ಕೃಷಿ ಇಲಾಖೆಯ ಎಚ್ಚರಿಕೆಯನ್ನು ಗಾಳಿಗೆ ತೂರಿದಂತೆ ಕಾಣುತ್ತಿದೆ. ಪರಿಣಾಮ ತಾಲೂಕಿನಲ್ಲಿ ಕೆಲವರು ಎಂಆರ್‌ಪಿ ದರ ಮೀರಿ ಹಾಗೂ ಲಿಂಕ್ ಮಾಡಬೇಕು ಎಂಬ ಭೂತದ ಹೆದರಿಕೆ ಮುಂದಿಟ್ಟು ರೈತರನ್ನು ಸಂಕಷ್ಟಕ್ಕೆ ದೂಡಲೆತ್ನಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ರೈತರಿಗೆ ಸಮರ್ಪಕ ಯೂರಿಯಾ ಗೊಬ್ಬರ ಲಭ್ಯವಾಗದಿರುವುದರ ಹಿಂದೆ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಎನ್ನುವ ಆರೋಪಗಳಿದ್ದು ಸಬೂಬು ನೀಡುವ ನಿಟ್ಟಿನಲ್ಲಿ ಕೆಲ ಘಟನೆಗಳು ಪಟ್ಟಣದಲ್ಲಿ ನಡೆಯುತ್ತಿವೆ.ತಾಲೂಕಿನಲ್ಲಿ ಯೂರಿಯಾ ಗೊಬ್ಬರ ಸಮರ್ಪಕವಾಗಿ ವಿತರಣೆಯಾಗದ ಪರಿಣಾಮ ಗೊಬ್ಬರಕ್ಕಾಗಿ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬೆಳಗ್ಗೆಯಿಂದಲೇ ಅಂಗಡಿಗಳ ಮುಂದೆ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಉತ್ತಮ ಫಸಲು ಬಂದಾಗ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುವುದಿಲ್ಲ. ಈ ಬಾರಿ ಉತ್ತಮ ಮಳೆಯಾಗಿದೆ. ಸಮೃದ್ಧ ಫಸಲಿನ ನಿರೀಕ್ಷೆಯಲ್ಲಿದ್ದೇವೆ. ಆದರೆ ಯೂರಿಯಾ ಗೊಬ್ಬರ ಸಮರ್ಪಕ ಸಿಗುತ್ತಿಲ್ಲ ಎಂದು ಸರತಿ ಸಾಲಿನಲ್ಲಿ ನಿಂತ ರೈತರು ಅಸಮಾಧಾನ ವ್ಯಕ್ತಪಡಿಸಿದರು.