ಸಾರಾಂಶ
ಸಮಾಜದ ಸ್ವಾಮೀಜಿಗಳಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕೆಲವೊಂದು ರಾಜಕಾರಣಿಗಳಿಗೆ ನಾವು ಒಂದಾಗಬಾರದು ಎಂಬ ಆಶಯವು ಇದೆ. ಆದರೆ, ಪಂಚಮಸಾಲಿ ಸಮಾಜದ ಹಿತಕ್ಕಾಗಿ ಸ್ವಾಮೀಜಿಗಳು ಒಂದಾಗಲೂ ಬದ್ಧರಾಗಿದ್ದೇವೆ ಎಂದು ವಚನಾನಂದಶ್ರೀ ಸ್ವಾಮೀಜಿ ಹೇಳಿದರು.
ಕೊಪ್ಪಳ:
ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳಲ್ಲಿ ಯಾವುದೇ ಗೊಂದಲವಿಲ್ಲ. ನಾವು ಒಂದಾಗಲು ತಯಾರಾಗಿದ್ದೇವೆ ಎಂದು ವಚನಾನಂದಶ್ರೀ ಹೇಳಿದರು.ಪಂಚಮ ಸಮುದಾಯ ಭವನದಲ್ಲಿ ಸೆ.17ರಂದು ಬೆಂಗಳೂರಿನಲ್ಲಿ ಸಮಾಜದ ವತಿಯಿಂದ ನಡೆಯುವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮಾಜಕ್ಕೆ ಸಂಬಂಧಿಸಿದಂತೆ 80 ಸ್ವಾಮೀಜಿಗಳು ಒಂದಾಗಿ ಸಮಾಜ ಅಭಿವೃದ್ಧಿಪಡಿಸುವುದಕ್ಕೆ ಆದ್ಯತೆ ನೀಡಲಾಗುವುದು. ಜಾತಿ ಗಣತಿಯಲ್ಲಿ ಯಾವ ಅಂಶ ಬರೆಯಿಸಬೇಕು ಎಂಬುದರ ಚರ್ಚೆಗೆ ಕೂಡಲಸಂಗಮದ ಬಸವಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಕರೆಯೋಣ. ಇದಕ್ಕೆ ನನ್ನ ಯಾವುದೇ ತಕರಾರಿಲ್ಲ ಎಂದರು.
ಈ ವೇಳೆ ಸಮುದಾಯದ ಕೆಲ ಮುಖಂಡರು, ಮೊದಲು ನೀವಿಬ್ಬರು ಒಂದಾಗಿ, ನಿಮ್ಮಲ್ಲಿರುವ ಗೊಂದಲದಿಂದ ಸಮಾಜ ಅಭಿವೃದ್ಧಿಯಾಗುತ್ತಿಲ್ಲ. ಮೊದಲು ನಿಮ್ಮ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಿ ಎಂದು ಖಾರವಾಗಿ ಹೇಳಿದರು. ಇದಕ್ಕೆ ಆಕ್ಷೇಪಿಸಿದ ಹಲವರು, ಇದು ಜಾತಿ ಕಲಂನಲ್ಲಿ ಏನು ಬರೆಯಿಸಬೇಕು ಎಂಬುದರ ಕುರಿತ ಚರ್ಚೆಯ ಸಭೆ. ಅದನ್ನಷ್ಟೆ ಮಾತನಾಡಿ ಎಂದರು.ಬಳಿಕ ಮಾತನಾಡಿದ ವಚನಾನಂದಶ್ರೀ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕೆಲವೊಂದು ರಾಜಕಾರಣಿಗಳಿಗೆ ನಾವು ಒಂದಾಗಬಾರದು ಎಂಬ ಆಶಯವು ಇದೆ. ಆದರೆ, ಪಂಚಮಸಾಲಿ ಸಮಾಜದ ಹಿತಕ್ಕಾಗಿ ಸ್ವಾಮೀಜಿಗಳು ಒಂದಾಗಲೂ ಬದ್ಧರಾಗಿದ್ದೇವೆ ಎಂದು ಪುನರುಚ್ಚರಿಸಿದರು.ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿ, ಎಲ್ಲರೂ ಒಟ್ಟಾಗಿ ಹೋಗೋಣ, ಗೊಂದಲಗಳನ್ನು ಸ್ವಾಮೀಜಿಗಳ ಮೇಲೆ ಹಾಕಿ ಸಮಾಜ ಬಲಿಪಶು ಮಾಡುವುದು ಬೇಡ. ಸೆ. 17ರಂದು ನಡೆಯುವ ಸಭೆಗೆ ಕೂಡಲಸಂಗಮ ಸ್ವಾಮೀಜಿಗಳನ್ನು ಕರೆಯಲಾಗಿದೆ. ಮೊದಲು ಸಮೀಕ್ಷೆಯ ಭಾಗವಾಗಿ ಜಾತಿ ಕಲಂನಲ್ಲಿ ಯಾವ ರೀತಿ ಬರೆಯಬೇಕು ಎಂಬುದು ಸ್ಪಷ್ಟವಾಗಲಿ ಎಂದರು.