ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಕಳೆದ ಮಂಗಳವಾರ ಬೆಳಗಾವಿಯ ಸುವರ್ಣಸೌಧದ ಮುಂದೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಒದಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಪೊಲೀಸರು ಲಾಟಿ ಪ್ರಹಾರ ಮಾಡಿ ಅನೇಕ ಮುಖಂಡರ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಅಥಣಿ ಪಟ್ಟಣದಲ್ಲಿ ಪಂಚಮಸಾಲಿ ಸಮುದಾಯದ ಮುಖಂಡರು ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡ ದೃಶ್ಯ ಕಂಡು ಬಂತು.ಪಟ್ಟಣದ ಶಿವಯೋಗಿಗಳ ವೃತ್ತದಲ್ಲಿ ಗುರುವಾರ ಪಾಲ್ಗೊಂಡ ಪಂಚಮಸಾಲಿ ಸಮುದಾಯದ ಮುಖಂಡರಲ್ಲಿ ಮಾಜಿ ಶಾಸಕ ಮಹೇಶ ಕುಮಟಳ್ಳಿ ಬೆಂಬಲಿತ ಬಿಜೆಪಿ ಮುಖಂಡ ಹಾಗೂ ಚಿಕ್ಕೋಡಿ ಜಿಲ್ಲಾಧ್ಯಕ್ಷ ಧರೇಪ್ಪ ಠಕ್ಕಣ್ಣವರ ಹಾಗೂ ತಾಲೂಕು ಅಧ್ಯಕ್ಷ ಅವಿನಾಶ ನಾಯಕ ನೇತೃತ್ವದಲ್ಲಿ ಪ್ರತಿಭಟನೆಗೆ ಸಜ್ಜಾಗುತಿದಂತೆ ಇದೇ ಸಂದರ್ಭದಲ್ಲಿ ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಬೆಂಬಲಿತ ಕಾಂಗ್ರೆಸ್ ಮುಖಂಡ ಹಾಗೂ ಅಥಣಿ ತಾಲೂಕು ಪಂಚಮಸಾಲಿ ಸೇವಾ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ ನೇತೃತ್ವದಲ್ಲಿ ಅನೇಕ ಮುಖಂಡರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಎರಡು ಬಣದ ಮುಖಂಡರು ಪಕ್ಷಭೇದ ಮರೆತು ಪಂಚಮಸಾಲಿ ಸಮುದಾಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಪ್ರತಿಭಟಿಸಿದ್ದು ವಿಶೇಷವಾಗಿತ್ತು. ಪ್ರತಿಭಟನಾಕಾರರು ಜತ್ತ -ಜಂಬೋಟ ಮತ್ತು ಜೇವರ್ಗಿ ಸಂಕೇಶ್ವರ ರಾಜ್ಯ ಹೆದ್ದಾರಿಗಳು ಹಾದು ಹೋಗುವ ಶಿವಯೋಗಿ ವೃತ್ತದಲ್ಲಿ ಗಂಟೆಗಳ ಕಾಲ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಈ ವೇಳೆ ಪಂಚಮಸಾಲಿ ಸಮುದಾಯದ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಧರೇಪ್ಪ ಠಕ್ಕಣವರ ಮಾತನಾಡಿ, ಪಂಚಮಸಾಲಿ ಸಮುದಾಯದ ಪ್ರಥಮ ಜಗದ್ಗುರು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ನಾವು ಶಾಂತ ರೀತಿಯಿಂದ ಹೋರಾಟ ಮಾಡುವ ಮೂಲಕ ನಮ್ಮ ಸಮುದಾಯಕ್ಕೆ ರಾಜ್ಯ ಸರ್ಕಾರ 2ಎ ಮೀಸಲಾತಿಯನ್ನ ಘೋಷಣೆ ಮಾಡಬೇಕೆಂದು ಆಗ್ರಹಿಸುತ್ತಿದ್ದೇವೆ. ಚಳಿಗಾಲ ಅಧಿವೇಶನದಲ್ಲಿ ಈ ನಿರ್ಣಯವನ್ನು ಕೈ ಕೊಳ್ಳುವಂತೆ ನಾವು ಸರ್ಕಾರವನ್ನು ಆಗ್ರಹಿಸುತ್ತಿದ್ದಾಗ ರಾಜ್ಯ ಸರ್ಕಾರ ಹೋರಾಟಗಾರರ ಮೇಲೆ ಪೊಲೀಸ್‌ರಿಂದ ಗುಂಡಾ ರೀತಿಯಾಗಿ ವರ್ತನೆ ಮಾಡಿಸಿದೆ. ನಮ್ಮ ಸಮುದಾಯದ ಮುಖಂಡರ ಮೇಲೆ ಹಲ್ಲೆ ಮಾಡಿರುವ ಪೊಲೀಸ್ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಮತ್ತು ಸರ್ಕಾರ ಕೂಡಲೇ ಸಮುದಾಯದ ಜನರಲ್ಲಿ ಕ್ಷಮೆ ಕೋರಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಅವಿನಾಶ ನಾಯಿಕ, ಪಂಚಮಸಾಲಿ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಪಾಟೀಲ, ನ್ಯಾಯವಾದಿ ಡಿ.ಎಸ್.ಠಕ್ಕಣ್ಣವರ, ಬಿ.ಆರ್.ಗಂಗಪ್ಪನವರ, ರಾಮನಗೌಡ ಪಾಟೀಲ, ಶಿವಾನಂದ ಸಿಂಧೂರ, ರವಿ ಪೂಜಾರಿ, ಉಮೇಶ ಬಂಟೂಡ್ಕರ, ಡಾ.ಪ್ರಕಾಶ ಕುಮಟಳ್ಳಿ ಸೇರಿದಂತೆ ಅನೇಕ ಮುಖಂಡರು ಮತ್ತು ನ್ಯಾಯವಾದಿಗಳು ಮಾತನಾಡಿ, ನಮ್ಮ ಸಮಾಜದ ಮೀಸಲಾತಿಯನ್ನು ಕಾನೂನು ಪ್ರಕಾರ ಕೇಳುತ್ತಿದ್ದೇವೆ. ಆದರೆ, ಸರ್ಕಾರ ನಮ್ಮ ಹೋರಾಟವನ್ನು ಕಾನೂನಿನ ವಿರುದ್ಧವಾಗಿ ಹತ್ತಿಕ್ಕುತ್ತಿದೆ. ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡುವುದು ಯಾವ ಸಂವಿಧಾನದಲ್ಲಿ ಬರೆದಿದೆ?, ನಾವು ಸಂವಿಧಾನದ ಪ್ರಕಾರ ಮೀಸಲಾತಿ ಬೇಡಿಕೆ ಇಟ್ಟಿದ್ದೇವೆ. ನಮ್ಮ ಬೇಡಿಕೆಯನ್ನು ಸರ್ಕಾರ ಮಾನ್ಯ ಮಾಡಬೇಕು. ಇಲ್ಲದಿದ್ದರೇ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಈ ವೇಳೆ ಮುಖಂಡರಾದ ಮುತ್ತಣ್ಣ ಸಂತಿ, ಬಾಬಾಗೌಡ ಪಾಟೀಲ, ಮಲ್ಲಪ್ಪ ಹಂಚಿನಾಳ, ನಾನಾಸಾಬ ಅವತಾಡೆ, ಸಿದ್ದು ಪಾಟೀಲ, ಅಪ್ಪಾಸಾಬ ಅವಟಿ , ಮುರಘೇಶ ಕುಮಠಳ್ಳಿ, ಸಂತೋಷ ಕಕಮರಿ, ಶಿವು ಸಿಂದೂರ, ಶಿವು ನೇಮಗೌಡ, ಸಿದ್ದು ಹಂಡಗಿ, ಚಿದಾನಂದ ಪಾಟೀಲ, ಪರಶುರಾಮ ನಂದೇಶ್ವರ, ಸಂಜೀವ ವಾಂಗಿ, ಆನಂದ ಹಿಪ್ಪರಗಿ, ಪರಮಾನಂದ ಧರಿಗೌಡ, ಅಲಗೌಡ ಪಾಟೀಲ, ವಿಜಯ ನೇಮಗೌಡ, ಮಹಾಂತೇಶ ಇಂಗಳಿ, ಶಿವಲಿಂಗ ಗಲಗಲಿ ಸೇರಿದಂತೆ ಅನೇಕ ಪಂಚಮಶಾಲಿ ಮುಖಂಡರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಅಥಣಿ ವಲಯದ ಡಿವೈಎಸ್ಪಿ ಪ್ರಶಾಂತ ಮುನ್ನೊಳ್ಳಿ, ಸಿಪಿಐ ಸಂತೋಷ್ ಹಳ್ಳೂರ, ಅಥಣಿ ಪಿಎಸೈ ಗಿರಿಮಲ್ಲಪ್ಪ ಉಪ್ಪಾರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. ಅಥಣಿ ಪಟ್ಟಣದಲ್ಲಿ ಈ ಹೋರಾಟದಿಂದ ಕೆಲ ಹೊತ್ತು ಟ್ರಾಫಿಕ್ ಸಮಸ್ಯೆ ಎದುರಾಗಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾದ ದೃಶ್ಯ ಕಂಡು ಬಂತು.