ಭಾರತೀನಗರ: ಗಣಪತಿ ಪ್ರಸಾದ ಸ್ವೀಕರಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಅಜ್ಜಿ ಮತ್ತು ಮೊಮ್ಮಗ ಮೃತಪಟ್ಟಿರುವ ಘಟನೆ ಮದ್ದೂರು ತಾಲೂಕಿನ ಹುಣ್ಣನದೊಡ್ಡಿ ಬಳಿ ಭಾನುವಾರ ರಾತ್ರಿ ಸಂಭವಿಸಿದೆ. ಗ್ರಾಮದ ನಿವಾಸಿ ಸಾಕಮ್ಮ (65), ಒಂದು ವರ್ಷದ ಮೊಮ್ಮಗ ಧನಿಕ ಎಸ್.ಗೌಡ ಸಾವನ್ನಪ್ಪಿದವರು. ಗಾಯಗೊಂಡಿರುವ ಮೂರು ವರ್ಷದ ನಂದನ್.ಎಸ್ ಗೌಡನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನನ್ನು ಭಾನುವಾರ ಸಂಜೆ ವಿಸರ್ಜಿಸಲಾಗುತ್ತಿತ್ತು. ಈ ವೇಳೆ ಭಕ್ತರಿಗೆ ಪ್ರಸಾದ ವಿತರಣೆ ನಡೆಯುತ್ತಿತ್ತು. ಇದೇ ಗ್ರಾಮದ ಶಂಕರ್ ಮತ್ತು ಅಂಜಲಿ ದಂಪತಿ ಪುತ್ರರಾದ ಧನಿಕ ಮತ್ತು ನಂದನ್ ಅವರು ತಮ್ಮ ಅಜ್ಜಿ ಜೊತೆ ಪ್ರಸಾದ ಸ್ವೀಕರಿಸಲು ತೆರಳಿದ್ದರು. ಅಜ್ಜಿ ಸಾಕಮ್ಮ, ಒಂದು ವರ್ಷದ ಮೊಮ್ಮಗುವನ್ನು ಎತ್ತಿಕೊಂಡು ಮತ್ತೊಂದು ಮಗುವನ್ನು ನಡೆಸಿಕೊಂಡು ಪ್ರಸಾದ ಸ್ವೀಕರಿಸಿ ರಸ್ತೆ ದಾಟುತ್ತಿದ್ದಾಗ ಮದ್ದೂರು- ಮಳವಳ್ಳಿ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ಮೇಲಕ್ಕೆ ಎಸೆಯಲ್ಪಟ್ಟ ಮೊಮ್ಮಗು, ಅಜ್ಜಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಂದು ಮಗು ನಂದನ್ ಕೂಡಾ ಗಾಯಗೊಂಡಿದೆ. ಚಾಲಕ ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ. ಈ ಹೃದಯ ವಿದ್ರಾವಕ ಘಟನೆಯನ್ನು ಕಂಡ ಗ್ರಾಮಸ್ಥರು ಕಂಬನಿ ಮಿಡಿದರೆ, ಪ್ರಸಾದ ಸ್ವೀಕರಿಸಿ ಹಿಂದೆ ಬರುತ್ತಿದ್ದ ಮಗುವಿನ ತಾಯಿ ಕೂಡ ಶಾಕ್‌ಗೊಳಗಾಗಿ ಕುಸಿದು ಬಿದ್ದಿದ್ದಾರೆ. ಈ ಸಂಬಂಧ ಸೋಮವಾರ ಬೆಳಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರಿನ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಕಾರು ಡಿಕ್ಕಿ: ಪಾದಚಾರಿ ಅಜ್ಜಿ, ಒಂದು ವರ್ಷದ ಮಗು ಸಾವು
ಅಜ್ಜಿ ಸಾಕಮ್ಮ, ಒಂದು ವರ್ಷದ ಮೊಮ್ಮಗುವನ್ನು ಎತ್ತಿಕೊಂಡು ಮತ್ತೊಂದು ಮಗುವನ್ನು ನಡೆಸಿಕೊಂಡು ಪ್ರಸಾದ ಸ್ವೀಕರಿಸಿ ರಸ್ತೆ ದಾಟುತ್ತಿದ್ದಾಗ ಮದ್ದೂರು- ಮಳವಳ್ಳಿ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.