ಸಾರಾಂಶ
ರಾಜ್ಯಮಟ್ಟದ ವಕೀಲರ ಸಮಾವೇಶದ ಅಂಗವಾಗಿ ಈಗಾಗಲೇ ರಾಜ್ಯದ ಎಲ್ಲ ಕಡೆ ಪಂಚಮಸಾಲಿ ನೂತನ ಘಟಕಗಳನ್ನು ಮಾಡಲಾಗುತ್ತಿದೆ. ಹಿರಿಯ ವಕೀಲರನ್ನು ಸಲಹಾ ಸಮಿತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.
ಹುಬ್ಬಳ್ಳಿ:
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬೇಡಿಕೆಗೆ ಶಾಸಕಾಂಗ ಸ್ಪಂದಿಸದ ಕಾರಣ ಕಾನೂನಾತ್ಮಕ ಬೆಂಬಲ ಪಡೆಯುವ ನಿಟ್ಟಿನಲ್ಲಿ ಸೆ. 22ರಂದು ಬೆಳಗಾವಿ ಗಾಂಧಿಭವನದಲ್ಲಿ ಲಿಂಗಾಯತ ಪಂಚಮಸಾಲಿ ವಕೀಲರ ಮಹಾ ಪರಿಷತ್ ವತಿಯಿಂದ ಪ್ರಥಮ ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಸತತ ಮೂರು ವರ್ಷಗಳಿಂದ ಪಂಚಮಸಾಲಿ ಮೀಸಲಾತಿಗೆ ನಿರಂತರ ಹೋರಾಟ ನಡೆಸಿದರೂ, ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದ ಕಾರಣ, ಇದೀಗ 7ನೇ ಹಂತದ ಹೋರಾಟಕ್ಕೆ ಮುಂದಾಗಿದ್ದೇವೆ. ಸಮಾಜದ ವಕೀಲರೆಲ್ಲ ಒಟ್ಟಾಗಿ ಈ ಹೋರಾಟಕ್ಕೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ರಾಜ್ಯಮಟ್ಟದ ವಕೀಲರ ಸಮಾವೇಶದ ಅಂಗವಾಗಿ ಈಗಾಗಲೇ ರಾಜ್ಯದ ಎಲ್ಲ ಕಡೆ ಪಂಚಮಸಾಲಿ ನೂತನ ಘಟಕಗಳನ್ನು ಮಾಡಲಾಗುತ್ತಿದೆ. ಹಿರಿಯ ವಕೀಲರನ್ನು ಸಲಹಾ ಸಮಿತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಬೆಳಗಾವಿ ಸಮಾವೇಶದಲ್ಲಿ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದಿಂದ 5 ಸಾವಿರ ವಕೀಲರು ಭಾಗವಹಿಸುವರು. ವಕೀಲರ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ವಕೀಲ ಶಂಕರಗೌಡ ನಾಗನಗೌಡರ, ಚಂದ್ರಶೇಖರ ನೇಗಿನಹಾಳ, ಶಶಿಶೇಖರ ಡಂಗನವರ, ರಾಜು ಕೊಟಗಿ, ವೈ.ಯು ಮುದಿಗೌಡರ, ಜಿ.ಜಿ. ದ್ಯಾವನಗೌಡ್ರ, ಜಿ.ಎಫ್. ಸಂಕನ್ನವರ, ಶಶಿಧರ ಕೋಟಗಿ, ಪ್ರಕಾಶ ಭಾವಿಕಟ್ಟಿ, ಚಂದ್ರಶೇಖರ ಮೆಣಸಿನಕಾಯಿ ಇದ್ದರು.ಇಂದು ಸಿಎಂಗೆ ಮನವಿ:
ಕಲಬುರಗಿಯಲ್ಲಿ ಸೆ. 17ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲು ಸಿಎಂ ಸಿದ್ದರಾಮಯ್ಯನವರು ಆಗಮಿಸುತ್ತಿದ್ದು, ಅವರಿಗೆ ಸಮಾಜದ ಮುಖಂಡರು ಹಾಗೂ ವಕೀಲರ ಸಮ್ಮುಖದಲ್ಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು ಎಂದು ಶ್ರೀಗಳು ಹೇಳಿದರು.